ಖಾಸಗಿ ಆಸ್ಪತ್ರೆಗಳ ‘ಟ್ರಾನ್ಸ್‌ಪ್ಲಾಂಟ್’ ದಂಧೆಗೆ ಬೀಳುತ್ತಾ ಬ್ರೇಕ್? ಸರ್ಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಖರ್ಚಿನಲ್ಲಿ ಸಿಗಲಿದೆ ಹೈಟೆಕ್ ಚಿಕಿತ್ಸೆ!

ಬೆಂಗಳೂರು, ಜೂನ್ 01: ಕೆಲ ಖಾಸಗಿ ಆಸ್ಪತ್ರೆಗಳ ಕಳ್ಳಾಟ ಹಾಗೂ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ದಂಧೆ ಈಗಿನದಲ್ಲ. ಪ್ರತಿಯೊಂದು ಚಿಕಿತ್ಸೆಗೂ ಲಕ್ಷ ಲಕ್ಷ ಪೀಕುವ ಖಾಸಗಿ ಆಸ್ಪತ್ರೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಅಂಗಾಂಗ ಕಸಿ (Organ Transplant) ಚಿಕಿತ್ಸೆ ಮಾಡಿಸಬೇಕೆಂದರೆ ಬಡ ಹಾಗೂ ಮಧ್ಯಮ ವರ್ಗದ ಜನರು ದುಪ್ಪಟ್ಟು ಹಣ ನೀಡಿ ಬೀದಿಗೆ ಬೀಳುವ ಪರಿಸ್ಥಿತಿ ಇದೆ. ಈ ಜಾಲಕ್ಕೆ ಕಡಿವಾಣ ಹಾಕಲು ಮತ್ತು ಜನಸಾಮಾನ್ಯರಿಗೆ ನೆರವಾಗಲು ಈಗ ಆರೋಗ್ಯ ಇಲಾಖೆ ಮಹತ್ವದ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ.

ಮುಖ್ಯಾಂಶಗಳು

  • ಖಾಸಗಿ ಆಸ್ಪತ್ರೆಗಳ ದುಬಾರಿ ಅಂಗಾಂಗ ಕಸಿ ಚಿಕಿತ್ಸಾ ವೆಚ್ಚಕ್ಕೆ ಕ್ಯಾಪಿಂಗ್ ಜಾರಿ ಸಾಧ್ಯತೆ.
  • ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ಪರಿಚಯಿಸಲು ಆರೋಗ್ಯ ಇಲಾಖೆ ಮುಂದು.
  • ಖಾಸಗಿಯವರ ಸುಲಿಗೆಗೆ ಕಡಿವಾಣ ಹಾಕಲು ಸಚಿವ ದಿನೇಶ್ ಗುಂಡೂರಾವ್‌ಗೆ ಮಾಜಿ ಸಿಎಂ ಸೂಚನೆ.

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ‘ಕ್ಯಾಪಿಂಗ್’ ಬಿಸಿ!

ಲಿವರ್, ಕಿಡ್ನಿ, ಬೋನ್ ಮ್ಯಾರೋ ಹಾಗೂ ಶ್ವಾಸಕೋಶದಂತಹ ಅತ್ಯಂತ ಜಟಿಲ ಹಾಗೂ ದುಬಾರಿ ಟ್ರಾನ್ಸ್‌ಪ್ಲಾಂಟ್‌ಗಳಿಗೆ ಖಾಸಗಿ ಆಸ್ಪತ್ರೆಗಳು 5 ಲಕ್ಷದಿಂದ ಹಿಡಿದು 20 ಹಾಗೂ 50 ಲಕ್ಷ ರೂಪಾಯಿವರೆಗೂ ಬೇಕಾಬಿಟ್ಟಿ ಚಾರ್ಜ್ ಮಾಡುತ್ತಿವೆ. ಬಡವರಿಗೆ ಸರ್ಕಾರದಿಂದ ಸಿಗುವ ಲೋನ್ ಅಥವಾ ನೆರವು ಕೇವಲ 5 ಲಕ್ಷ ರೂಪಾಯಿ ಮಾತ್ರ ಇರುವುದರಿಂದ, ಬಾಕಿ ಹಣ ಹೊಂದಿಸಲಾಗದೆ ಅದೆಷ್ಟೋ ರೋಗಿಗಳು ಕಣ್ಣೀರಿಡುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ, ಹೈಟೆಕ್ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಗರಿಷ್ಠ ಮಿತಿ ಅಂದರೆ ‘ಕ್ಯಾಪಿಂಗ್’ (Capping) ಜಾರಿಗೊಳಿಸಲು ಚಿಂತನೆ ನಡೆಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೇ ಅಂಗಾಂಗ ಕಸಿ: ಮಾಜಿ ಸಿಎಂ ಸೂಚನೆ

ಖಾಸಗಿ ಆಸ್ಪತ್ರೆಗಳ ಈ ಮನಸೋಇಚ್ಛೆ ಲೂಟಿಗೆ ಕಡಿವಾಣ ಹಾಕುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕೊನೆಯ ಆರೋಗ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕಡಕ್ ಸೂಚನೆ ನೀಡಿದ್ದರು. “ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ವ್ಯವಸ್ಥೆ ಖಾಸಗಿಯವರಿಗಿಂತ ಕಡಿಮೆ ಇರಬಾರದು. ಆರೋಗ್ಯ ಸೇವೆಗೆ ಏನು ಬೇಕಾದರೂ ಮಾಡಲು ನಾನು ಸಿದ್ಧ” ಎಂದು ಹೇಳಿದ್ದರು. ಅವರ ಕನಸಿನಂತೆಯೇ, ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲೇ ಅತ್ಯಾಧುನಿಕ ಅಂಗಾಂಗ ಕಸಿ ಚಿಕಿತ್ಸೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *