Headlines

ಬಳ್ಳಾರಿಯಲ್ಲಿ ಮುಂಗಾರು ಮಳೆ ಅಬ್ಬರ, ಭಾರಿ ಅವಾಂತರ: ವಿಮ್ಸ್ ಆಸ್ಪತ್ರೆ, ಕೆಇಬಿ ಕಚೇರಿಗಳಿಗೆ ನುಗ್ಗಿದ ನೀರು – Kannada News

ವಿಮ್ಸ್ ಆಸ್ಪತ್ರೆಗೆ ನೀರು ನುಗ್ಗಿರುವುದು.Image Credit source: tv9

ಬಳ್ಳಾರಿ, ಜೂನ್ 8: ಗಣಿನಾಡು ಬಳ್ಳಾರಿಯಲ್ಲಿ (Ballari) ಶನಿವಾರ ರಾತ್ರಿ ಹಾಗೂ ಭಾನುವಾರ ಸುರಿದ ಭೀಕರ ಮಳೆ ನಗರದಾದ್ಯಂತ ಭಾರಿ ಅವಾಂತರಗಳನ್ನು ಸೃಷ್ಟಿಸಿದೆ. ಧಾರಾಕಾರವಾಗಿ ಸುರಿದ ಮಳೆಯ ಆರ್ಭಟಕ್ಕೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಿಮ್ಸ್ ಆಸ್ಪತ್ರೆ (VIMS Hospital) ಹಾಗೂ ಮುಖ್ಯ ಕೆಇಬಿ (KEB) ವಿದ್ಯುತ್ ವಿತರಣಾ ಕೇಂದ್ರಕ್ಕೆ ನೀರು ನುಗ್ಗಿದೆ. ಇದರ ನಡುವೆ, ನಗರದ ಹಂದ್ರಾಳ ಹಳ್ಳದಲ್ಲಿ ಬ್ಯಾಂಕ್ ಮಹಿಳಾ ಉದ್ಯೋಗಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಮಳೆಯ ನೀರಿನ ರಭಸಕ್ಕೆ ಕೊಚ್ಚಿಹೋಗಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮುಖ್ಯಾಂಶಗಳು

  • ಬಳ್ಳಾರಿಯಲ್ಲಿ ರಣಮಳೆಗೆ ಜನಜೀವನ ತತ್ತರ.
  • ವಿಮ್ಸ್ ಆಸ್ಪತ್ರೆಗೆ ನುಗ್ಗಿದ ನೀರು, ರೋಗಿಗಳ ಪರದಾಟ.
  • ಕೆಇಬಿ ಮುಳುಗಡೆ, ನಗರಾದ್ಯಂತ ವಿದ್ಯುತ್ ಸಂಪರ್ಕ ಕಡಿತ.

ವಿಮ್ಸ್ ಆಸ್ಪತ್ರೆ, ಕೆಇಬಿ ಘಟಕ ಜಲಾವೃತ

ಬಳ್ಳಾರಿ ನಗರದ ಶೇಕಡಾ 75 ರಷ್ಟು ಭಾಗಕ್ಕೆ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಕೆಇಬಿ ಘಟಕದ ಆವರಣಕ್ಕೆ ಮಳೆ ನೀರು ನುಗ್ಗಿದೆ. ಬೃಹತ್ ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ವಿದ್ಯುತ್ ನಿಯಂತ್ರಣ ಯಂತ್ರಗಳು (Regulating Machines) ನೀರಿನಲ್ಲಿ ಮುಳುಗಡೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಬಳ್ಳಾರಿ ನಗರಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ನೀರು ಸಂಪೂರ್ಣವಾಗಿ ಹೊರಹೋಗಿಲ್ಲ.

Ballari Water In Vims Hospital

ವಿಮ್ಸ್ ಆಸ್ಪತ್ರೆಯೊಳಗೆ ನೀರು ತುಂಬಿರುವುದು

ಮತ್ತೊಂದೆಡೆ, ಬಳ್ಳಾರಿಯ ವಿಮ್ಸ್ (VIMS) ಆಸ್ಪತ್ರೆಯ ಕಿಟಕಿ ಹಾಗೂ ತೆರೆದ ಪ್ಯಾಸೇಜ್‌ಗಳ ಮೂಲಕ ಮಳೆ ನೀರು ವಾರ್ಡ್‌ಗಳ ಒಳಗೆ ನುಗ್ಗಿದ್ದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರು ರಾತ್ರಿಯಿಡೀ ನಿದ್ದೆಯಿಲ್ಲದೆ ಪರದಾಡುವಂತಾಯಿತು. ಆಸ್ಪತ್ರೆಯಲ್ಲಿ ನೀರು ಸರಾಗವಾಗಿ ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂದ್ರಾಳ ಹಳ್ಳದಲ್ಲಿ ಬ್ಯಾಂಕ್ ಉದ್ಯೋಗಿಯ ಶವ ಪತ್ತೆ

ಮಳೆಯ ಅವಾಂತರದ ನಡುವೆಯೇ ಬಳ್ಳಾರಿಯ ಹಂದ್ರಾಳ ಹಳ್ಳದ ಪಕ್ಕದ ಜಾಲಿಬೆಲಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕೌಲ್ ಬಜಾರ್ ನಿವಾಸಿ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಉದ್ಯೋಗಿ ಅನಿಷಾ ಫಾತೀಮಾ (38) ಎಂದು ಗುರುತಿಸಲಾಗಿದೆ. ಅನಿಷಾ ಶನಿವಾರ ರಾತ್ರಿ ಬ್ಯಾಂಕ್ ಸಿಬ್ಬಂದಿ ಆಯೋಜಿಸಿದ್ದ ಪಾರ್ಟಿಗೆ ತೆರಳಿದ್ದರು ಎನ್ನಲಾಗಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಪತಿಗೆ ಫೋನ್ ಮಾಡಿದ್ದರು. ಆ ಬಳಿಕ ಅವರ ಸಂಪರ್ಕ ಸಿಕ್ಕಿರಲಿಲ್ಲ. ತಡರಾತ್ರಿ ಸುರಿದ ಮಳೆಗೆ ಹಂದ್ರಾಳ ಹಳ್ಳವು ಭೋರ್ಗರೆದು ಹರಿಯುತ್ತಿದ್ದು, ಅನಿಷಾ ತಮ್ಮ ಸ್ಕೂಟರ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮೃತದೇಹವು ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಪೋಷಕರು ಹಾಗೂ ಪೊಲೀಸರಲ್ಲಿ ಹಲವು ಅನುಮಾನಗಳು ಮೂಡಿವೆ.

ಇದನ್ನೂ ಓದಿ: ಮುಂಗಾರು ಮಳೆ ಚುರುಕು, ರಾಜ್ಯಾದ್ಯಂತ ಭಾರಿ ಮಳೆ ಮುನ್ಸೂಚನೆ; 2 ದಿನ ರೆಡ್‌ ಅಲರ್ಟ್‌

ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಪೋಷಕರಿಂದ ಮಾಹಿತಿ ಕಲೆಹಾಕಿದ್ದಾರೆ. ಇದು ಮಳೆ ನೀರಿನಲ್ಲಿ ಕೊಚ್ಚಿಹೋದ ಪ್ರಕರಣವೇ ಅಥವಾ ಇದರ ಹಿಂದೆ ಬೇರೆನಾದರೂ ಷಡ್ಯಂತ್ರ ಅಡಗಿದೆಯೇ ಎಂಬ ನಿಟ್ಟಿನಲ್ಲಿ ಬಳ್ಳಾರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 am, Mon, 8 June 26

Source link

Leave a Reply

Your email address will not be published. Required fields are marked *