2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ವಿರಾಟ್ ಕೊಹ್ಲಿಯನ್ನು ಕೂಡ ಆಯ್ಕೆ ಮಾಡಬೇಕೆಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಶ್ರೀಶಾಂತ್ ಆಗ್ರಹಿಸಿದ್ದಾರೆ. ‘ಸ್ಪೋರ್ಟ್ಸ್ ವಿತ್ ರವಿಶ್’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಒಲಿಂಪಿಕ್ಸ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿಯನ್ನು ಜೊತೆಯಾಗಿ ಕಣಕ್ಕಿಳಿಸಬೇಕು. ಇದರಿಂದ ಜಾಗತಿಕ ಕ್ರೀಡಾಕೂಟದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಜಗತ್ತಿನ ‘ಡ್ರೀಮ್ ಜೋಡಿ’
128 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮರಳಿ ಸೇರ್ಪಡೆಯಾಗಲು ವಿರಾಟ್ ಕೊಹ್ಲಿ ಅವರ ಜಾಗತಿಕ ಜನಪ್ರಿಯತೆಯೇ ಮುಖ್ಯ ಕಾರಣ ಎಂದು ಶ್ರೀಶಾಂತ್ ಪ್ರತಿಪಾದಿಸಿದ್ದಾರೆ.
“ಒಲಿಂಪಿಕ್ಸ್ ವೇದಿಕೆಯಲ್ಲಿ ವಿರಾಟ್ ಕೊಹ್ಲಿ ಅವರ ರನ್ ಹಸಿವು ಮತ್ತು ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಧೂಳೆಬ್ಬಿಸಿದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಒಟ್ಟಿಗೆ ಸೇರಿದರೆ ಅದು ಜಗತ್ತಿಗೆ ಅಪ್ಪಟ ಮನರಂಜನೆ ನೀಡಲಿದೆ”.
“ಭಾರತ ಚಿನ್ನದ ಪದಕ ಗೆಲ್ಲಬೇಕಾದರೆ ಆಯ್ಕೆಗಾರರು ವಯಸ್ಸಿನ ಮಿತಿಯನ್ನು ಬದಿಗಿಟ್ಟು ವಿರಾಟ್ ಕೊಹ್ಲಿ ಹಾಗೂ ವೈಭವ್ ಸೂರ್ಯವಂಶಿ ಇಬ್ಬರನ್ನೂ ಆಯ್ಕೆ ಮಾಡಬೇಕು” ಎಂದು ಶ್ರೀಶಾಂತ್ ಆಗ್ರಹಿಸಿದ್ದಾರೆ.
ಶ್ರೀಶಾಂತ್ ಅವರ ಈ ಆಲೋಚನೆ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದ್ದರೂ, ಇದರ ಹಿಂದೆ ದೊಡ್ಡ ಪ್ರಾಯೋಗಿಕ ಸವಾಲುಗಳಿವೆ ಎಂಬುದೇ ಸತ್ಯ.
ಏಕೆಂದರೆ 2028ರ ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಗಳು ಟಿ20 ಮಾದರಿಯಲ್ಲಿ ನಡೆಯಲಿವೆ. ಆದರೆ ವಿರಾಟ್ ಕೊಹ್ಲಿ ಅವರು 2024ರ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ . ಅವರು ಒಲಿಂಪಿಕ್ಸ್‌ಗಾಗಿ ತಮ್ಮ ನಿರ್ಧಾರವನ್ನು ಬದಲಿಸುತ್ತಾರಾ ಎಂಬುದು ದೊಡ್ಡ ಪ್ರಶ್ನೆ.
ಅಂದರೆ ಒಲಿಂಪಿಕ್ಸ್ ವೇಳೆಗೆ ವಿರಾಟ್ ಕೊಹ್ಲಿಯ ವಯಸ್ಸು 39 ಆಗಿರಲಿದೆ. ಈ ವೇಳೆಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಲಿದ್ದಾರಾ? ಒಂದು ವೇಳೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಇದ್ದರೆ ಒಲಿಂಪಿಕ್ಸ್‌ಗಾಗಿ ಅವರು ಟಿ20 ನಿವೃತ್ತಿಯನ್ನು ಹಿಂಪಡೆಯಲಿದ್ದಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ
ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ 2027ರ ಏಕದಿನ ವಿಶ್ವಕಪ್ ಮುಗಿಯಬೇಕು. ಏಕೆಂದರೆ ಈಗಾಗಲೇ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ಕೊಹ್ಲಿ ಏಕದಿನ ವಿಶ್ವಕಪ್ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದರೂ ಅಚ್ಚರಿಪಡಬೇಕಿಲ್ಲ.