Headlines

ಜಪಾನ್‌ಗೆ ಭಾರತೀಯ ಮಾವಿನ ರಫ್ತು ತಾತ್ಕಾಲಿಕ ಸ್ಥಗಿತ: ರೈತರಲ್ಲಿ ಆತಂಕ

ನವದೆಹಲಿ, ಮೇ 29: ಸುಮಾರು 20 ವರ್ಷಗಳ ನಿರಂತರ ವ್ಯಾಪಾರದ ನಂತರ, ಜಪಾನ್ ಈ ಋತುವಿನಲ್ಲಿ (ಏಪ್ರಿಲ್-ಜೂನ್) ಭಾರತೀಯ ಮಾವಿನ ಹಣ್ಣುಗಳ(Mangoes) ಆಮದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಇದು ಭಾರತದ ಮಾವು ರಫ್ತುದಾರರು ಮತ್ತು ರೈತರಲ್ಲಿ ಭಾರಿ ಕಳವಳ ಮೂಡಿಸಿದೆ.

ನಿಷೇಧಕ್ಕೆ ಕಾರಣವೇನು?
ಭಾರತದಿಂದ ಮಾವಿನ ಹಣ್ಣುಗಳನ್ನು ಜಪಾನ್‌ಗೆ ಕಳುಹಿಸುವ ಮುನ್ನ ಆವಿ ಶಾಖ ಚಿಕಿತ್ಸೆ (VHT – Vapor Heat Treatment) ಪ್ರಕ್ರಿಯೆಗೆ ಒಳಪಡಿಸುವುದು ಕಡ್ಡಾಯವಾಗಿದೆ. ಇದು ಹಣ್ಣಿನ ನೊಣಗಳು ಮತ್ತು ಕೀಟಗಳನ್ನು ಕೊಲ್ಲುವ ವಿಧಾನವಾಗಿದೆ.

ಲೋಪದೋಷ ಪತ್ತೆ: ಈ ವರ್ಷದ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ರೆಹಮಾನ್‌ಪುರದಲ್ಲಿರುವ ವಿಎಚ್‌ಟಿ ಕೇಂದ್ರವನ್ನು ಜಪಾನ್ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಅಲ್ಲಿನ ನೈರ್ಮಲ್ಯ , ವ್ಯವಸ್ಥೆಯಲ್ಲಿ ಕೆಲವು ತಾಂತ್ರಿಕ ನ್ಯೂನತೆಗಳು ಕಂಡುಬಂದಿವೆ. ಇದೇ ಕಾರಣಕ್ಕೆ ಮಾರ್ಚ್ 25, 2026 ರ ನಂತರ ನೀಡಲಾದ ತಪಾಸಣಾ ಪ್ರಮಾಣಪತ್ರಗಳಿರುವ ಮಾವಿನ ಸಾಗಣೆಯನ್ನು ಸ್ವೀಕರಿಸುವುದಿಲ್ಲ ಎಂದು ಜಪಾನ್‌ನ ಯೊಕೊಹಾಮಾ ಸಸ್ಯ ಸಂರಕ್ಷಣಾ ಸಂಘ ತಿಳಿಸಿದೆ. ಭಾರತ ತನ್ನ ತಪಾಸಣಾ ವ್ಯವಸ್ಥೆಯನ್ನು ಸುಧಾರಿಸುವವರೆಗೆ ಈ ನಿಷೇಧ ಮುಂದುವರಿಯಲಿದೆ.

ಮತ್ತಷ್ಟು ಓದಿ: ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಪ್ರಭಾವಕ್ಕೆ ಒಳಗಾಗುವ ತಳಿಗಳು
ಈ ನಿರ್ಧಾರದಿಂದಾಗಿ ಜಪಾನ್‌ನಲ್ಲಿ ಹೆಚ್ಚು ಜನಪ್ರಿಯವಾಗಿರುವ ಭಾರತದ ಪ್ರಮುಖ ಮಾವಿನ ತಳಿಗಳ ರಫ್ತಿಗೆ ಹೊಡೆತ ಬಿದ್ದಿದೆ:

ಅಲ್ಫೋನ್ಸೊ (ಹಾಪುಸ್)

ಕೇಸರ್ (ಜಪಾನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ತಳಿ)

ಲ್ಯಾಂಗ್ರಾ

ಬಂಗನಪಲ್ಲಿ

ಭಾರತದ ವ್ಯಾಪಾರದ ಮೇಲಾಗುವ ಪರಿಣಾಮ
ಭಾರತೀಯ ಮಾವಿನ ಹಣ್ಣಿಗೆ ಯುಎಇ, ಯುಎಸ್ ಮತ್ತು ಯುಕೆ ದೊಡ್ಡ ಮಾರುಕಟ್ಟೆಗಳಾಗಿದ್ದು, ಜಪಾನ್ ಅತಿ ದೊಡ್ಡ ಖರೀದಿದಾರನೇನಲ್ಲ. ಆದರೂ ಈ ನಿಷೇಧವು ಆರ್ಥಿಕವಾಗಿ ಪರಿಣಾಮ ಬೀರಲಿದೆ. ಜಪಾನ್‌ನಲ್ಲಿ ಕೃಷಿ ನಿಯಮಗಳು ಕಠಿಣವಾಗಿರುವುದರಿಂದ, ಅಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಬೇರೆ ದೇಶಗಳಿಗಿಂತ ಹೆಚ್ಚಿನ ಬೆಲೆ (ಪ್ರೀಮಿಯಂ ದರ) ಸಿಗುತ್ತಿತ್ತು. ಇದರಿಂದ ರಫ್ತುದಾರರ ಗಳಿಕೆಗೆ ನಷ್ಟವಾಗಲಿದೆ.

ಈಗಾಗಲೇ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ತೀವ್ರ ಉಷ್ಣ ಅಲೆಯಿಂದಾಗಿ ಅಲ್ಫೋನ್ಸೊ ಇಳುವರಿ ಕಡಿಮೆಯಾಗಿದೆ. ಇದರೊಂದಿಗೆ ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ಸರಕು ಸಾಗಣೆ (ಲಾಜಿಸ್ಟಿಕ್ಸ್) ವೆಚ್ಚವೂ ಹೆಚ್ಚಾಗಿದೆ. ಈ ಸಂಕಷ್ಟದ ಸಮಯದಲ್ಲಿ ಜಪಾನ್ ನಿಷೇಧ ಹೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮುಂದೇನು?: ಈ ನಿಷೇಧ ಯಾವಾಗ ತೆರವಾಗುತ್ತದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಭಾರತದ APEDA ಮತ್ತು ಜಪಾನ್‌ನ ಸಸ್ಯ ಸಂರಕ್ಷಣಾ ಕೇಂದ್ರಗಳು ಮಾತುಕತೆಯ ಮೂಲಕ ತಾಂತ್ರಿಕ ದೋಷಗಳನ್ನು ಸರಿಪಡಿಸಿದ ನಂತರವಷ್ಟೇ ರಫ್ತು ಪುನರಾರಂಭಗೊಳ್ಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *