Headlines

Karnataka Weather Forecast: ಮುಂಗಾರು ಮಳೆ ಚುರುಕು, ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; 2 ದಿನ ರೆಡ್‌ ಅಲರ್ಟ್‌ – Kannada News

ಹುಬ್ಬಳ್ಳಿಯಲ್ಲಿ ಸುರಿದ ಮಳೆImage Credit source: tv9

ಬೆಂಗಳೂರು, ಜೂನ್ 8: ಕರ್ನಾಟಕದಲ್ಲಿ ಮುಂಗಾರು ಮಳೆ (Monsoon) ಚುರುಕು ಪಡೆದುಕೊಂಡಿದ್ದು ದಕ್ಷಿಣ ಕನ್ನಡ, ಬಳ್ಳಾರಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದೆ. ಧಾರಾಕಾರ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದು, ಮನೆ, ಆಸ್ಪತ್ರೆ ಹಾಗೂ ಕಚೇರಿಗಳಿಗೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಈ ಮಧ್ಯೆ, ಕೇಂದ್ರ ಹವಾಮಾನ ಇಲಾಖೆ (IMD) ಇಡೀ ರಾಜ್ಯಕ್ಕೆ ಜೂನ್ 9 (ಮಂಗಳವಾರ) ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಿಗೆ ಮತ್ತು ಜೂನ್ 10 (ಬುಧವಾರ) ರಾಜ್ಯಾದ್ಯಂತ ರೆಡ್ ಅಲರ್ಟ್ (Red Alert) ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಚುರುಕುಗೊಂಡ ಮುಂಗಾರು ಮಳೆ.
  • ರಾಜ್ಯಾದ್ಯಂತ ಮುಂದಿನ ಎರಡು ದಿನ ರೆಡ್ ಅಲರ್ಟ್.
  • ಕರಾವಳಿಯಲ್ಲಿ ಕಟ್ಟೆಚ್ಚರ, ಎನ್‌ಡಿಆರ್‌ಎಫ್ ತಂಡ ನಿಯೋಜನೆ.

ಎಲ್ಲೆಲ್ಲಿ ರೆಡ್ ಅಲರ್ಟ್?

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜೂನ್ 9ರ ಮಂಗಳವಾರದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ 10ರ ಬುಧವಾರದಂದು ಕರ್ನಾಟಕದಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಗಳಲ್ಲಿ ಮಳೆ ಅವಾಂತರಗಳ ಮಹಾಪೂರ

ಬಳ್ಳಾರಿ: ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ರೇಣುಕಾನಗರ, ರಾಣಿಪೇಟ್ ಮತ್ತು ಹಳೇ ತಾಲೂಕು ಕಚೇರಿ ರಸ್ತೆಗಳು ಜಲಮಯವಾಗಿದ್ದು, ಪ್ರಸಿದ್ಧ ವಿಮ್ಸ್ ಆಸ್ಪತ್ರೆಯ ಒಳಗೂ ನೀರು ನುಗ್ಗಿದೆ. ಇದರಿಂದಾಗಿ ರೋಗಿಗಳನ್ನು ಮಳೆ ನೀರಿನಲ್ಲೇ ಸಾಗಿಸಬೇಕಾದ ದುಃಸ್ಥಿತಿ ಎದುರಾಯಿತು. ಜೆಸ್ಕಾಂ ಕಚೇರಿಯ ಆವರಣ ಜಲಾವೃತಗೊಂಡು ಟ್ರಾನ್ಸ್‌ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ.

Ballari Rain Vims Hospital

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಕೊಠಡಿಗೆ ನೀರು ನುಗ್ಗಿರುವುದು

ಚಿತ್ರದುರ್ಗ, ಬೆಳಗಾವಿ: ಚಿತ್ರದುರ್ಗ ನಗರದಲ್ಲಿ ರಾತ್ರಿ ಸುರಿದ ಮಳೆಗೆ ಚರಂಡಿಗಳು ತುಂಬಿ ಹರಿದಿದ್ದು, ತುರುವನೂರು ರಸ್ತೆಯಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ವೃದ್ಧರೊಬ್ಬರು ಗಾಯಗೊಂಡಿದ್ದಾರೆ. ಬೆಳಗಾವಿಯ ಖಾನಾಪುರ ತಾಲೂಕಿನ ಪಾರಶ್ವಾಡ ಗ್ರಾಮದಲ್ಲಿ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ಅದೇ ನೀರಿನಲ್ಲೇ ಟ್ರ್ಯಾಕ್ಟರ್ ಹಾಗೂ ಬೈಕ್‌ಗಳು ಸಂಚಸಿವೆ.

ಬಾಗಲಕೋಟೆ, ಹಾವೇರಿ: ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಚೆನ್ನಗೀರೇಶ್ವರ ದೇವಸ್ಥಾನದ ಅಂಗಳ ಜಲಾವೃತಗೊಂಡು, ಮೆಟ್ಟಿಲುಗಳಿಂದ ಜಲಪಾತದಂತೆ ನೀರು ಹರಿದಿದೆ. ವಲ್ಲಭಬಾಯಿ ವೃತ್ತದ ಬಳಿ ಮನೆಯೊಂದರ ಮೇಲ್ಚಾವಣಿ ಕುಸಿದು ಬಿದ್ದಿದೆ. ಹಾವೇರಿಯ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಕೇವಲ ಎರಡು ತಿಂಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.

ರೈತರು ಕಂಗಾಲು, ಕರಾವಳಿಯಲ್ಲಿ ಹೈ ಅಲರ್ಟ್

ಕೋಲಾರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮಾವು, ಬಾಳೆ, ಪಪ್ಪಾಯ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಕಳೆದ ಒಂದು ತಿಂಗಳಲ್ಲಿ ಸುಮಾರು 1200 ಹೆಕ್ಟೇರ್ ಬೆಳೆ ಹಾನಿಯಾಗಿದ್ದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಆಸ್ಪತ್ರೆ ಎದುರು ರಸ್ತೆಗಳು ಜಲಾವೃತವಾಗಿದ್ದರೆ, ಗೋಕರ್ಣ ಮಾರ್ಗ ಮಧ್ಯೆ ಪ್ರವಾಸಿಗರ ವಾಹನದ ಮೇಲೆಯೇ ಬೃಹತ್ ಮರ ಉರುಳಿ ಬಿದ್ದಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಮನೆ‌ ಮೇಲ್ಚಾವಣಿ: ತಂದೆ, ಮಗನ ಜೀವ ಉಳಿಸಿದ ಸಾಕು ಬೆಕ್ಕು

ಮುಂಗಾರು ಅಬ್ಬರ ಹೆಚ್ಚಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, 24X7 ಕಂಟ್ರೋಲ್ ರೂಮ್ ತೆರೆಯಲಾಗಿದೆ. ಪುತ್ತೂರಿನಲ್ಲಿ 30 ಸದಸ್ಯರ ಎನ್‌ಡಿಆರ್‌ಎಫ್ (NDRF) ತಂಡ ಬೀಡುಬಿಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *