ಕೊಪ್ಪಳ: ಗ್ಯಾಸ್ ಕಟರ್ ಬಳಸಿ ಎಸ್‌ಬಿಐ ಎಟಿಎಂ ದರೋಡೆಗೆ ಯತ್ನ, ಬೆಂಕಿ ಹೊತ್ತಿಕೊಂಡಿದ್ದರಿಂದ ಕಂಗಾಲಾಗಿ ಕಾಲ್ಕಿತ್ತ ಖದೀಮರು – Kannada News

ಕೊಪ್ಪಳ, ಜೂನ್ 10: ನಗರದ ಹೊಸಪೇಟೆ ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಎಟಿಎಂ ಕೇಂದ್ರದಲ್ಲಿ ನಸುಕಿನ ಜಾವ ಭೀಕರ ದರೋಡೆ ಯತ್ನವೊಂದು ನಡೆದಿದೆ. ನಸುಕಿನ 3 ರಿಂದ 3:30 ರ ಸುಮಾರಿಗೆ ಕಳವಿಗೆ ಬಂದ ಖದೀಮರು, ಮೊದಲು ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ (Black Spray) ಹೊಡೆದು ದೃಶ್ಯಾವಳಿಗಳು ಸೆರೆಯಾಗದಂತೆ ತಡೆದಿದ್ದಾರೆ. ಬಳಿಕ ಗ್ಯಾಸ್ ಕಟರ್ ಯಂತ್ರದ ಸಹಾಯದಿಂದ ಎಟಿಎಂ ಯಂತ್ರದ ಮೊದಲ ಕಬ್ಬಿಣದ ಬಾಗಿಲನ್ನು ಕತ್ತರಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆ ಗ್ಯಾಸ್ ಕಟರ್‌ನ ಕಿಡಿಯಿಂದಾಗಿ ಎಟಿಎಂ ಯಂತ್ರಕ್ಕೆ ದಿಢೀರನೆ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಹಣ ದೋಚುವ ಪ್ರಯತ್ನವನ್ನು ಅರ್ಧಕ್ಕೆ ಕೈಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಎಟಿಎಂ ಕೇಂದ್ರದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಬರುತ್ತಿರುವುದನ್ನು ಗಮನಿಸಿದ ಕಟ್ಟಡದ ಮಾಲೀಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *