ಟಿಎಂಸಿ ನಾಯಕ ಜಹಾಂಗೀರ್ ಖಾನ್ ಬಂಧನ, ಟಿಎಂಸಿ ಕಚೇರಿಗಳ ಮೇಲೆ ದಾಳಿ ಸೇರಿ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಗಳು – Kannada News

ಕೋಲ್ಕತ್ತಾ, ಜೂನ್ 08: ಪಶ್ಚಿಮ ಬಂಗಾಳ(West Bengal)ದಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಟಿಎಂಸಿಯನ್ನು ಅಧಿಕಾರದಿಂದ ಕಿತ್ತೊಗೆದಿತ್ತು.  ಟಿಎಂಸಿ ವಿರೋಧಿಗಳ ಜತೆ ಕಾದಾಡುವುದು ಹಾಗಿರಲಿ, ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿವೆ. ಇದೀಗ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಆ ಕುರಿತು ಮಾಹಿತಿ ಇಲ್ಲಿದೆ.

ಟಿಎಂಸಿ ಪ್ರಭಾವಿ ನಾಯಕ ಜಹಾಂಗೀರ್ ಖಾನ್ ಬಂಧನ
ಕಳೆದ ತಿಂಗಳು ನಡೆದ ಫಾಲ್ಟಾ ವಿಧಾನಸಭಾ ಉಪಚುನಾವಣೆಯ ವೇಳೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಜಹಾಂಗೀರ್ ಖಾನ್ ಅವರನ್ನು ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (STF) ಇಂದು ಮುಂಜಾನೆ ನೇಪಾಳ ಗಡಿಯ ಬಳಿ ಬಂಧಿಸಿದೆ.

ಚುನಾವಣಾ ಅಕ್ರಮಗಳು, ಭೂಸ್ವಾಧೀನ ಮತ್ತು ವಸೂಲಿ  ಆರೋಪಗಳ ಎದುರಿಸುತ್ತಿದ್ದ ಜಹಾಂಗೀರ್ ಖಾನ್ ಗೆ ಕೋಲ್ಕತ್ತಾ ಹೈಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಇತ್ತೀಚೆಗೆ ಹಿಂಪಡೆದಿತ್ತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಖಾನ್ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬಂಧನ ನಡೆದಿದೆ.

ಹೈಕೋರ್ಟ್‌ನಿಂದ ಬಂಧನ ಭೀತಿ ಎದುರಿಸುತ್ತಿದ್ದ ಖಾನ್, ದೇಶ ಬಿಟ್ಟು ನೇಪಾಳಕ್ಕೆ ಓಡಿಹೋಗಲು ಯತ್ನಿಸುತ್ತಿದ್ದಾಗ ರಹಸ್ಯ ಮಾಹಿತಿಯ ಆಧಾರದ ಮೇಲೆ ಎಸ್‌ಟಿಎಫ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತಾಕ್ಕೆ ಕರೆತರಲಾಗುತ್ತಿದೆ.

ಟಿಎಂಸಿ ಕಚೇರಿಗಳ ಮೇಲೆ ದಾಳಿ
ಜಹಾಂಗೀರ್ ಖಾನ್ ಬಂಧನದ ಜೊತೆಯಲ್ಲೇ, ರಾಜ್ಯದ ವಿವಿಧೆಡೆ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರಿಗೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಿವೆ. ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಟಿಎಂಸಿ ನಾಯಕರ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ವಸ್ತುಗಳು ಹಾಗೂ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿಗಳು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಟಿಎಂಸಿ ನಾಯಕ ರಾಬಿನ್ ದಾಸ್ ಮೇಲ್ ಎಸ್​ಟಿಎಫ್ ದಾಳಿ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ವಿವಾದಿತ ಜಾಗವಾದ ಸಂದೇಶಖಾಲಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಪಡೆ (STF) ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಪ್ರಾದೇಶಿಕ ಅಧ್ಯಕ್ಷ ರಾಬಿನ್ ದಾಸ್ ಅವರ ನಿವಾಸಕ್ಕೆ ಹೊಂದಿಕೊಂಡಿರುವ ಖಾಸಗಿ ಕೊಳದಿಂದ (ಕೆರೆ) ಪೊಲೀಸರು ಭಾರಿ ಪ್ರಮಾಣದ ಕಾನೂನುಬಾಹಿರ ಬಂದೂಕುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸಲು ಹೊಸ ಸರ್ಕಾರವು ಆರಂಭಿಸಿರುವ ವಿಶೇಷ ಭದ್ರತಾ ಕಾರ್ಯಾಚರಣೆಯ ಭಾಗವಾಗಿ ಈ ಐತಿಹಾಸಿಕ ದಾಳಿ ನಡೆದಿದೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ: 4,800 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಗಡಿ ಭದ್ರತೆ ನಮ್ಮ ಆದ್ಯತೆ ಎಂದ ಸಿಎಂ ಸುವೇಂದು

ಟಿಎಂಸಿ ಪಕ್ಷದಲ್ಲಿ ಬಂಡಾಯ ಮತ್ತು ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಬಂಡಾಯ ನಾಯಕನಿಗೆ ಮಾನ್ಯತೆ: ಟಿಎಂಸಿ ಪಕ್ಷದ 58 ಬಂಡಾಯ ಶಾಸಕರು ಒಟ್ಟಾಗಿ ಪಕ್ಷದಿಂದ ಉಚ್ಛಾಟಿತಗೊಂಡಿದ್ದ ನಾಯಕ ರಿತಬ್ರತಾ ಬ್ಯಾನರ್ಜಿ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು. ಇದಕ್ಕೆ ವಿಧಾನಸಭಾ ಸ್ಪೀಕರ್ ಅವರು ಮಾನ್ಯತೆ ನೀಡಿ, ಅವರನ್ನು ವಿಧಾನಸಭೆಯ ಅಧಿಕೃತ ಪ್ರತಿಪಕ್ಷ ನಾಯಕ ಎಂದು ಘೋಷಿಸಿದ್ದಾರೆ.

ಸ್ಪೀಕರ್ ಅವರ ಈ ನಿರ್ಧಾರವನ್ನು ಕಾನೂನುಬಾಹಿರ ಎಂದು ಕರೆದಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹೈಕಮಾಂಡ್, ಇದರ ವಿರುದ್ಧ ಇಂದು ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಸ್ಪೀಕರ್ ನಿರ್ಧಾರ ಸಂಸದೀಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಇಂಡಿ ಒಕ್ಕೂಟದ ಸಭೆಯಲ್ಲಿ ಮಮತಾ ಭಾಗಿ
ರಾಜ್ಯದಲ್ಲಿ ಇಷ್ಟೆಲ್ಲಾ ಆಂತರಿಕ ಬಿಕ್ಕಟ್ಟು ಮತ್ತು ಬಂಧನಗಳು ನಡೆಯುತ್ತಿದ್ದರೂ, ರಾಷ್ಟ್ರ ರಾಜಕಾರಣದಲ್ಲಿ ಟಿಎಂಸಿ ಸಕ್ರಿಯವಾಗಿದೆ. ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಇಂದು ಆಯೋಜಿಸಲಾಗಿರುವ ‘ಇಂಡಿ’ ಒಕ್ಕೂಟದ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ದೆಹಲಿ ತಲುಪಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು 23 ಪಕ್ಷಗಳು ಒಟ್ಟಾಗಿರುವ ಈ ಸಭೆಗೆ ಟಿಎಂಸಿ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 1:09 pm, Mon, 8 June 26

Source link

Leave a Reply

Your email address will not be published. Required fields are marked *