Headlines

‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ – Kannada News

ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಮತ್ತು ಮಹೇಶ್ ಬಾಬು ಅಭಿನಯದ ‘ವಾರಣಾಸಿ’ (Varanasi) ಚಿತ್ರಗಳ ಬಜೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಗಳ ಬಜೆಟ್ ಹೈಪ್ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮನೋಜ್ ಬಾಜಪೇಯಿ (Manoj Bajpayee) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿನಿಮಾ ಕಥೆಗಿಂತ ಬಜೆಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಪ್ರೇಕ್ಷಕರ ಬಗ್ಗೆ ಅವರು ಮಾತನಾಡಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಿನಿಮಾಗಳ ಭಾರಿ ಬಜೆಟ್ ಪ್ರಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮನೋಜ್, ‘ಇದೆಲ್ಲವೂ ಕೇವಲ ಒಂದು ಪಿಆರ್ ತಂತ್ರ. ಕಳೆದ 15 ವರ್ಷಗಳಿಂದ ಇಂತಹ ಬಜೆಟ್ ಹೈಪ್ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಲೇ ಇವೆ’ ಎಂದು ನೇರವಾಗಿ ಹೇಳಿದ್ದಾರೆ. ಚಿತ್ರದ ಕಲೆಕ್ಷನ್ ಮತ್ತು ಬಜೆಟ್ ನೋಡಿ ಸಿನಿಮಾವನ್ನು ಹೈಪ್ ಮಾಡುವ ಪ್ರೇಕ್ಷಕರ ಮನಸ್ಥಿತಿಯನ್ನು ಅವರು ಖಂಡಿಸಿದ್ದಾರೆ.

‘ಈ ಬಜೆಟ್ ಮತ್ತು ಬಾಕ್ಸ್ ಆಫೀಸ್ ನಂಬರ್‌ಗಳ ಹುಚ್ಚು ಜನರಿಗೆ ಎಷ್ಟು ಹಿಡಿದಿದೆ ಎಂದರೆ, ಏರ್‌ಪೋರ್ಟ್‌ನಲ್ಲಿ ಯಾರಾದರೂ ಪ್ರೇಕ್ಷಕರು ಸಿಕ್ಕರೆ ಸಾಕು ಚಿತ್ರದ ಕಲೆಕ್ಷನ್ ಲೆಕ್ಕದ ಬಗ್ಗೆ ಮಾತನಾಡುತ್ತಾರೆ. ಅಂತವರಿಗೆ ನಾನು ಹಲವು ಬಾರಿ ಬೈದಿದ್ದೇನೆ. ಈ ಕೋಟಿ ಕೋಟಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆಯೇ? ಒಂದು ರೂಪಾಯಿಯೂ ನಿಮಗೆ ಸಿಗುವುದಿಲ್ಲ ಎಂದಮೇಲೆ ಬಾಕ್ಸ್ ಆಫೀಸ್ ನಂಬರ್ ಬಗ್ಗೆ ನಿಮಗೇಕೆ ಚಿಂತೆ? ಸಿನಿಮಾ ನಿಮಗೆ ಇಷ್ಟವಾಯಿತೋ ಇಲ್ಲವೋ ಎಂಬುದರ ಬಗ್ಗೆ ಮಾತ್ರ ಮಾತನಾಡಿ ಎಂದು ಹೇಳಿ ಅವರ ಬಾಯಿ ಮುಚ್ಚಿಸಿದ್ದೇನೆ’ ಎಂದಿದ್ದಾರೆ ಮನೋಜ್ ಬಾಜಪೇಯಿ.

‘ರಾಮಾಯಣ’ ಸಿನಿಮಾದ ಬಜೆಟ್ 4,000 ಕೋಟಿ ರೂಪಾಯಿ ಎನ್ನಲಾಗಿದೆ. ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ), ಸನ್ನಿ ಡಿಯೋಲ್ (ಹನುಮಂತ) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾವಣ) ನಟಿಸುತ್ತಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಪ್ರಾಜೆಕ್ಟ್ ಎನ್ನಲಾಗಿದೆ. ಇದರ ಮೊದಲ ಭಾಗ ಈ ವರ್ಷದ ದೀಪಾವಳಿಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕೆ ಪಾಶ್ಚಿಮಾತ್ಯ ಶೈಲಿಯ ಸ್ಪರ್ಶ: ಸಮರ್ಥನೆ ಮಾಡಿಕೊಂಡ ಯಶ್

‘ವಾರಣಾಸಿ’ ಚಿತ್ರದ ಬಜೆಟ್ 1,400 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟಿಸುತ್ತಿರುವ ಈ ಚಿತ್ರ ಕೂಡ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಪ್ರಿಯಾಂಕಾ ಚೋಪ್ರಾ ಕಂಬ್ಯಾಕ್ ಮಾಡುತ್ತಿರುವ ಈ ಸಿನಿಮಾ, ಸಂಪೂರ್ಣವಾಗಿ ‘1.43:1 IMAX’ ಫಾರ್ಮ್ಯಾಟ್‌ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *