Headlines

ಬಲವಂತವಾಗಿ ದೆಹಲಿ ಜಿಮ್ಖಾನಾ ಕ್ಲಬ್​ ಖಾಲಿ ಮಾಡಿಸುವುದಿಲ್ಲ; ಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟನೆ – Kannada News | Delhi Gymkhana Club Row Centre tells Delhi High Court Police Wont Forcibly Vacate

ನವದೆಹಲಿ, ಮೇ 26: ಲುಟ್ಯೆನ್ಸ್ ದೆಹಲಿಯ ಹೃದಯಭಾಗದಲ್ಲಿರುವ 113 ವರ್ಷಗಳ ಇತಿಹಾಸ ಹೊಂದಿರುವ ದೆಹಲಿ ಜಿಮ್ಖಾನಾ ಕ್ಲಬ್ (Delhi Gymkhana Club) ಅನ್ನು ತೆರವುಗೊಳಿಸುವ ಕೇಂದ್ರ ಸರ್ಕಾರದ ಆದೇಶಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಕಾನೂನು ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರವು ಜಿಮ್ಖಾನಾ ಕ್ಲಬ್ ಜಾಗವನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ, ಸೂಕ್ತ ಲೀಗಲ್ ನೋಟಿಸ್ ನೀಡಿದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟ್‌ಗೆ ಭರವಸೆ ನೀಡಿದೆ.

ಪ್ರಮುಖ ಮುಖ್ಯಾಂಶಗಳು:

  • ದೆಹಲಿ ಜಿಮ್ಖಾನಾ ಕ್ಲಬ್​ಗೆ ದೊಡ್ಡ ರಿಲೀಫ್
  • ಸದ್ಯಕ್ಕೆ ಬಲವಂತವಾಗಿ ಸ್ವಾಧೀನವಿಲ್ಲ ಎಂದ ಕೇಂದ್ರ ಸರ್ಕಾರ
  • ಪ್ರಧಾನಿ ನಿವಾಸದ ಬಳಿ ಇರುವ ಕ್ಲಬ್

113 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಲಬ್‌ನ ಲೀಸ್ (ಗುತ್ತಿಗೆ) ಒಪ್ಪಂದದಲ್ಲಿರುವ ವಿಶೇಷ ನಿಯಮವೊಂದನ್ನು ಉಲ್ಲೇಖಿಸಿದ್ದ ಸರ್ಕಾರ, ಈ ಭೂಮಿ ಸಾರ್ವಜನಿಕ ಹಿತಾಸಕ್ತಿಗೆ ಅಗತ್ಯವಿದೆ ಎಂದು ಹೇಳಿತ್ತು. ಅಲ್ಲದೆ, ಜೂನ್ 5ರ ಒಳಗಾಗಿ ಇಡೀ ಆವರಣವನ್ನು ತನಗೆ ಹಸ್ತಾಂತರಿಸಬೇಕು ಎಂದು ಜಿಮ್ಖಾನಾ ಕ್ಲಬ್‌ಗೆ ತಿಳಿಸಿತ್ತು.

ಕೇಂದ್ರ ಸರ್ಕಾರದ ಪರವಾಗಿ ಕೋರ್ಟ್​ನಲ್ಲಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, “ಜೂನ್ 5ರಂದೇ ಪೊಲೀಸರು ನುಗ್ಗಿ ಬಲವಂತವಾಗಿ ಕ್ಲಬ್ ಅನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ಆತಂಕ ಬೇಡ. ಸರ್ಕಾರವು ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸಲಿದೆ. ಸೂಕ್ತ ನೋಟಿಸ್ ನೀಡಿದ ಬಳಿಕವಷ್ಟೇ ತೆರವು ಪ್ರಕ್ರಿಯೆ ನಡೆಯಲಿದೆ” ಎಂದು ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು

ಜೂನ್ 5ರಂದು ಯಾವುದಾದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಇಲ್ಲವೆಂದು ಉತ್ತರಿಸಿದರು. “ಜೂನ್ 5ರಂದು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ನಾವು ಮೊದಲು ನೋಟಿಸ್ ನೀಡಬೇಕಾಗುತ್ತದೆ” ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ಈ ವಿವಾದಕ್ಕೆ ಕಾರಣವೇನು?:

