ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ? – Kannada News

ನವದೆಹಲಿ, ಜೂನ್ 5: ಭಾರತದಲ್ಲಿರುವ ಎಟಿಎಂಗಳಲ್ಲಿ ಅಗತ್ಯ ಕ್ಯಾಷ್ ಪೂರೈಕೆ (Cash supply) ಆಗುತ್ತಿಲ್ಲ ಎನ್ನುವಂತಹ ವರದಿಯೊಂದು ಬಂದಿದೆ. ಎಟಿಎಂ ಯಂತ್ರಗಳಲ್ಲಿ ಕ್ಯಾಷ್ ಕೊರತೆ ಎದುರಾಗಿದೆ. ಈ ವಿಚಾರದ ಬಗ್ಗೆ ಎಟಿಎಂ ಉದ್ಯಮದ ಮಹಾಒಕ್ಕೂಟವಾದ ಸಿಎಟಿಎಂಐ (CATMi) ಭಾರತೀಯ ಬ್ಯಾಂಕುಗಳ ಸಂಸ್ಥೆಯ (ಐಬಿಎ) ಗಮನಕ್ಕೆ ತಂದಿದೆ ಎಂದು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. ಭಾರತದ ಆರ್ಥಿಕತೆಯೊಳಗೆ ಅತಿಹೆಚ್ಚು ಕ್ಯಾಷ್ ಹರಿವು ಇರುವ ಸಂದರ್ಭದಲ್ಲೇ ಎಟಿಎಂಗಳಲ್ಲಿ ಕ್ಯಾಷ್ ಕ್ರಂಚ್ ಪರಿಸ್ಥಿತಿ ಉದ್ಭವವಾಗಿರುವುದು ಅಚ್ಚರಿಯ ಸಂಗತಿ.

ಈ ವರದಿ ಪ್ರಕಾರ ಭಾರತದಾದ್ಯಂತ ಎಟಿಎಂಗಳಲ್ಲಿ 94,000 ಕೋಟಿ ರೂ ಮೊತ್ತದ ಕ್ಯಾಷ್ ಇರಬೇಕಿತ್ತು. ಆದರೆ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಎಲ್ಲಾ ಎಟಿಎಂಗಳಲ್ಲಿದ್ದ ನಗದು ಹಣ ಕ್ರಮವಾಗಿ 54,000 ಕೋಟಿ ರೂ ಮತ್ತು 61,000 ಕೋಟಿ ರೂ ಎನ್ನಲಾಗಿದೆ. ಅಂದರೆ, ಎಟಿಎಂಗಳಲ್ಲಿ ಸರಾಸರಿಯಾಗಿ ಕ್ಯಾಷ್ ಭರ್ತಿಯಾಗಿರುವುದು ಶೇ 60ರ ಆಸುಪಾಸು ಮಾತ್ರ.

ಕರ್ನಾಟಕದಲ್ಲಿ ಅತಿಹೆಚ್ಚು ಕೊರತೆ…

ದೇಶಾದ್ಯಂತ ಸರಾಸರಿಯಾಗಿ ಎಟಿಎಂಗಳಲ್ಲಿ ಶೇ 60ರಷ್ಟು ಕ್ಯಾಷ್ ಇದ್ದರೆ, ಕರ್ನಾಟಕದಲ್ಲಿ ಇದು ಶೇ. 36 ಮಾತ್ರವೇ. ಅಂದರೆ, ಕರ್ನಾಟಕದಲ್ಲಿರುವ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಅತಿ ಹೆಚ್ಚು ಇದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಎಟಿಎಂಗಳಲ್ಲಿ ಇರುವ ಕ್ಯಾಷ್ ಶೇ. 39, ಶೇ. 41ರಷ್ಟು ಮಾತ್ರವೇ ಎಂದು ಈ ವರದಿ ಹೇಳುತ್ತದೆ.

ಇದನ್ನೂ ಓದಿ: ಬಂಡವಾಳ ಆಕರ್ಷಿಸಲು ಬ್ಯಾಂಕುಗಳಿಗೆ ಹೆಡ್ಡಿಂಗ್ ಸಪೋರ್ಟ್​ನಿಂದ ಹಿಡಿದು ಎನ್​ಆರ್​ಐ ಹೂಡಿಕೆ ಮಿತಿ ಹೆಚ್ಚಳದವರೆಗೆ ಆರ್​ಬಿಐನಿಂದ 5 ಕ್ರಮಗಳು

ಆರ್ಥಿಕತೆಯಲ್ಲಿ ಭಾರೀ ಪ್ರಮಾಣದಲ್ಲಿ ನಗದು ಹಣ ಇದ್ದರೂ ಎಟಿಎಂಗಳಲ್ಲಿ ಕ್ಯಾಷ್ ಕೊರತೆ ಯಾಕೆ ಕಾಡುತ್ತಿದೆ? ಇದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಎಟಿಎಂ ಇಂಟರ್​ಚೇಂಜ್ ಶುಲ್ಕ ಮೊದಲಾದ ಸಮಸ್ಯೆಗಳು ಒಳಗೊಂಡಿವೆ.

