Headlines

ಅಜಯ್ ದೇವಗನ್​ಗಿಂತ ಅಕ್ಷಯ್ ಕುಮಾರ್ ಸಂಬಳ ಹೆಚ್ಚು? ಸ್ಪಷ್ಟನೆ ನೀಡಿದ ಚಿತ್ರತಂಡ – Kannada News | Akshay Kumar Salary Rohit shetty Picturez denies rumors of massive fee for Golmaal 5

ಬಾಲಿವುಡ್‌ನ ಅತ್ಯಂತ ಯಶಸ್ವಿ ಕಾಮಿಡಿ ಫ್ರಾಂಚೈಸಿ ‘ಗೋಲ್‌ಮಾಲ್’ 5ನೇ ಭಾಗಕ್ಕೆ (Golmaal 5) ಅಕ್ಷಯ್ ಕುಮಾರ್ ಸೇರ್ಪಡೆಯಾಗಿರುವುದು ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ, ಈ ಚಿತ್ರದಲ್ಲಿ ನಟಿಸಲು ಅಕ್ಷಯ್ ಕುಮಾರ್ (Akshay Kumar) ಅವರು ಅಜಯ್ ದೇವಗನ್ ಅವರಿಗಿಂತಲೂ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ ಎಂಬ ವದಂತಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದವು. ಸದ್ಯ ಈ ಎಲ್ಲಾ ಲೆಕ್ಕಾಚಾರದ ಸುದ್ದಿಗಳಿಗೆ ಚಿತ್ರದ ನಿರ್ಮಾಣ ಸಂಸ್ಥೆಯಾದ ‘ರೋಹಿತ್ ಶೆಟ್ಟಿ ಪಿಕ್ಚರ್ಸ್’ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದೆ.

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಅವರು ಕೇವಲ 18ರಿಂದ 22ದಿನಗಳ ಚಿತ್ರೀಕರಣಕ್ಕಾಗಿ ಬರೋಬ್ಬರಿ 35ರಿಂದ 40 ಕೋಟಿ ರೂಪಾಯಿಗಳ ಭಾರಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೆ, ಇದು ಈ ಚಿತ್ರಕ್ಕಾಗಿ ನಟ ಅಜಯ್ ದೇವಗನ್ ಅವರು ಪಡೆದಿರುವ ಸಂಭಾವನೆಗಿಂತಲೂ ಹೆಚ್ಚು ಎಂದು ವರದಿಯಾಗಿತ್ತು.

ಈ ವದಂತಿಗಳು ವ್ಯಾಪಕವಾಗಿ ಹರಡುತ್ತಿದ್ದಂತೆ ಎಚ್ಚೆತ್ತುಕೊಂಡ ‘ರೋಹಿತ್ ಶೆಟ್ಟಿ ಪಿಕ್ಚರ್ಸ್’ ಸಂಸ್ಥೆಯ ವಕ್ತಾರರು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಗೋಲ್‌ಮಾಲ್ 5 ಚಿತ್ರದ ವಾಣಿಜ್ಯ ವ್ಯವಹಾರಗಳು ಮತ್ತು ವಿಶೇಷವಾಗಿ ಅಕ್ಷಯ್ ಕುಮಾರ್ ಅವರ ಸಂಭಾವನೆಗೆ ಸಂಬಂಧಿಸಿದಂತೆ ಹಲವು ಕಾಲ್ಪನಿಕ ವರದಿಗಳು ಹರಿದಾಡುತ್ತಿವೆ. ಈ ಎಲ್ಲಾ ಹಕ್ಕುಗಳು ಅಥವಾ ವರದಿಗಳು ಸಂಪೂರ್ಣವಾಗಿ ಆಧಾರರಹಿತ, ನಿಖರವಲ್ಲದ ಮತ್ತು ಕೇವಲ ಊಹಾಪೋಹಗಳಿಂದ ಕೂಡಿವೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಸಿನಿಮಾದ ವಾಣಿಜ್ಯ ಒಪ್ಪಂದಗಳು ಅತ್ಯಂತ ಗೌಪ್ಯವಾಗಿದ್ದು, ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಮುಖ ವ್ಯಕ್ತಿಗಳು ಅಥವಾ ಸಂಸ್ಥೆಗಳು ಇದನ್ನು ಎಂದಿಗೂ ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲ. ಸದ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಅಂಕಿಅಂಶಗಳು ಅಥವಾ ಹಣಕಾಸಿನ ವಿವರಗಳು ಕೇವಲ ವದಂತಿಗಳಾಗಿವೆ. ನಾವು ನಿಮ್ಮೆಲ್ಲರ ಮೇಲಿನ ಅಪಾರ ಪ್ರೀತಿಯಿಂದ ಈ ಸಿನಿಮಾವನ್ನು ಮಾಡುತ್ತಿದ್ದೇವೆ. ಈ ನಮ್ಮ ಪ್ರಯಾಣಕ್ಕೆ ನಿಮ್ಮ ಬೆಂಬಲವಷ್ಟೇ ನಮಗೆ ಮುಖ್ಯ’ ಎಂದು ವಿನಂತಿಸಿದ್ದಾರೆ.

ಇದನ್ನೂ ಓದಿ: ‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ನಿರ್ದೇಶಕ ರೋಹಿತ್ ಶೆಟ್ಟಿ ಅವರ ಅತ್ಯಂತ ಯಶಸ್ವಿ ಕಾಮಿಡಿ ಸರಣಿ ಇದಾಗಿದ್ದು, ಪ್ರೇಕ್ಷಕರು ‘ಗೋಲ್‌ಮಾಲ್ 5’ ಅಪ್‌ಡೇಟ್‌ಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಅಜಯ್ ದೇವಗನ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ಶರ್ಮನ್ ಜೋಶಿ ಮತ್ತು ಕುನಾಲ್ ಖೇಮು ಸೇರಿದಂತೆ ದೊಡ್ಡ ತಾರಾಗಣವೇ ಇದೆ.

ರೋಹಿತ್ ಶೆಟ್ಟಿ ಅವರು ತಮ್ಮ 52ನೇ ಜನ್ಮದಿನದ ಸಂದರ್ಭದಲ್ಲಿ ‘ಗೋಲ್‌ಮಾಲ್ 5’ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದ್ದರು. ಇದೇ ವೇಳೆ ಚಿತ್ರದ ಒಂದು ಮೇಕಿಂಗ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಅಕ್ಷಯ್ ಕುಮಾರ್ ಅವರ ಬೋಳು ತಲೆ ಲುಕ್ ನೋಡಿ ಪ್ರೇಕ್ಷಕರಿಗೆ ಅಚ್ಚರಿ ಆಗಿತ್ತು. ಅದರಿಂದಾಗಿ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟು ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *