ಅಮೆರಿಕದ ಮಸೀದಿಯೊಳಗೆ ಮನಬಂದಂತೆ ಗುಂಡಿನ ದಾಳಿ, ಮೂವರು ಸಾವು, ಇಬ್ಬರು ಶಂಕಿತರು ಕೂಡ ಶವವಾಗಿ ಪತ್ತೆ – Kannada News | Shooting at Major Mosque in San Diego Leaves Three Dead

ಸ್ಯಾನ್ ಡಿಯಾಗೋ, ಮೇ 19: ಅಮೆರಿಕದ ಸ್ಯಾನ್ ಡಿಯಾಗೋದಲ್ಲಿರುವ ಇಸ್ಲಾಮಿಕ್ ಸೆಂಟರ್ ಮಸೀದಿ(Mosque)ಯೊಳಗೆ ಭೀಕರ ಗುಂಡಿನ ದಾಳಿ ನಡೆದಿದೆ. ಇಬ್ಬರು ಮಸೀದಿಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಮಸೀದಿಯ ಭದ್ರತಾ ಸಿಬ್ಬಂದಿ ಸೇರಿದಂತೆ ಮೂವರು ಅಮಾಯಕರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇತ್ತ ಪೊಲೀಸರು ನಡೆಸಿದ ತಕ್ಷಣದ ಪ್ರತಿದಾಳಿಯಲ್ಲಿ ಇಬ್ಬರು ಶೂಟರ್‌ಗಳೂ ಸಹ ಸಾವನ್ನಪ್ಪಿದ್ದಾರೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ತಿಳಿಸಿದ್ದಾರೆ.

ಈ ಇಸ್ಲಾಮಿಕ್ ಕೇಂದ್ರವು ಸ್ಯಾನ್ ಡಿಯಾಗೋ ಕೌಂಟಿಯಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿದ್ದು, ಇಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಅರೇಬಿಕ್ ಭಾಷೆ, ಇಸ್ಲಾಮಿಕ್ ಅಧ್ಯಯನಗಳು ಮತ್ತು ಕುರಾನ್ ಬೋಧನೆ ಮಾಡುವ ‘ಅಲ್ ರಶೀದ್’ ಶಾಲೆ ಕೂಡ ಇದೆ. ಗುಂಡಿನ ದಾಳಿ ನಡೆದ ತಕ್ಷಣ ಇಡೀ ಪ್ರದೇಶವನ್ನು ಹತ್ತಾರು ಪೊಲೀಸ್ ವಾಹನಗಳು ಸುತ್ತುವರೆದವು. ಮಸೀದಿಯ ಪಾರ್ಕಿಂಗ್ ಸ್ಥಳದಿಂದ ಡಜನ್‌ಗಿಂತಲೂ ಹೆಚ್ಚು ಪುಟ್ಟ ಮಕ್ಕಳು ಪ್ರಾಣಭಯದಿಂದ ಪರಸ್ಪರ ಕೈ ಕೈ ಹಿಡಿದುಕೊಂಡು ಸುರಕ್ಷಿತವಾಗಿ ಹೊರಗೆ ಬರುತ್ತಿರುವ ದೃಶ್ಯಗಳು ಹೆಲಿಕಾಪ್ಟರ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ನೋಡುಗರ ಕರುಳು ಹಿಂಡುವಂತಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೀದಿಯ ಇಮಾಮ್ ತಹಾ ಹಸಾನೆ, ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನಮ್ಮ ಕೇಂದ್ರವು ಸದಾ ಅಂತರ್​ಧರ್ಮೀಯ ಸೌಹಾರ್ದತೆ ಮತ್ತು ಸಮುದಾಯ ನಿರ್ಮಾಣದ ಮೇಲೆ ಕೆಲಸ ಮಾಡುತ್ತದೆ. ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಮುಸ್ಲಿಮೇತರರ ದೊಡ್ಡ ಗುಂಪೊಂದು ಮುಂಜಾನೆ ಮಸೀದಿಗೆ ಬಂದಿತ್ತು. ಅಂತಹ ಶಾಂತಿ ಬಯಸುವ ಜಾಗದಲ್ಲಿ ಈ ರಕ್ತಪಾತ ನಡೆದಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.\

ಮತ್ತಷ್ಟು ಓದಿ: ಹಫ್ತಾ ವಸೂಲಿ ಮಾಡುತ್ತ ಏರಿಯಾದಲ್ಲಿ ಹವಾ, ಮಸೀದಿ ಪಕ್ಕದ ಜಾಗಕ್ಕಾಗಿ ಬಿತ್ತು ಹೆಣ

ಪೊಲೀಸ್ ಮುಖ್ಯಸ್ಥ ಸ್ಕಾಟ್ ವಾಲ್ ಮಾತನಾಡಿ, ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಇದನ್ನು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ‘ದ್ವೇಷಾಪರಾಧ’ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಆದರೆ ದಾಳಿ ನಡೆಸಿದ ಹದಿಹರೆಯದ ಶೂಟರ್‌ಗಳು ಯಾರು ಮತ್ತು ಅವರ ಹಿನ್ನೆಲೆ ಏನು ಎಂಬ ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ ಎಂದಿದ್ದಾರೆ.

ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರ ಕಚೇರಿಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. “ಸಮುದಾಯವನ್ನು ರಕ್ಷಿಸಲು ಜೀವದ ಹಂಗು ತೊರೆದು ತಕ್ಷಣ ಸ್ಪಂದಿಸಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದಗಳು. ಸಾರ್ವಜನಿಕರು ಸ್ಥಳೀಯ ಅಧಿಕಾರಿಗಳ ಮಾರ್ಗದರ್ಶನವನ್ನು ಅನುಸರಿಸಬೇಕು” ಎಂದು ಗವರ್ನರ್ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಶಾಂತಿ ಮತ್ತು ಶಿಕ್ಷಣದ ಕೇಂದ್ರವಾಗಿದ್ದ ಸ್ಯಾನ್ ಡಿಯಾಗೋದ ಮಸೀದಿಯ ಸುತ್ತಮುತ್ತಲಿನ ಮುಸ್ಲಿಂ ಮಾರುಕಟ್ಟೆಗಳು ಮತ್ತು ನೆರೆಹೊರೆಯಲ್ಲಿ ಸದ್ಯ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *