Headlines

ನಗರಗಳಲ್ಲಿ ದಿನದಿಂದ ದಿನಕ್ಕೆ ಸೆಕೆ ಹೆಚ್ಚಾಗಿ ಆರೋಗ್ಯ ಹದಗೆಡುತ್ತಿರುವುದಕ್ಕೆ ಕಾರಣವೇನು? – Kannada News

ಬೆಂಗಳೂರು ಒಂದು ಕಾಲದಲ್ಲಿ ತನ್ನ ತಂಪಾದ ವಾತಾವರಣದಿಂದಲೇ ಎಲ್ಲರನ್ನು ಸೆಳೆಯುತ್ತಿತ್ತು, ಆದರೆ ಕಳೆದ ಕೆಲ ವರ್ಷಗಳಿಂದ ಇಲ್ಲಿರುವವರು ಉಷ್ಣತೆಯ ವಾತಾವರಣದಿಂದ ಬಳಲುತ್ತಿದ್ದಾರೆ ಜೊತೆಗೆ ಸೆಕೆಯ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಈಗ ನಿರ್ಜಲೀಕರಣ, ಶಾಖದಿಂದ ಬಳಲಿಕೆ ಮತ್ತು ಹೀಟ್ ಸ್ಟ್ರೋಕ್ (Heat stroke) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಇದು ಹೆಚ್ಚಾಗಿದೆ. ಹಾಗಾದರೆ ಬೆಂಗಳೂರು ಅಥವಾ ನಗರದ ಜೀವನಶೈಲಿಯಲ್ಲಿ ಈ ರೀತಿ ಬದಲಾವಣೆ ಕಂಡುಬಂದಿರುವುದಕ್ಕೆ ಕಾರಣವೇನು, ಈ ರೀತಿಯ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದರ ಕುರಿತು ಬೆಂಗಳೂರು ಅಪೋಲೋ ಆಸ್ಪತ್ರೆಯ ಚರ್ಮರೋಗ ತಜ್ಞರಾಗಿರುವ ಡಾ. ಸುರೇಂದ್ರ ವಿಎಚ್‌ಹೆಚ್ (Dr. Surendra V H H) ಮಾಹಿತಿ ಹಂಚಿಕೊಂಡಿದ್ದಾರೆ.

ಯಾವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು?

ಡಾ. ಸುರೇಂದ್ರ ಅವರು ಹೇಳುವ ಪ್ರಕಾರ ಈ ಬದಲಾವಣೆಯ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಒಂದೆಂದರೆ ನಗರದ ಜೀವನಶೈಲಿಗಳು ವಿಕಾಸಗೊಂಡಿರುವ ರೀತಿ. ಹೊರಗಡೆ ದೀರ್ಘ ಅವಧಿಯ ಕೆಲಸ, ಹೆಚ್ಚಿನ ಟ್ರಾಫಿಕ್ ಒತ್ತಡ, ಡಿಹೈಡ್ರೇಷನ್, ಹೆಚ್ಚಿನ ಒತ್ತಡ ಮತ್ತು ಉಷ್ಣತೆ ಹೀರಿಕೊಳ್ಳುವ ಕಾಂಕ್ರೀಟ್ ಪರಿಸರಗಳಲ್ಲಿ ಹೆಚ್ಚಾಗಿ ವಾಸಮಾಡುವುದರಿಂದ ನಗರದ ನಿವಾಸಿಗಳಿಗೆ ಹೆಚ್ಚು ಸಂಕಷ್ಟ ಎದುರಾಗಿದೆ. ಅದರಲ್ಲಿಯೂ ಬಹಳಷ್ಟು ಜನ ಈ ರೀತಿ ಉಂಟಾಗುವ ಉಷ್ಣತೆಯ ಪರಿಣಾಮದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆಯಾಸ, ತಲೆ ಸುತ್ತುವುದು, ತಲೆನೋವು, ಅತಿಯಾಗಿ ಬೆವರುವುದು, ಸ್ನಾಯು ಸೆಳೆತ, ವಾಕರಿಕೆ ಮತ್ತು ಕಿರಿಕಿರಿಯನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ಆದಾಗ ಅದನ್ನು ಮುಂಚೆಯೇ ಗಮನಿಸಿ ಸೂಕ್ತ ಎಚ್ಚರಿಕೆ ವಹಿಸಿದಲ್ಲಿ ದೊಡ್ಡ ದೊಡ್ಡ ಅಪಾಯಗಳು ತಪ್ಪುತ್ತದೆ.

ಇನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗ, ಬೊಜ್ಜು ಅಥವಾ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚು ಕಷ್ಟಪಡಬೇಕಾಗಬಹುದು. ಹೊರಗಡೆ ಹೆಚ್ಚು ಸಮಯ ಕೆಲಸ ಮಾಡುವವರು, ಡೆಲಿವರಿ ಮಾಡುವವರು, ಟ್ರಾಫಿಕ್ ಪೊಲೀಸ್, ಕ್ರೀಡಾಪಟುಗಳು ಮತ್ತು ದೀರ್ಘಕಾಲ ಟ್ರಾಫಿಕ್ ನಲ್ಲಿ ಕಳೆಯುವ ಸಂಚಾರಿಗಳಿಗೂ ಕೂಡ ಸಂಕಷ್ಟ ತಪ್ಪಿದ್ದಲ್ಲ.

ಇದನ್ನೂ ಓದಿ: ಹೈ ಕೊಲೆಸ್ಟ್ರಾಲ್ ಅಪಾಯ ಇಲ್ಲದಿದ್ದರೂ ಹೃದಯಾಘಾತವಾಗುವುದಕ್ಕೆ ಕಾರಣವೇನು? ತಡೆಗಟ್ಟಲು ಇಲ್ಲಿದೆ ಸಲಹೆ

ಸಮಸ್ಯೆ ತಡೆಗಟ್ಟಲು ಸುಲಭ ಮಾರ್ಗಗಳು?

ಈ ರೀತಿ ಸಮಸ್ಯೆಯನ್ನು ಆದಷ್ಟು ತಡೆಗಟ್ಟಲು ಸರಿಯಾಗಿ ನೀರು ಕುಡಿಯುವುದು, ಬಿರು ಬಿಸಿಲಿನಲ್ಲಿ ನೇರ ಸೂರ್ಯನ ತಾಪಕ್ಕೆ ಒಡ್ಡಿಕೊಳ್ಳದೇ ಇರುವುದು, ಸಡಿಲ ಮತ್ತು ಗಾಳಿಯಾಡುವ ಬಟ್ಟೆ ಧರಿಸುವುದು ಮತ್ತು ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡುವುದು ಹೆಚ್ಚಿನ ಪ್ರಮಾಣದಲ್ಲಿ ರಿಸ್ಕ್ ತಪ್ಪಿಸುತ್ತದೆ. ಬಿಸಿ ವಾತಾವರಣದಲ್ಲಿ ಹೆಚ್ಚಿನ ಕೆಫೀನ್ ಮತ್ತು ಮದ್ಯಸೇವನೆಯನ್ನು ಮಾಡುವುದು ಕೂಡ ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಅಂತಹ ಅಭ್ಯಾಸಗಳನ್ನು ತಪ್ಪಿಸುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *