ಉಜ್ವಲ ಗ್ಯಾಸ್ ಯೋಜನೆಯಲ್ಲಿ ಸಬ್ಸಿಡಿಯುಕ್ತ ಸಿಲಿಂಡರ್ ಸಂಖ್ಯೆ ಕಡಿಮೆ ಮಾಡಲು ನಿಜವಾದ ಕಾರಣ ಇದಾ? – Kannada News

ನವದೆಹಲಿ, ಜೂನ್ 9: ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY- PM Ujjwala Yojana) ಅಡಿಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪ್ರಬಲ ಕಾರಣವೊಂದು ಇದೆ ಎಂದು ಹೇಳಲಾಗುತ್ತಿದೆ. ಬಡವರಿಗೆಂದು ಇರುವ ಈ ಸ್ಕೀಮ್ ಅನ್ನು ಕೆಲ ದುರುಳರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎನ್​ಎನ್ ನ್ಯೂಸ್18 ವಾಹಿನಿ ವರದಿ ಮಾಡಿದೆ. ಪಿಎಂ ಉಜ್ವಲ ಯೋಜನೆಯಲ್ಲಿ ಫಲಾನುಭವಿಗಳಿಗೆ ಸಿಗುತ್ತಿದ್ದ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಇಳಿಸಲಾಗಿದೆ.

ದುರುಪಯೋಗ ಮತ್ತು ಅಕ್ರಮ ನಿಯಂತ್ರಣ: ಉಜ್ವಲ ಯೋಜನೆಯಡಿ ಸಿಗುವ ಸಬ್ಸಿಡಿ ಸಿಲಿಂಡರ್‌ಗಳನ್ನು ಕೆಲವು ವಂಚಕರು ವಾಣಿಜ್ಯ (Commercial) ಉದ್ದೇಶಗಳಿಗಾಗಿ ಅಕ್ರಮವಾಗಿ ಬೇರೆಡೆಗೆ ಸಾಗಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಫಲಾನುಭವಿಗಳ ಹೆಸರಿನಲ್ಲಿ ಸಬ್ಸಿಡಿ ದರದಲ್ಲಿ ವರ್ಷಕ್ಕೆ 9 ಸಿಲಿಂಡರ್‌ಗಳನ್ನು ಪಡೆದು, ಅವುಗಳನ್ನು ಹೊರಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಉಜ್ವಲ ಯೋಜನೆಯ ಗ್ರಾಹಕರು ವರ್ಷಕ್ಕೆ ಬಳಸುವ ಸಿಲಿಂಡರ್‌ಗಳ ಸರಾಸರಿ ಸಂಖ್ಯೆ 4 ಆಗಿದೆ. ಹೀಗಾಗಿ, ನೈಜ ಬಳಕೆಯ ಆಧಾರದ ಮೇಲೆಯೇ ಈ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚುವರಿ ಸಿಲಿಂಡರ್ ಖರೀದಿಗೆ ಮುಕ್ತ ಅವಕಾಶ

ಉಜ್ವಲ ಯೋಜನೆ ಅಡಿ ಸಬ್ಸಿಡಿಯುಕ್ತ ಸಿಲಿಂಡರ್​ಗಳ ಸಂಖ್ಯೆಯನ್ನು 4ಕ್ಕೆ ಮಿತಿಗೊಳಿಸಿರುವ ನಿಯಮದಿಂದ ಗ್ರಾಹಕರಿಗೆ ಸಿಲಿಂಡರ್ ಲಭ್ಯತೆಯಲ್ಲಿ ವ್ಯತ್ಯಯ ಆಗುವುದಿಲ್ಲ. ಯೋಜನೆಯ ಫಲಾನುಭವಿಗಳು ಅಗತ್ಯ ಇದ್ದಲ್ಲಿ ಹೆಚ್ಚು ಸಿಲಿಂಡರ್​ಗಳನ್ನು ಪಡೆಯಲು ಅವಕಾಶ ಇರುತ್ತದೆ. ಅದರಲ್ಲಿ ಯಾವುದೆ ನಿರ್ಬಂಧ ಇರುವುದಿಲ್ಲ.

ಗ್ರಾಹಕರು ಎಷ್ಟು ಬೇಕಾದರೂ ಸಿಲಿಂಡರ್ ಖರೀದಿಸಬಹುದಾದರೂ, ಅವರ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣವು ಕೇವಲ ಮೊದಲ 4 ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಖರೀದಿಸುವ ಸಿಲಿಂಡರ್‌ಗಳಿಗೆ ಪೂರ್ಣ ಮಾರುಕಟ್ಟೆ ಬೆಲೆಯನ್ನು ತೆರಬೇಕಾಗುತ್ತದೆ.

ಇದನ್ನೂ ಓದಿ: Ujjwala Yojana: ಉಜ್ವಲ ಫಲಾನುಭವಿಗಳಿಗೆ ಶಾಕ್, 9 ಅಲ್ಲ, ಇನ್ಮುಂದೆ ಸಿಗಲಿದೆ ನಾಲ್ಕೇ ನಾಲ್ಕು ಸಿಲಿಂಡರ್​ಗಳು

ಒಟ್ಟಾರೆಯಾಗಿ, ಸಬ್ಸಿಡಿ ವ್ಯವಸ್ಥೆಯಲ್ಲಿನ ಸೋರಿಕೆಯನ್ನು (Leakage) ತಡೆದು, ಸರ್ಕಾರದ ಹಣ ದುರುಪಯೋಗವಾಗದಂತೆ ತಡೆಯುವುದು ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *