ಮೈಸೂರು, ಜೂನ್ 11: ಈ ಬಾರಿ ಜೂನ್ ಅರ್ಧ ತಿಂಗಳು ಕಳೆಯುತ್ತಾ ಬಂದರೂ ಆಗೊಮ್ಮೆ, ಈಗೊಮ್ಮೆ ಒಂದೊಂದು ಮಳೆ ಬಂದಿದೆ ಅಷ್ಟೇ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾಯ ಇರುವ ಕಾರಣ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಸದ್ಯ ಜಲಾಶಯದ ನೀರಿನ ಮಟ್ಟ 81 ಅಡಿಗೆ ತಲುಪಿದೆ. ಜಲಾಶಯದ ಗರಿಷ್ಠ ಸಾಮರ್ಥ್ಯ 124 ಅಡಿಗಳಾಗಿವೆ.
ಸದ್ಯ ಕೆಆರ್‌ಎಸ್‌ನಲ್ಲಿ ಸಂಗ್ರಹವಾಗಿರುವ ನೀರು ಕೇವಲ 11 ಟಿಎಂಸಿ. ಇದರಲ್ಲಿ 4 ರಿಂದ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಬಳಕೆಗೆ ಲಭ್ಯವಿರುವುದು ಕೇವಲ 7 ಟಿಎಂಸಿ ಮಾತ್ರ. ಈ ಪರಿಸ್ಥಿತಿಯ ನಡುವೆ, ಜೂನ್ ತಿಂಗಳಿನಲ್ಲಿ ತಮಿಳುನಾಡಿಗೆ ನ್ಯಾಯಾಲಯದ ಸೂಚನೆಯಂತೆ 9 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಇದೆ. ಲಭ್ಯವಿರುವ ನೀರಿಗಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವ ಒತ್ತಡ ರಾಜ್ಯದ ಮೇಲಿದೆ.
ಈ ನೀರಿನ ಕೊರತೆಯು ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗಗಳಿಗೆ ಕುಡಿಯುವ ನೀರಿನ ಸಂಕಷ್ಟ ತಂದೊಡ್ಡಲಿದೆ. ಕಬಿನಿ ಜಲಾಶಯದಲ್ಲೂ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿರುವುದು ಆತಂಕವನ್ನು ಹೆಚ್ಚಿಸಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಇಷ್ಟರಮಟ್ಟಿಗೆ ನೀರು ಕುಸಿತ ಕಂಡಿರಲಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