ಎಟಿಎಂ ಇಂಟರ್​ಚೇಂಜ್ ಫೀ ಎಂಬುದು ಒಂದು ಬ್ಯಾಂಕು ತನ್ನ ಗ್ರಾಹಕ ಬೇರೊಂದು ಬ್ಯಾಂಕಿನ ಎಟಿಎಂ ಬಳಸಿದಾಗ ಆ ಬ್ಯಾಂಕಿಗೆ ತೆರಬೇಕಾದ ಶುಲ್ಕ. ಎಟಿಎಂನಲ್ಲಿ ಕ್ಯಾಷ್ ತುಂಬಿಸುವುದು, ಭದ್ರತೆ ಒದಗಿಸುವುದು ಇತ್ಯಾದಿ ಕೆಲಸಗಳಿಗೆ ಸಾಕಷ್ಟು ವ್ಯಯವಾಗುತ್ತದೆ. ಇದನ್ನು ಭರಿಸುವಷ್ಟು ಪ್ರಮಾಣದ ಇಂಟರ್​ಚೇಂಜ್ ಫೀ ಇಲ್ಲ ಎನ್ನುವುದು ಉದ್ಯಮದ ಅಳಲು. ಸರ್ಕಾರ ಇತ್ತೀಚೆಗಷ್ಟೇ ಈ ಇಂಟರ್​ಚೇಂಜ್ ಫೀ ಅನ್ನು 17 ರೂನಿಂದ 19 ರೂಗೆ ಏರಿಸಿದೆ. ಆದರೆ, ಇದು ಸಾಕಾಗುವುದಿಲ್ಲ ಎಂದು ಈ ಉದ್ಯಮದವರು ಹೇಳುತ್ತಿದ್ದಾರೆ.

ಎಟಿಎಂ ಬಳಕೆಯಲ್ಲೂ ಇಳಿಮುಖ

ಭಾರತದಾದ್ಯಂತ ಎಟಿಎಂ ಬಳಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. 2025ರ ಮೇ ತಿಂಗಳಲ್ಲಿ ಹತ್ತಿರಹತ್ತಿರ 50 ಕೋಟಿ ಸಂಖ್ಯೆಯಷ್ಟು ಎಟಿಎಂ ಟ್ರಾನ್ಸಾಕ್ಷನ್ಸ್ ಆಗಿದ್ದವು. ಈ ವರ್ಷದ ಮೇ ತಿಂಗಳಲ್ಲಿ ಅದು 44.6 ಕೋಟಿಗೆ ಇಳಿಕೆ ಆಗಿದೆ.

ಇದನ್ನೂ ಓದಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆಬಿ ನೊಂದಣಿ ಇಲ್ಲದೇ ಎನ್​ಆರ್​ಐಗಳಿಗೆ ಹೂಡಿಕೆ ಮಿತಿ ಹೆಚ್ಚಳ

ಈ ಇಳಿಕೆಗೆ ವಿವಿಧ ಕಾರಣಗಳಿವೆ. ಎಟಿಎಂನಿಂದ ಫ್ರೀ ಲಿಮಿಟ್ ದಾಟಿ ಮಾಡಲಾಗುವ ಟ್ರಾನ್ಸಾಕ್ಷನ್​ಗೆ 23 ರೂ ವಿಧಿಸಲಾಗುತ್ತದೆ. ಇದರಿಂದ ಗ್ರಾಹಕರು ಎಟಿಎಂನಿಂದ ದೂರವಾಗುತ್ತಿರಬಹುದು.

ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ದೊಡ್ಡ ಹೊಡೆತ

ಒಂದು ಅಂದಾಜು ಪ್ರಕಾರ, ಎಟಿಎಂಗಳನ್ನು ಈಗ ಅತಿಹೆಚ್ಚು ಬಳಸುವುದು ಡಿಬಿಟಿ ಸ್ಕೀಮ್​ನ ಫಲಾನುಭವಿಗಳು. ಪಿಎಂ ಕಿಸಾನ್ ಯೋಜನೆಯಂತಹ ಸ್ಕೀಮ್​ಗಳಲ್ಲಿ ಸರ್ಕಾರವು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇವರು ಎಟಿಎಂ ಮೂಲಕ ಹಣ ವಿತ್​ಡ್ರಾ ಮಾಡುತ್ತಾರೆ. ಈಗ ಎಟಿಎಂಗಳಲ್ಲಿ ಉಂಟಾಗಿರುವ ಕ್ಯಾಷ್ ಕೊರತೆಯಿಂದ ಅತಿಹೆಚ್ಚು ಬಾಧಿತವಾಗುವುದು ಈ ವರ್ಗದ ಜನರೇ. ಅದರಲ್ಲೂ ಕರ್ನಾಟಕದಲ್ಲಿರುವ ಫಲಾನುಭವಿಗಳು ಈ ಸಂಕಷ್ಟ ಎದುರಿಸುವಂತಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 3:39 pm, Fri, 5 June 26

Source link

Leave a Reply

Your email address will not be published. Required fields are marked *