ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯ 52ನೇ ಪಂದ್ಯದಲ್ಲಿ ಎಸೆಕ್ಸ್ ತಂಡವು ರೋಚಕ ಜಯ ಸಾಧಿಸಿದೆ. ಚೆಲ್ಮ್ಸ್ಫೋರ್ಡ್ನ ಕೌಂಟ್ರಿ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಎಸೆಕ್ಸ್ ಹಾಗು ಕೆಂಟ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಸ್ಯಾಮ್ ಬಿಲ್ಲಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಎಸೆಕ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಪೌಲ್ ವಾಲ್ಟರ್ 17 ರನ್ಗಳಿಸಿ ಔಟಾದರೆ, ಮೈಕೆಲ್ ಪೆಪ್ಪೆರ್ 6 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದರು. ಈ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಎದುರಿಸಿದ್ದು ಬರೋಬ್ಬರಿ 31 ಎಸೆತಗಳು. ಈ ಮೂವತ್ತೊಂದು ಎಸೆತಗಳಲ್ಲಿ ಕಾಕ್ಸ್ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಕೇವಲ 40 ರನ್ಗಳಿಸಲಷ್ಟೇ ಶಕ್ತರಾದರು.
ಒಂದೆಡೆ ಕಾಕ್ಸ್ ಅವರ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಎಸೆಕ್ಸ್ ತಂಡದ ರನ್ ಗತಿ ಕೂಡ ಕುಂಠಿತವಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಚಾರ್ಲಿ ಅಲ್ಲಿಸನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ರನ್ ವೇಗ ಹೆಚ್ಚಿಸಿದರು.
- 47 ಎಸೆತಗಳನ್ನು ಎದುರಿಸಿದ ಚಾರ್ಲಿ ಅಲ್ಲಿಸನ್ 6 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 74 ರನ್ ಬಾರಿಸಿದರು.
- ಚಾರ್ಲಿ ಅಲ್ಲಿಸನ್ಗೆ ಉತ್ತಮ ಸಾಥ್ ನೀಡಿದ ವಿಯಾನ್ ಮುಲ್ಡರ್ 11 ಎಸೆತಗಳಲ್ಲಿ 29 ರನ್ಗಳ ಕೊಡುಗೆ ನೀಡಿದರು.
ಚಾರ್ಲಿ ಅಲ್ಲಿಸನ್ ಅವರ ಸಿಡಿಲಬ್ಬರ ಹಾಗೂ ವಿಯಾನ್ ಮುಲ್ಡರ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಎಸೆಕ್ಸ್ ತಂಡವು 20 ಓವರ್ಗಳಲ್ಲಿ 187 ರನ್ ಕಲೆಹಾಕಿತು.
188 ರನ್ಗಳ ಗುರಿ:
ಈ ಗುರಿ ಬೆನ್ನತ್ತಿದ ಕೆಂಟ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಚಾರ್ಲಿ ಬೆನ್ನೆಟ್ ಯಶಸ್ವಿಯಾದರು. ಆರಂಭಿಕ ದಾಂಡಿಗರಾದ ಹ್ಯಾರಿ ಫಿಂಚ್ (13) ಹಾಗೂ ಬೆಲ್ ಡ್ರಾಮೊಂಡ್ (2) ವಿಕೆಟ್ ಉರುಳಿಸುವ ಮೂಲಕ ಚಾರ್ಲಿ ಬೆನ್ನೆಟ್ ಪವರ್ಪ್ಲೇನಲ್ಲೇ 2 ಯಶಸ್ಸು ತಂದು ಕೊಟ್ಟರು.
ಆದರೆ ಬಳಿಕ ಬಂದ ನಾಯಕ ಸ್ಯಾಮ್ ಬಿಲ್ಲಿಂಗ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 38 ಎಸೆತಗಳನ್ನು ಎದುರಿಸಿದ ಬಿಲ್ಲಿಂಗ್ಸ್ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 68 ರನ್ ಬಾರಿಸಿದರು. ಇದಾಗ್ಯೂ ಕೆಂಟ್ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 17 ರನ್ಗಳ ಅವಶ್ಯಕತೆಯಿತ್ತು.
ಅಂತಿಮ ಓವರ್ನಲ್ಲಿ ಜೇಕ್ ಲಿನ್ನೊಟ್ ಹಾಗೂ ಫ್ರೆಡ್ ಕ್ಲಾಸೆನ್ ಜೊತೆಗೂಡಿ 4, 4, 0, 1, 1, 4 ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ಎಸೆಕ್ಸ್ ತಂಡವು 3 ರನ್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.