ಚಲಿಸುತ್ತಿರುವ ರೈಲಿನಿಂದ ಪ್ಯಾಕ್ ಮಾಡಿದ ಆಹಾರ ಪೊಟ್ಟಣಗಳನ್ನು ಎಸೆದ ರೈಲ್ವೆ ಸಿಬ್ಬಂದಿ – Kannada News

ನವದೆಹಲಿ, ಜೂನ್ 11: ಚಲಿಸುತ್ತಿರುವ ರೈಲಿನಿಂದ ರೈಲ್ವೆ ಸಿಬ್ಬಂದಿ ಪ್ಯಾಕ್ ಮಾಡಿದ ಆಹಾರ(Food) ಪೊಟ್ಟಣಗಳನ್ನು ಎಸೆದಿರುವ ವಿಡಿಯೋ ವೈರಲ್ ಆಗಿದೆ. ರೈಲಿನಲ್ಲಿ ಮಾರಾಟಕ್ಕೆ ಇಡಲಾಗಿದ್ದ ಆಹಾರ ಹಳಸಿತ್ತು ಅದರಿಂದ ದುರ್ವಾಸನೆ ಬರುತ್ತಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಆಹಾರದ ಗುಣಮಟ್ಟ ಕಳಪೆಯಾಗಿದ್ದ ಕಾರಣ ಅನೇಕರು ಊಟ ಖರೀದಿಸಲು ನಿರಾಕರಿಸಿದ್ದದ್ದರಿಂದ, ತಯಾರಿಸಿದ ಆಹಾರ ಹಾಗೆಯೇ ಉಳಿದಿತ್ತು.

ಎಕ್ಸ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ರೈಲು ಅತಿ ವೇಗದಲ್ಲಿ ಚಲಿಸುತ್ತಿರುವುದು ಕಾಣಿಸುತ್ತದೆ. ಆದರೆ, ಅದರ ಬಾಗಿಲ ಬಳಿ ನಿಂತಿರುವ ಪ್ಯಾಂಟ್ರಿ ಕಾರ್‌ನ ಸಿಬ್ಬಂದಿ, ದೊಡ್ಡ ದೊಡ್ಡ ತಟ್ಟೆಗಳಲ್ಲಿದ್ದ ನೂರಾರು ಜನರ ಹೊಟ್ಟೆ ತುಂಬಿಸಬಹುದಾಗಿದ್ದ ಉಳಿದ ಆಹಾರವನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೊರಗೆ ಎಸೆಯುತ್ತಿದ್ದಾರೆ.

ಅನ್ನ, ಸಾರು ಹಳಿಗಳ ಮೇಲೆಲ್ಲಾ ಸಿಡಿದು ಬೀಳುವ ಈ ದೃಶ್ಯವನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದಲ್ಲಿ ಹಸಿವು ಮತ್ತು ಬಡತನವನ್ನು ಹೋಗಲಾಡಿಸಲು ರೈಲ್ವೆ ಇಲಾಖೆ ಹೊಸ ವಿಲೇವಾರಿ ಕಾರ್ಯಾಚರಣೆ ಆರಂಭಿಸಿದಂತಿದೆ” ಎಂದು ಕೆಲವರು ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಗಿ ಹೇಳಿದ್ದಾರೆ. ಅರವಿಂದ್ ಶರ್ಮಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ: World Food Safety Day 2026: ಉತ್ತಮ ಆರೋಗ್ಯಕ್ಕಾಗಿ ಸೇವಿಸಿ ಶುದ್ಧ, ಸುರಕ್ಷಿತ ಆಹಾರ

ಸಾಮಾನ್ಯವಾಗಿ ರೈಲು ಪ್ರಯಾಣಿಕರಿಗೆ ರೈಲು ಮತ್ತು ನಿಲ್ದಾಣಗಳನ್ನು ಸ್ವಚ್ಛವಾಗಿಡಿ, ಕಸವನ್ನು ಕಸದ ಬುಟ್ಟಿಗೇ ಹಾಕಿ ಎಂದು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಸ್ವತಃ ನಿಯಮ ಪಾಲಿಸಬೇಕಾದ ರೈಲ್ವೆ ನೌಕರರೇ ಈ ರೀತಿ ವರ್ತಿಸಿದರೆ ಸಾಮಾನ್ಯ ಜನರಿಗೆ ಯಾವ ಸಂದೇಶ ಹೋಗುತ್ತದೆ? ಎಂಬುದು ಸಾರ್ವಜನಿಕರ ನೇರ ಪ್ರಶ್ನೆಯಾಗಿದೆ.

ವಿಡಿಯೋ

ನಾವು ಕಸದ ಬುಟ್ಟಿ ಹುಡುಕಿ ಕಸ ಹಾಕುತ್ತೇವೆ. ಆದರೆ ಇವರು ಇಡೀ ಪ್ಯಾಂಟ್ರಿಯ ಕಸವನ್ನು ಹಳಿಗಳ ಮೇಲೆ ಸುರಿಯುತ್ತಿದ್ದಾರೆ. ಇವರನ್ನು ನೋಡಿ ಸಾಮಾನ್ಯ ಪ್ರಯಾಣಿಕರೂ ಕಸ ಹೊರಗೆ ಎಸೆಯಲು ಪ್ರೇರೇಪಿತರಾಗುವುದಿಲ್ಲವೇ? ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಹಳಿಗಳ ಮೇಲೆ ಆಹಾರವನ್ನು ಎಸೆಯುವುದು ಕೇವಲ ಸ್ವಚ್ಛತೆಯ ಸಮಸ್ಯೆಯಲ್ಲ, ಇದು ಮೂಕ ಪ್ರಾಣಿಗಳ ಜೀವಕ್ಕೆ ಕುತ್ತು ತರುವ ಕೃತ್ಯ. ಆಹಾರದ ವಾಸನೆಗೆ ಆಕರ್ಷಿತವಾಗಿ ಹಸುಗಳು, ನಾಯಿಗಳು ಮತ್ತು ಇತರ ಪ್ರಾಣಿಗಳು ಹಳಿಗಳ ಬಳಿ ಬರುತ್ತವೆ. ವೇಗವಾಗಿ ಬರುವ ರೈಲುಗಳಿಗೆ ಸಿಲುಕಿ ಅವು ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ತ್ಯಾಜ್ಯವನ್ನು ನಿಗದಿತ ನಿಲ್ದಾಣಗಳಲ್ಲಿ ಸೂಕ್ತವಾಗಿ ವಿಲೇವಾರಿ ಮಾಡುವ ಬದಲು, ಈ ರೀತಿ ಕಾಡು-ಮೇಡುಗಳ ಮಧ್ಯೆ ಎಸೆಯುವುದರಿಂದ ಪರಿಸರವೂ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತದೆ ಎಂಬ ಕಳಕಳಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ವಿಡಿಯೋ ಗಮನಕ್ಕೆ ಬಂದ ತಕ್ಷಣ ಕಾರ್ಯಪ್ರವೃತ್ತರಾಗಿ ನಿಯಮ ಉಲ್ಲಂಘಿಸಿದ ನಿರ್ದಿಷ್ಟ ಅಡುಗೆ ಸಿಬ್ಬಂದಿಯನ್ನು (Catering Staff) ಗುರುತಿಸಬೇಕು, ರೈಲ್ವೆ ಆಸ್ತಿ ಮತ್ತು ಪರಿಸರವನ್ನು ಕಲುಷಿತಗೊಳಿಸಿದ್ದಕ್ಕಾಗಿ ಇಲಾಖೆಯು ಸಂಬಂಧಪಟ್ಟ ಕಂಟ್ರ್ಯಾಕ್ಟರ್ ಹಾಗೂ ಸಿಬ್ಬಂದಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಘಟನೆಯನ್ನು ಒಂದು ಪಾಠವಾಗಿ ತೆಗೆದುಕೊಂಡಿರುವ ರೈಲ್ವೆ ಇಲಾಖೆ, ತನ್ನ ಎಲ್ಲಾ ವಲಯಗಳ ಪ್ಯಾಂಟ್ರಿ ಉದ್ಯೋಗಿಗಳಲ್ಲಿ ಆಹಾರದ ಅಪವ್ಯಯ ತಡೆಗಟ್ಟುವಿಕೆ ಮತ್ತು ಪ್ರಾಣಿಗಳ ಸುರಕ್ಷತೆಯ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು. ನೌಕರರೇ ಪ್ರಯಾಣಿಕರಿಗೆ ಮಾದರಿಯಾಗಬೇಕೆಂಬ ಸಂದೇಶವನ್ನು ರವಾನಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *