ಐಪಿಎಲ್ 2026 ರ ಫೈನಲ್ ಪಂದ್ಯ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಈ ಫೈನಲ್ ಪಂದ್ಯ ಮುಗಿಯುವುದಕ್ಕೆ ಮುನ್ನವೇ ಈ ಬಾರಿಯ ಆರೆಂಜ್ ಕ್ಯಾಚ್ ಯಾರ ಪಾಲಾಗಿದೆ ಎಂಬುದು ಖಚಿತವಾಗಿದೆ. ವಾಸ್ತವವಾಗಿ ಎಲ್ಲರಿಗೂ ತಿಳಿದಿರುವಂತೆ ಇಡೀ ಆವೃತ್ತಿಯಲ್ಲಿ ಯಾರು ಅತ್ಯಧಿಕ ರನ್ ಕಲೆಹಾಕುತ್ತಾರೋ ಅವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಈ ಆರೆಂಜ್ ಕ್ಯಾಪ್ ರೇಸ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದರು. ಆದಾಗ್ಯೂ ಅದರ ನಂತರದ ಎರಡು ಸ್ಥಾನಗಳಲ್ಲಿ ಗುಜರಾತ್ ತಂಡದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಇದ್ದ ಕಾರಣ ಫೈನಲ್ ಪಂದ್ಯ ಮುಗಿದ ಬಳಿಕವಷ್ಟೇ ಆರೆಂಜ್ ಕ್ಯಾಪ್ ಯಾರ ಪಾಲಾಗಲಿದೆ ಎಂಬುದನ್ನು ಅಧಿಕೃತವಾಗಿ ಹೇಳಬಹುದಾಗಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಗಿಲ್ ಹಾಗೂ ಸುದರ್ಶನ್, ಸೂರ್ಯವಂಶಿ ಅವರನ್ನು ಮೀರಿಸದ ಕಾರಣ ಅವರಿಬ್ಬರು ಈ ರೇಸ್ನಿಂದ ಹೊರಬಿದ್ದಿದ್ದು, ವೈಭವ್ಗೆ ಈ ಕ್ಯಾಪ್ ಸಿಕ್ಕಿದೆ.