ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳುImage Credit source: tv9
ಹುಬ್ಬಳ್ಳಿ, ಜೂನ್ 9: ಜಾಗತಿಕ ಯುದ್ಧದ ಸನ್ನಿವೇಶಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ದೇಶದ ಆರ್ಥಿಕತೆಯ ಮೇಲೆ ಮಾತ್ರವಲ್ಲದೆ ರಾಜ್ಯದ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಮೇಲೂ ಪರಿಣಾಮ ಬೀರಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಕೂಡ ತೀವ್ರ ಆರ್ಥಿಕ ಆಘಾತಕ್ಕೆ ಒಳಗಾಗಿದ್ದು, ದಿನನಿತ್ಯದ ಬಸ್ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಹಣ ಹೊಂದಿಸಲು ಪರದಾಡುವಂತಾಗಿದೆ.
ಮುಖ್ಯಾಂಶಗಳು
- ಡೀಸೆಲ್‌ನಿಂದಲೇ ಮಾಸಿಕ 4 ಕೋಟಿ ರೂ. ಹೊರೆ.
- ಬಿಡಿಭಾಗಗಳ ಟೆಂಡರ್‌ದಾರರಿಂದ ಪೂರೈಕೆಗೆ ನಿರಾಕರಣೆ.
- ಬಸ್‌ಗಳ ನಿರ್ವಹಣೆಗೆ ಹೆಚ್ಚಿದ ಆರ್ಥಿಕ ವೆಚ್ಚ.
ಪ್ರತಿ ತಿಂಗಳು 4 ಕೋಟಿ ರೂಪಾಯಿ ಹೆಚ್ಚುವರಿ ಹೊರೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಡಿಯಲ್ಲಿ ಪ್ರತಿದಿನ 5,000 ಕ್ಕೂ ಅಧಿಕ ಬಸ್‌ಗಳು ಸಂಚರಿಸುತ್ತವೆ. ಜಾಗತಿಕ ಬಿಕ್ಕಟ್ಟಿನಿಂದಾಗಿ ಇಂಧನ ದರ ಏರಿಕೆಯಾಗಿರುವುದರಿಂದ ಸಂಸ್ಥೆಗೆ ಕೇವಲ ಡೀಸೆಲ್ ಖರೀದಿಯೊಂದರಿಂದಲೇ ಪ್ರತಿ ತಿಂಗಳು ಬರೋಬ್ಬರಿ 4 ಕೋಟಿ ರೂಪಾಯಿಗಳ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ಇದರ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಡೀಸೆಲ್ ಜೊತೆಗೆ ಕಡ್ಡಾಯವಾಗಿ ಮಿಶ್ರಣ ಮಾಡಬೇಕಾದ ‘ಆಡ್ ಬ್ಲೂ (AdBlue)’ ತೈಲ, ಟೈರ್‌ಗಳು, ನಟ್-ಬೋಲ್ಟ್‌ಗಳು ಹಾಗೂ ಸ್ಟೀಲ್ ಸೇರಿದಂತೆ ಇತರೆ ಕಚ್ಚಾ ವಸ್ತುಗಳ ಬೆಲೆಯೂ ಕೂಡ ಗಗನಕ್ಕೇರಿದೆ. ಪರಿಣಾಮವಾಗಿ, ಕೇವಲ ಬಸ್‌ಗಳ ತಾಂತ್ರಿಕ ನಿರ್ವಹಣೆಗಾಗಿ ಸಂಸ್ಥೆಯು ಪ್ರತಿ ತಿಂಗಳು ಸರಾಸರಿ 8 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದು, ಈ ವೆಚ್ಚ ಈಗ ದುಪ್ಪಟ್ಟಾಗುವ ಆತಂಕ ಎದುರಾಗಿದೆ.
ನಿರಂತರ ಸಂಚಾರದಿಂದ ಕೆಟ್ಟು ನಿಲ್ಲುತ್ತಿರುವ ಸಾರಿಗೆ ಬಸ್‌ಗಳು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ ಜಾರಿಗೆ ಬಂದಾಗಿನಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಬಸ್‌ಗಳ ನಿರಂತರ ಓಡಾಟದಿಂದಾಗಿ ಅವುಗಳ ರಿಪೇರಿ ಹಾಗೂ ತಾಂತ್ರಿಕ ದೋಷಗಳು ಕೂಡ ಹೆಚ್ಚಾಗುತ್ತಿವೆ. ಈ ಬಗ್ಗೆ ಮಾಹಿತಿ ನೀಡಿರುವ ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ (MD) ಪ್ರಿಯಾಂಕಾ ಎಂ., ‘ಬಸ್‌ಗಳ ಬಿಡಿಭಾಗಗಳು ಹಾಗೂ ಟೈರ್ ಪೂರೈಕೆಗಾಗಿ ಈ ಹಿಂದೆಯೇ ಟೆಂಡರ್ ಪ್ರಕ್ರಿಯೆ ಮುಗಿದಿತ್ತು. ಆದರೆ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಹೆಚ್ಚಿರುವುದರಿಂದ, ಹಳೆಯ ದರಕ್ಕೆ ವಸ್ತುಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಟೆಂಡರ್‌ದಾರರು ಪಟ್ಟು ಹಿಡಿದಿದ್ದಾರೆ. ಸದ್ಯ ಅವರ ಮನವೊಲಿಸಿ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳುವುದೇ ನಮಗೆ ದೊಡ್ಡ ಹರಸಾಹಸದ ಕೆಲಸವಾಗಿದೆ’ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಯ ದಿನನಿತ್ಯದ ಖರ್ಚು-ವೆಚ್ಚಗಳು ತೀವ್ರವಾಗಿ ಏರಿಕೆಯಾಗುತ್ತಿದ್ದರೂ, ಸಾರ್ವಜನಿಕ ಸಾರಿಗೆ ಬಸ್‌ಗಳ ಪ್ರಯಾಣದ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ ನಿಗಮದ ಆದಾಯವು ಹಳೆಯ ಮಟ್ಟದಲ್ಲೇ ಉಳಿದುಕೊಂಡಿದ್ದು, ಖರ್ಚು ಮಾತ್ರ ಮಿತಿಮೀರುತ್ತಿದೆ. ಈ ಭೀಕರ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಹಾಗೂ ಹೆಚ್ಚುವರಿ ಹೊರೆಯನ್ನು ಭರಿಸಲು ಸೂಕ್ತ ಆರ್ಥಿಕ ಮಾರ್ಗದರ್ಶನ ಮತ್ತು ಅನುದಾನ ನೀಡುವಂತೆ ನಿಗಮದ ಹಿರಿಯ ಅಧಿಕಾರಿಗಳು ಈಗಾಗಲೇ ಸಾರಿಗೆ ಸಚಿವರಿಗೆ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದ್ದಾರೆ. ಈ ಆರ್ಥಿಕ ಸುಳಿಯಿಂದ ನಿಗಮವನ್ನು ಪಾರು ಮಾಡಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