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಭೂಮಿ ಮತ್ತು ಅಭಿವೃದ್ಧಿ ಕಚೇರಿಯು ಜಿಮ್ಖಾನಾ ಕ್ಲಬ್ ಹೊಂದಿರುವ 27.3 ಎಕರೆ ವಿಸ್ತೀರ್ಣದ ಪ್ರಧಾನ ಭೂಮಿಯ ಲೀಸ್ (ಗುತ್ತಿಗೆ) ಒಪ್ಪಂದವನ್ನು ರದ್ದುಗೊಳಿಸಿತ್ತು. ಸಾರ್ವಜನಿಕ ಹಿತಾಸಕ್ತಿ ಹಾಗೂ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿದ್ದ ಕೇಂದ್ರ ಸರ್ಕಾರ ಜೂನ್ 5ರ ಒಳಗಾಗಿ ಇಡೀ ಆವರಣ, ಕಟ್ಟಡಗಳು ಮತ್ತು ಮೈದಾನವನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಮೇ 22ರಂದು ಕ್ಲಬ್‌ಗೆ ಆದೇಶಿಸಿತ್ತು.

ಇದನ್ನೂ ಓದಿ: ದಲೈ ಲಾಮಾ ಉತ್ತರಾಧಿಕಾರಿ ನೇಮಕದಿಂದ ದೂರವಿರಿ; ಭಾರತಕ್ಕೆ ಚೀನಾ ಎಚ್ಚರಿಕೆ

ಈ ವಿವಾದಿತ ಜಾಗವು ಪ್ರಧಾನಮಂತ್ರಿಯವರ ಅಧಿಕೃತ ನಿವಾಸ ಹಾಗೂ ಇತರ ಅತ್ಯಂತ ಸೂಕ್ಷ್ಮ ರಕ್ಷಣಾ ವಲಯಗಳಿಗೆ ಹತ್ತಿರದಲ್ಲಿದೆ. ದೇಶದ ರಕ್ಷಣಾ ಮೂಲಸೌಕರ್ಯಗಳನ್ನು ಮತ್ತು ಸಾರ್ವಜನಿಕ ಭದ್ರತೆಯನ್ನು ಬಲಪಡಿಸಲು ಈ ಭೂಮಿ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಕೇಂದ್ರ ಸರ್ಕಾರ ವಾದಿಸಿದೆ. ಕೇಂದ್ರ ಸರ್ಕಾರದ ಈ ದಿಢೀರ್ ಆದೇಶವನ್ನು ಪ್ರಶ್ನಿಸಿ ಜಿಮ್ಖಾನಾ ಕ್ಲಬ್‌ನ ಸದಸ್ಯರು ಮತ್ತು ನೌಕರರ ಸಂಘವು ದೆಹಲಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಮೂರ್ತಿ ಅವನೀಶ್ ಝಿಂಗನ್ ಅವರ ನೇತೃತ್ವದ ಪೀಠವು ವಿಚಾರಣೆ ನಡೆಸಿತು.

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಅವನೀಶ್ ಝಿಂಗನ್ ಅವರ ಪೀಠವು ಈಗಾಗಲೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಮಧ್ಯಂತರ ತಡೆಯಾಜ್ಞೆ ನೀಡದಿದ್ದರೂ, ಜಿಮ್ಖಾನಾ ಕ್ಲಬ್ ಹೂಡಿರುವ ದಾವೆಯನ್ನು ನ್ಯಾಯಾಲಯವು ವಜಾಗೊಳಿಸಿಲ್ಲ. ಬದಲಿಗೆ ಸುದೀರ್ಘ ಕಾನೂನು ಪರಿಶೀಲನೆಗೆ ಒಳಪಡಿಸಿದೆ. ಈ ಲೀಸ್ ಒಪ್ಪಂದವನ್ನು ರದ್ದುಗೊಳಿಸಿರುವ ಕ್ರಮದ ಕುರಿತು ಜಿಮ್ಖಾನಾ ಕ್ಲಬ್ ಎತ್ತಿರುವ ಆಕ್ಷೇಪಣೆಗಳಿಗೆ ಲಿಖಿತವಾಗಿ ವಿವರಣೆ ನೀಡುವಂತೆ ನ್ಯಾಯಮೂರ್ತಿ ಅವನೀಶ್ ಝಿಂಗನ್ ಅವರು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *