Headlines

GBA 1KmChallenge: ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್; ಮೊದಲು ಫುಟ್‌ಪಾತ್ ಸರಿ ಮಾಡಿ ಎಂದ ಜನ!

ಬೆಂಗಳೂರಲ್ಲಿ ಮಾಲಿನ್ಯ ತಡೆಯಲು ಜಿಬಿಎ ಮಾಸ್ಟರ್ ಪ್ಲಾನ್

ಬೆಂಗಳೂರು, ಜೂನ್ 02: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಒಂದು ವಿಶಿಷ್ಟ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿದೆ. ಜೂನ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ #1KmChallenge (ಒಂದು ಕಿಲೋಮೀಟರ್ ಚಾಲೆಂಜ್) ಎಂದು ಹೆಸರಿಡಲಾಗಿದ್ದು, 1 ಕಿಲೋಮೀಟರ್ ವ್ಯಾಪ್ತಿಯ ಸಂಚಾರಕ್ಕೆ ವಾಹನ ಬಳಸಬೇಡಿ, ನಡೆದುಕೊಂಡು ಹೋಗಿ ಎಂದು ಜಿಬಿಎ ಜನರಲ್ಲಿ ಮನವಿ ಮಾಡಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಾಲಿನ್ಯ ತಗ್ಗಿಸಲು ಜಿಬಿಎ ಸಂಸ್ಥೆಯಿಂದ ಹೊಸ ಪರಿಸರ ಅಭಿಯಾನ.
  • ಒಂದು ಕಿಲೋಮೀಟರ್ ವ್ಯಾಪ್ತಿಯ ಸಂಚಾರಕ್ಕೆ ವಾಹನ ಬಳಸದಂತೆ ಜನರಲ್ಲಿ ಮನವಿ.
  • ಕಳಪೆ ಫುಟ್‌ಪಾತ್‌ಗಳನ್ನು ನೆನೆದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ನಾಗರಿಕರು.

ಏನಿದು ‘#1KmChallenge’ ಅಭಿಯಾನ?

ಗ್ರೇಟರ್ ಬೆಂಗಳೂರು ಅಥಾರಿಟಿಯ ಕ್ಲೈಮೇಟ್ ಆಕ್ಷನ್ ಸೆಲ್ (ಹವಾಮಾನ ಕ್ರಿಯಾ ಕೋಶ) ಈ ನೂತನ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದಲ್ಲಿ ಜನರು ಕೇವಲ ಅರ್ಧ ಅಥವಾ ಒಂದು ಕಿಲೋಮೀಟರ್ ದೂರದ ಅಂಗಡಿ, ಕಚೇರಿ ಅಥವಾ ಮೆಟ್ರೋ ನಿಲ್ದಾಣಗಳಿಗೆ ಹೋಗಲು ಸಹ ಬೈಕ್ ಅಥವಾ ಕಾರುಗಳನ್ನು ಅವಲಂಬಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಹಾಗೂ ಮಾಲಿನ್ಯ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು, 1 ಕಿಲೋಮೀಟರ್ ಒಳಗಿನ ದೂರಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಕಾಲಿಗೆ ಕೆಲಸಕೊಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಈ ಅಭಿಯಾನದ ಪ್ರಮುಖ ಉದ್ದೇಶಗಳೇನು?

  1. ವಾಹನಗಳ ಬಳಕೆ ಕಡಿಮೆ ಮಾಡಿ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದು.
  2. ದೈನಂದಿನ ನಡಿಗೆಯಿಂದ ಜಡ ಜೀವನಶೈಲಿ ಬದಲಾಯಿಸಿ ದೈಹಿಕ ಆರೋಗ್ಯ ಸುಧಾರಿಸುವುದು.
  3. ರಸ್ತೆಗಳ ಮೇಲಿನ ವಾಹನಗಳ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವುದು.

ಅಭಿಯಾನದ ಬೆನ್ನಲ್ಲೇ ಸಾರ್ವಜನಿಕರ ಆಕ್ರೋಶ!

ಜಿಬಿಎ ಸಂಸ್ಥೆಯು ಜೂನ್ ತಿಂಗಳ ಈ ಸವಾಲನ್ನು ಸ್ವೀಕರಿಸಿ, ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಸವಾಲು ಹಾಕುವಂತೆ ಬೆಂಗಳೂರಿಗರಲ್ಲಿ ವಿನಂತಿಸಿದೆ. ಆದರೆ, ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಭಿಯಾನದ ಆಶಯವನ್ನು ಒಪ್ಪಿಕೊಂಡರೂ, ಬೆಂಗಳೂರಿನ ರಸ್ತೆಗಳ ವಾಸ್ತವ ಸ್ಥಿತಿಯನ್ನು ನೆಟ್ಟಿಗರು ಜಿಬಿಎಗೆ ನೆನಪಿಸಿದ್ದಾರೆ. ನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ಗಳು ಧ್ವಂಸವಾಗಿವೆ. ಕಸದ ರಾಶಿ ಬಿದ್ದಿದೆ. ಅಲ್ಲದೆ ತೆರೆದ ಚರಂಡಿಗಳು ಮತ್ತು ರಸ್ತೆ ತುಂಬಾ ಇರುವ ಗುಂಡಿಗಳಿಂದಾಗಿ ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ನಡೆಯುವುದು ಹೇಗೆ ಸುರಕ್ಷಿತ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ ರೇಸ್ ಕೋರ್ಸ್ ರಸ್ತೆ ಕಾಮಗಾರಿ: 8 ತಿಂಗಳಾದರೂ ಮುಗಿಯದ ಕೆಲಸಕ್ಕೆ ಸಾರ್ವಜನಿಕರ ಹಿಡಿಶಾಪ!

ಮೊದಲು ಪಾದಚಾರಿಗಳಿಗೆ ಸುರಕ್ಷಿತ, ವಿಶಾಲವಾದ ಮತ್ತು ನಿರಂತರವಾದ ಫುಟ್‌ಪಾತ್‌ಗಳನ್ನು ನಿರ್ಮಿಸಿಕೊಡಿ, ಆಮೇಲೆ ಇಂತಹ ಅಭಿಯಾನಗಳನ್ನು ಮಾಡಿ ಎಂದು ನಾಗರಿಕರು ಜಿಬಿಎ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *