ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ – Kannada News | Punjabi singer Inder Kaur kidnapped found dead in Ludhiana Canal Case Details

ಕಳೆದ 6 ದಿನಗಳ ಹಿಂದೆ 29 ವರ್ಷದ ಪಂಜಾಬಿ ಗಾಯಕಿ ಇಂದರ್ ಕೌರ್ (Inder Kaur) ಅವರಿಗೆ ಗನ್ ತೋರಿಸಿ ಅಪಹರಣ ಮಾಡಲಾಗಿತ್ತು. ಈಗ ಪಂಜಾಬ್‌ನ ಲೂಧಿಯಾನದ ಕಾಲುವೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಂಗಳವಾರ (ಮೇ 19) ಮುಂಜಾನೆ ಸ್ಥಳೀಯ ಪೊಲೀಸರು ನೀಲೋ ಕಾಲುವೆಯಿಂದ ಗಾಯಕಿಯ (Punjabi Singer) ಶವವನ್ನು ಹೊರತೆಗೆದಿದ್ದಾರೆ. ಸುಖ್ವಿಂದರ್ ಸಿಂಗ್ ಎಂಬಾತ ಇಂದರ್ ಕೌರ್ ಅವರನ್ನು ಮದುವೆಯಾಗುವಂತೆ ತೀವ್ರ ಒತ್ತಾಯ ಹೇರುತ್ತಿದ್ದರಿಂದ ಆತನ ಮೇಲೆಯೇ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ಮೇ 13ರಂದು ರಾತ್ರಿ ಸುಮಾರು 8.30ಕ್ಕೆ ಇಂದರ್ ಕೌರ್ ಅವರು ತಮ್ಮ ಫೋರ್ಡ್ ಫಿಗೊ ಕಾರಿನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಟಿದ್ದರು. ಆದರೆ ಅವರು ಮತ್ತೆ ಮನೆಗೆ ಮರಳಲೇ ಇಲ್ಲ. ಗಾಯಕಿ ನಾಪತ್ತೆಯಾದ ನಂತರ, ಆಕೆಯ ಸಹೋದರ ಜೋತಿಂದರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಇಂದರ್ ಕೌರ್ ಮನೆಗೆ ಮರಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಆಘಾತ ಆಗಿದೆ.

ಪೊಲೀಸ್ ತನಿಖೆಯ ಪ್ರಕಾರ, ಇಂದರ್ ಕೌರ್ ಮತ್ತು ಆರೋಪಿ ಸುಖ್ವಿಂದರ್ ಸಿಂಗ್ ಮೂರು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಆದರೆ, ಸುಖ್ವಿಂದರ್‌ನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ಸತ್ಯ ತಿಳಿದ ತಕ್ಷಣ ಇಂದರ್ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು. ಅಲ್ಲದೆ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಸುಖ್ವಿಂದರ್, ಗಾಯಕಿಯ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.

ಈ ಕೊಲೆ ಪ್ರಕರಣದ ಹಿಂದೆ ದೊಡ್ಡ ಸಂಚು ಅಡಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಸುಖ್ವಿಂದರ್ ಸಿಂಗ್ ಗಾಯಕಿಯನ್ನು ಕೊಲ್ಲಲೆಂದೇ ಕೆನಡಾದಿಂದ ನೇಪಾಳ ಮಾರ್ಗವಾಗಿ ಪಂಜಾಬ್‌ಗೆ ಬಂದಿದ್ದ ಎನ್ನಲಾಗಿದೆ. ಮೇ 13ರಂದು ಆತ ತನ್ನ ಸಹಚರರೊಂದಿಗೆ ಸೇರಿ ಗಾಯಕಿಯ ಕಾರನ್ನು ಅಡ್ಡಗಟ್ಟಿ, ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದನು. ನಂತರ ಅವರನ್ನು ಭೀಕರವಾಗಿ ಕೊಲೆ ಮಾಡಿ, ಶವವನ್ನು ನೀಲೋ ಕಾಲುವೆಗೆ ಎಸೆದಿದ್ದನು. ಕೃತ್ಯ ಎಸಗಿದ ತಕ್ಷಣವೇ ಆರೋಪಿ ಮತ್ತೆ ಅದೇ ನೇಪಾಳ ಮಾರ್ಗವಾಗಿ ಕೆನಡಾಕ್ಕೆ ಪರಾರಿಯಾಗಿದ್ದಾನೆ.

ಇದನ್ನೂ ಓದಿ: 33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?

ಆರೋಪಿ ಸುಖ್ವಿಂದರ್ ಸಿಂಗ್ ಮತ್ತು ಆತನ ಸಹಚರ ಕರಮ್‌ಜೀತ್ ಸಿಂಗ್ ವಿರುದ್ಧ ಮೇ 15ರಂದೇ ಜಮಾಲ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ ಪೊಲೀಸರು ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರೆ ಆಕೆಯ ಪ್ರಾಣ ಉಳಿಯುತ್ತಿತ್ತು ಎಂದು ಗಾಯಕಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *