ಬಾಯಲ್ಲಿ ಹೇಳಿದ್ದು 7,000 ಕೋಟಿ ರೂ, ಅಕೌಂಟ್​ಗೆ ಬಿದ್ದದ್ದು ಸೊನ್ನೆ; ಇದು ಟ್ರಂಪ್ ಪೀಸ್ ಫಂಡ್​ನ 4 ತಿಂಗಳ ಕಥೆ

ವಾಷಿಂಗ್ಟನ್, ಮೇ 28: ಯುದ್ಧಪೀಡಿತ ಗಾಜಾ ಪಟ್ಟಿಯ ಪುನರ್ನಿರ್ಮಾಣಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ಸದ್ದುಗದ್ದಲದೊಂದಿಗೆ ಆರಂಭಿಸಿದ್ದ ‘ಬೋರ್ಡ್ ಆಫ್ ಪೀಸ್’ (Board of Peace) ಯೋಜನೆ ಸದ್ಯಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕ ನಾಯಕರು ಈ ನಿಧಿಗೆ ಬಿಲಿಯನ್ ಗಟ್ಟಲೆ ಡಾಲರ್ ನೆರವು ನೀಡುವುದಾಗಿ ಭರವಸೆ ನೀಡಿಯೂ ಇದ್ದರು. ಯೋಜನೆ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಇದರ ಅಧಿಕೃತ ಖಾತೆಗೆ ಕೇವಲ ‘ಶೂನ್ಯ’ (Zero) ಹಣ ಜಮೆಯಾಗಿದೆ ಎಂದು ‘ಫೈನಾನ್ಷಿಯಲ್ ಟೈಮ್ಸ್’ (FT) ವರದಿ ಮಾಡಿದೆ.

ವಿಶ್ವ ಬ್ಯಾಂಕ್ ಖಾತೆಯಲ್ಲಿ ಹಣವೇ ಇಲ್ಲ!

ಗಾಜಾ ಪುನರ್ನಿರ್ಮಾಣ ಕಾರ್ಯಕ್ಕಾಗಿ ವಿಶ್ವ ಬ್ಯಾಂಕ್ (World Bank) ಉಸ್ತುವಾರಿಯಲ್ಲಿ ಮತ್ತು ವಿಶ್ವಸಂಸ್ಥೆಯ (UN) ಅನುಮೋದನೆಯೊಂದಿಗೆ ಈ ಅಧಿಕೃತ ನಿಧಿಯನ್ನು ಸ್ಥಾಪಿಸಲಾಗಿತ್ತು. ಈ ನಿಧಿಗೆ ಸದಸ್ಯ ರಾಷ್ಟ್ರಗಳು ಒಟ್ಟು 7 ಬಿಲಿಯನ್ ಡಾಲರ್ ನೆರವು ಘೋಷಿಸಿದ್ದವು. ಆದರೆ, ಈ ಅಧಿಕೃತ ಖಾತೆಗೆ ಇದುವರೆಗೆ ಒಂದೇ ಒಂದು ಡಾಲರ್ ಕೂಡ ಬಂದಿಲ್ಲ ಎಂದು ಈ ವ್ಯವಹಾರದ ನಿಕಟವರ್ತಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜೆಪಿ ಮೋರ್ಗನ್ ಖಾತೆಗೆ ಹಣ ವರ್ಗಾವಣೆ: ಪಾರದರ್ಶಕತೆಯ ಕೊರತೆ

ವಿಶ್ವ ಬ್ಯಾಂಕ್‌ನ ಕಠಿಣ ನಿಯಮಾವಳಿಗಳಿರುವ ಖಾತೆಯನ್ನು ಬಳಸುವ ಬದಲಿಗೆ, ಬೋರ್ಡ್ ಆಫ್ ಪೀಸ್ ಸಂಸ್ಥೆಗೆ ಬರುತ್ತಿರುವ ದೇಣಿಗೆಗಳನ್ನು ನೇರವಾಗಿ ಜೆಪಿಮೋರ್ಗನ್ (JPMorgan) ಖಾಸಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತಿದೆಯಂತೆ. ಹಾಗಂತ ಬೋರ್ಡ್​ನ ವಕ್ತಾರರು ಒಪ್ಪಿಕೊಂಡಿದ್ದಾರೆಂದು ಎಫ್​ಟಿ ವರದಿಯಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಶಾಂತಿ ಮಾತುಕತೆ ನಡುವೆಯೇ ಇರಾನ್​​ನಲ್ಲಿ ಅಮೆರಿಕ ದಾಳಿ, ಕ್ಷಿಪಣಿ ಉಡಾವಣಾ ತಾಣ, ಮೈನ್ ಬೋಟ್​ಗಳೇ ಟಾರ್ಗೆಟ್

ವಿಶ್ವ ಬ್ಯಾಂಕ್ ಖಾತೆಯಲ್ಲಾದರೆ ಪ್ರತಿಯೊಂದು ಪೈಸೆಗೂ ಲೆಕ್ಕ ಕೊಡಬೇಕಾಗುತ್ತದೆ. ಆದರೆ ಜೆಪಿಮೋರ್ಗನ್‌ನಂತಹ ಖಾಸಗಿ ಖಾತೆಗಳಿಗೆ ಇಂತಹ ಯಾವುದೇ ಸ್ವತಂತ್ರ ಪಾರದರ್ಶಕತೆಯ ನಿಯಮಗಳು ಅನ್ವಯಿಸುವುದಿಲ್ಲ.

“ಹಣವನ್ನು ಸ್ವೀಕರಿಸಲು ಹಲವು ಆಯ್ಕೆಗಳನ್ನು ನೀಡಲಾಗಿತ್ತು, ದಾನಿಗಳು ತಮ್ಮ ಇಷ್ಟದಂತೆ ಇತರ ಆಯ್ಕೆಗಳನ್ನು (ಜೆಪಿಮೋರ್ಗನ್) ಆರಿಸಿಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಆಡಳಿತ ಮಂಡಳಿಗೆ ಇದರ ಆರ್ಥಿಕ ವರದಿಯನ್ನು ಸಲ್ಲಿಸಲಾಗುವುದು” ಎಂದು ಮಂಡಳಿಯ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.

ಭಾರಿ ಆರ್ಥಿಕ ಕೊರತೆ ಮತ್ತು ಸ್ಥಗಿತಗೊಂಡ ಯೋಜನೆಗಳು

ಟ್ರಂಪ್ ಅವರ ಈ ಮಹತ್ವಾಕಾಂಕ್ಷೆಯ ಯೋಜನೆ ಸದ್ಯಕ್ಕೆ ಕೇವಲ ಕಾಗದದ ಮೇಲಷ್ಟೇ ಉಳಿಯುವಂತಾಗಿದೆ. ಗಾಜಾದಲ್ಲಿ ಸದ್ಯಕ್ಕೆ ಯಾವುದೇ ಪುನರ್ನಿರ್ಮಾಣ ಕಾರ್ಯಗಳು ಆರಂಭವಾಗಿಲ್ಲ.

ಗಾಜಾದಲ್ಲಿ ಹೊಸ ಪೊಲೀಸ್ ಪಡೆಗೆ ತರಬೇತಿ ನೀಡಲು ಯುಎಇ (UAE) 100 ಮಿಲಿಯನ್ ಡಾಲರ್ ನೀಡಿತ್ತಾದರೂ, ಆ ಹಣ ಸದ್ಯಕ್ಕೆ ಫ್ರೀಜ್ ಆಗಿದ್ದು ಯೋಜನೆ ಇನ್ನು ಆರಂಭವಾಗಿಲ್ಲ.

ಅಮೆರಿಕದ ವಿದೇಶಾಂಗ ಇಲಾಖೆಯು ಈ ಯೋಜನೆಗೆ ಸಂಬಂಧಿಸಿದಂತೆ 1.2 ಬಿಲಿಯನ್ ಡಾಲರ್ ನೆರವು ನೀಡಲು ಉದ್ದೇಶಿಸಿದೆಯಾದರೂ, ಆ ಹಣವನ್ನು ಈ ಬೋರ್ಡ್ ಆಫ್ ಪೀಸ್ ನಿರ್ವಹಣೆ ಮಾಡುತ್ತಿಲ್ಲ. ಕಟ್ಟುನಿಟ್ಟಾದ ಹಣಕಾಸು ನಿಯಂತ್ರಣ ವ್ಯವಸ್ಥೆ ಜಾರಿಗೆ ಬರುವವರೆಗೂ ಈ ನಿಧಿಯನ್ನು ಬಿಡುಗಡೆ ಮಾಡದಂತೆ ಅಮೆರಿಕದ ಕಾಂಗ್ರೆಸ್ ಅಧಿಕಾರಿಗಳು ತಡೆಹಿಡಿದಿದ್ದಾರೆ.

ಇದನ್ನೂ ಓದಿ: ಅಮೆರಿಕ ಸೇನಾ ನೆಲೆ ಮೇಲೆ ಇರಾನ್ ಪ್ರತಿ ದಾಳಿ

ಹಣದ ತೀವ್ರ ಕೊರತೆಯಿಂದಾಗಿ ಮತ್ತು ಹಮಾಸ್ ಶಸ್ತ್ರಾಸ್ತ್ರ ತ್ಯಜಿಸದ ಕಾರಣ, ಗಾಜಾವನ್ನು ಆಳಲು ರಚಿಸಲಾಗಿದ್ದ ಪ್ಯಾಲೆಸ್ತೀನ್ ತಂತ್ರಜ್ಞರ ಸಮಿತಿಗೆ (NCAG) ಇನ್ನು ಕೂಡ ಅಲ್ಲಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ.

ಈ ಪ್ರಕರಣದ ಹಿನ್ನೆಲೆ ಇದು

ಕಳೆದ ವರ್ಷ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಏರ್ಪಟ್ಟ ನಂತರ ಗಾಜಾವನ್ನು ಪುನರ್ನಿರ್ಮಿಸಲು ಈ ಬೋರ್ಡ್ ಆಫ್ ಪೀಸ್ ಅನ್ನು ಟ್ರಂಪ್ ನೇತೃತ್ವದಲ್ಲಿ ಜನವರಿಯಲ್ಲಿ ಸ್ಥಾಪಿಸಲಾಯಿತು. ಈ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆಯಲು ಪ್ರತಿಯೊಂದು ಸದಸ್ಯ ರಾಷ್ಟ್ರವೂ 1 ಬಿಲಿಯನ್ ಡಾಲರ್ ನೀಡಬೇಕೆಂಬ ನಿಯಮವಿದೆ. ಟ್ರಂಪ್ ಸ್ವತಃ ಅಮೆರಿಕದಿಂದ 10 ಬಿಲಿಯನ್ ಡಾಲರ್ ನೀಡುವುದಾಗಿ ಹೇಳಿದ್ದರು ಮತ್ತು ಕತಾರ್, ಸೌದಿ ಅರೇಬಿಯಾ ಹಾಗೂ ಯುಎಇ ತಲಾ 1 ಬಿಲಿಯನ್ ಡಾಲರ್ ನೀಡುವುದಾಗಿ ಭರವಸೆ ನೀಡಿದ್ದವು. ಆದರೆ, ಇತ್ತೀಚಿನ ವರದಿಯ ಪ್ರಕಾರ ಮುಂದಿನ ದಶಕದಲ್ಲಿ ಗಾಜಾ ಪುನರ್ನಿರ್ಮಾಣಕ್ಕೆ 71 ಬಿಲಿಯನ್ ಡಾಲರ್‌ಗಿಂತಲೂ ಅಧಿಕ ಹಣದ ಅಗತ್ಯವಿದ್ದು, ಸದ್ಯದ ಪರಿಸ್ಥಿತಿ ಟ್ರಂಪ್ ಯೋಜನೆಗೆ ಭಾರಿ ಹಿನ್ನಡೆ ತಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *