ಒಂದೆಡೆ ಡೀಸೆಲ್ ಸಿಗ್ತಿಲ್ಲ, ಇನ್ನೊಂದೆಡೆ ಬಿತ್ತನೆ ಬೀಜ ಸಿಗ್ತಿಲ್ಲ! ಹಾವೇರಿಯಲ್ಲಿ ರೈತರ ಪರದಾಟ – Kannada News | Haveri Farmers Distress: Long Queues for Seeds and Diesel Shortage Hits Agriculture

ಹಾವೇರಿ, ಮೇ 23: ಮುಂಗಾರು ಆರಂಭದ ಬೆನ್ನಲ್ಲೇ ಹಾವೇರಿ (Haveri) ಜಿಲ್ಲೆಯ ಅನ್ನದಾತರು ಬಿತ್ತನೆ ಬೀಜ ಹಾಗೂ ಡೀಸೆಲ್‌ಗಾಗಿ ತೀವ್ರ ಪರದಾಡುವಂತಾಗಿದ್ದು, ಕೃಷಿ ಇಲಾಖೆ ಹಾಗೂ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಒಂದು ಕಡೆ ಬಿತ್ತನೆ ಬೀಜ ಪಡೆಯಲು ರೈತರು ರಾತ್ರಿಯಿಡೀ ಕೃಷಿ ಕೇಂದ್ರಗಳ ಮುಂದೆ ಜಾಗರಣೆ ಮಾಡುತ್ತಿದ್ದರೆ, ಇನ್ನೊಂದೆಡೆ ಜಮೀನು ಉಳುಮೆ ಮಾಡಲು ಟ್ರ್ಯಾಕ್ಟರ್​ಗಳೀಗೆ ಡೀಸೆಲ್ ಸಿಗದೆ ಬಂಕ್‌ಗಳ ಮುಂದೆ ಜನ ಕ್ಯೂ ನಿಂತಿದ್ದಾರೆ.

ಮುಖ್ಯಾಂಶಗಳು

  • ಹಾವೇರಿ ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ರಾತ್ರಿಯಿಡೀ ಕ್ಯೂನಲ್ಲಿ ನಿಂತಿದ್ದಾರೆ.
  • ಕೃಷಿ ಇಲಾಖೆಯ ವಿಳಂಬ ನೀತಿಯಿಂದಾಗಿ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • ಉಳುಮೆ ಮಾಡಲು ಡೀಸೆಲ್ ಸಿಗದೆ ಪೆಟ್ರೋಲ್ ಬಂಕ್‌ಗಳ ಮುಂದೆ ನೂಕುನುಗ್ಗಲು ಉಂಟಾಗಿದೆ.

ಬಿತ್ತನೆ ಬೀಜಕ್ಕಾಗಿ ರಾತ್ರಿಯಿಡೀ ಜಾಗರಣೆ

ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳ್ಳಿಹಳ್ಳಿ ಕೃಷಿ ಕೇಂದ್ರದ ಮುಂದೆ ಸೋಯಾಬೀನ್ ಹಾಗೂ ಶೇಂಗಾ ಬಿತ್ತನೆ ಬೀಜಕ್ಕಾಗಿ ರೈತರು ಕಳೆದ ಎರಡು ದಿನಗಳಿಂದ ಪರದಾಡುತ್ತಿದ್ದಾರೆ. ಕೃಷಿ ಇಲಾಖೆಯ ನೆಟ್‌ವರ್ಕ್ ಸಮಸ್ಯೆ ಮತ್ತು ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಸಕಾಲಕ್ಕೆ ಬೀಜ ಸಿಗುತ್ತಿಲ್ಲ. ಇದರಿಂದ ಬೇಸತ್ತ ಅನ್ನದಾತರು, ಬಿತ್ತನೆ ಬೀಜ ಕೈತಪ್ಪಿ ಹೋಗಬಹುದು ಎಂಬ ಆತಂಕದಲ್ಲಿ ರಾತ್ರಿಯಿಡೀ ಕೃಷಿ ಕೇಂದ್ರದ ಮುಂದೆಯೇ ಕ್ಯೂನಲ್ಲಿ ಮಲಗಿ ಜಾಗರಣೆ ಮಾಡಿದ್ದಾರೆ. ಜಿಲ್ಲೆಯ ಹಲವು ಕಡೆಗಳಲ್ಲಿ ಬೀಜಕ್ಕಾಗಿ ತೀವ್ರ ನೂಕುನುಗ್ಗಲು ಉಂಟಾಗಿದ್ದು, ರೈತರು ಕೃಷಿ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ ಹಾವೇರಿಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳತನ: ತಿಜೋರಿ ಸಮೇತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ

ಡೀಸೆಲ್‌ಗೂ ಶುರುವಾಯ್ತು ಹಾಹಾಕಾರ

ಕೇವಲ ಹತ್ತು ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಇಂಧನ ಕೊರೆತಯೂ ಎದುರಾಗಿದೆ. ಜಮೀನು ಉಳುಮೆ ಮಾಡಲು ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಸಿಗದೆ ಹಾವೇರಿ ಹೊರವಲಯದ ಪೆಟ್ರೋಲ್ ಬಂಕ್‌ಗಳಲ್ಲಿ ರೈತರು ಮುಗಿಬಿದ್ದಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿ ಇಂಧನದ ಕೊರತೆ ಎದುರಾಗಿದ್ದು, ಬಂಕ್ ಮಾಲೀಕರು ರೈತರ ಕ್ಯಾನ್‌ಗಳಿಗೆ ಡೀಸೆಲ್ ಹಾಕಲು ನಿರಾಕರಿಸುತ್ತಿದ್ದಾರೆ. ಕೈಯಲ್ಲಿ ದುಡ್ಡಿದ್ದರೂ ಜಮೀನು ಹದಗೊಳಿಸಲು ಡೀಸೆಲ್ ಸಿಗುತ್ತಿಲ್ಲ. ಇತ್ತ ಬಿತ್ತನೆ ಬೀಜಕ್ಕೂ ಪರದಾಡುವಂತಾಗಿದೆ. ಹೀಗಾದರೆ ನಾವು ಜೀವನ ಮಾಡುವುದಾದರೂ ಹೇಗೆ? ಎಂದು ರೈತರು ಕಣ್ಣೀರು ಹಾಕುತ್ತಾ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *