IPL 2026: ‘ನಿನ್ನ ವಯಸ್ಸಲ್ಲಿ ನಮಗೆ..’; ವೈಭವ್ ಆಟವನ್ನು ಕೊಂಡಾಡಿದ ಅಮಿತಾಬ್ ಬಚ್ಚನ್‌

ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ (RR vs GT) ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 214 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು. ಈ ಪಂದ್ಯದಲ್ಲಿ ರಾಜಸ್ಥಾನ್ ಸೋತಿತ್ತಾದರೂ ತಂಡದ ಪರ ಏಕಾಂಗಿ ಹೋರಾಟ ನೀಡಿದ 15 ವರ್ಷದ ಪೋರ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಆಟಕ್ಕೆ ಇಡೀ ವಿಶ್ವ ಕ್ರಿಕೆಟ್ ಸಲಾಂ ಹೊಡೆದಿದೆ. ಕ್ರಿಕೆಟ್ ದಿಗ್ಗಜರಿಂದ ಹಿಡಿದು ಬಾಲಿವುಡ್ ಸೆಲೆಬ್ರೆಟಿಗಳು ವೈಭವ್ ಆಟವನ್ನು ಕೊಂಡಾಡಿದ್ದಾರೆ. ಅಂತಹವರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‌ (Amitabh Bachchan) ಕೂಡ ಒಬ್ಬರು.

96 ರನ್​ ಬಾರಿಸಿದ ವೈಭವ್

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನದ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ವಿಕೆಟ್​ಗಳ ಪತನದ ನಡುವೆಯೂ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ನೋಡ ನೋಡುತ್ತಲೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದಾದ ಬಳಿಕ ತಮ್ಮ ಎಂದಿನ ಹೊಡಿಬಡಿ ಆಟವನ್ನು ಶುರು ಮಾಡಿದ ವೈಭವ್ ಶತಕದ ಸನಿಹಕ್ಕೂ ಬಂದರು. ಆದರೆ ಮತ್ತೊಮ್ಮೆ ನರ್ವಸ್ 90 ಗೆ ಬಲಿಯಾದ ವೈಭವ್ 96 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತದೆ ಬೇಸರದೊಂದಿಗೆ ವೈಭವ್ ಪೆವಿಲಿಯನ್​ಗೆ ಮರಳಿದರು. ಈ ಆಘಾತದ ಜೊತೆಗೆ ತಂಡದ ಸೋಲು ಕೂಡ ವೈಭವ್​ಗೆ ತೀವ್ರ ನೋವನ್ನುಂಟು ಮಾಡಿತು.

ನಿನ್ನ ವಯಸ್ಸಿನಲ್ಲಿ ನಮಗೆ; ಬಿಗ್ ಬಿ ಶ್ಲಾಘನೆ

ಹೀಗಾಗಿ ಗುಜರಾತ್ ವಿರುದ್ಧ ಸೋತ ಬಳಿಕ ಡಗೌಟ್​ನಲ್ಲಿ ಕುಳಿತು ಕಣ್ಣೀರು ಹಾಕಿದ ವೈಭವ್ ಅವರ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ದಿಗ್ಗಜರು ವೈಭವ್ ಅವರನ್ನು ಸಂತೈಸುವ ಕೆಲಸ ಮಾಡಿದ್ದರು. ಅವರಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ತಮ್ಮ ಎಕ್ಸ್​ ಖಾತೆಯಲ್ಲಿ ವೈಭವ್ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು, ‘15ನೇ ವಯಸ್ಸಿನಲ್ಲಿ ನಿನ್ನ ಆಟ ಸ್ಮರಣೀಯವಾದದ್ದು ಸೂರ್ಯ (ವೈಭವ್ ಸೂರ್ಯವಂಶಿ). ನಿನ್ನ ವಯಸ್ಸಲ್ಲಿ ನಮಗೆ ಸರಿಯಾಗಿ ಗೋಲಿ ಹಾಗೂ ಗಲ್ಲಿ ಕ್ರಿಕೆಟ್ ಆಡಲು ಬರುತ್ತಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಗುಜರಾತ್ ವಿರುದ್ಧ ವೈಭವ್ ಪ್ರದರ್ಶನ

ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್ ಕೇವಲ 47 ಎಸೆತಗಳಲ್ಲಿ 96 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್​ಗಳನ್ನು ಬಾರಿಸಿದರು. ಈ ಇನ್ನಿಂಗ್ಸ್ ಮೂಲಕ ವೈಭವ್ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಆದಾಗ್ಯೂ ರಾಜಸ್ಥಾನ್ ತಂಡದ ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್​ನಿಂದಾಗಿ ತಂಡಕ್ಕೆ ಸೋಲಿನ ಆಘಾತ ಎದುರಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *