ಭಾರತೀಯ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ರಿಯಾಲಿಟಿ ಶೋ ಆಗಿ ಹೊರಹೊಮ್ಮಿರುವ ‘ಬಿಗ್ ಬಾಸ್’ (Bigg Boss) ಈಗ ತನ್ನ ಹೊಸ ಅಧ್ಯಾಯಕ್ಕೆ ಸಜ್ಜಾಗುತ್ತಿದೆ. ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ನಡೆಸಿಕೊಡುವ ಈ ಶೋ, ಪ್ರತಿ ಬಾರಿಯಂತೆ ಈ ಬಾರಿಯೂ ಭಾರಿ ಸದ್ದು ಮಾಡಲು ರೆಡಿಯಾಗಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 19ನೇ ಸೀಸನ್ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಗೌರವ್ ಖನ್ನಾ, ಫರ್ಹಾನಾ ಭಟ್, ಅಮಾಲ್ ಮಲ್ಲಿಕ್, ತಾನ್ಯಾ ಮಿತ್ತಲ್ ಮತ್ತು ಬಸೀರ್ ಅಲಿ ಅವರಂತಹ ಸ್ಪರ್ಧಿಗಳ ಆಟದಿಂದಾಗಿ ಕಳೆದ ಸೀಸನ್ ಸಖತ್ ಹೈಲೈಟ್ ಆಗಿತ್ತು. ಈಗ ಬಿಗ್ ಬಾಸ್ ಇತಿಹಾಸದಲ್ಲೇ ಮೈಲಿಗಲ್ಲಾಗಲಿರುವ 20ನೇ ಸೀಸನ್ ಅನ್ನು ಮತ್ತಷ್ಟು ರೋಮಾಂಚನಕಾರಿಯಾಗಿ ಮತ್ತು ಅದ್ಧೂರಿಯಾಗಿ ಪ್ರಸಾರ ಮಾಡಲು ವಾಹಿನಿ ಪ್ಲಾನ್ ಮಾಡಿದೆ.
‘ವೆರೈಟಿ ಇಂಡಿಯಾ’ ವರದಿಯ ಪ್ರಕಾರ, ಬಿಗ್ ಬಾಸ್ 20ನೇ ಸೀಸನ್ ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ ಪ್ರೀಮಿಯರ್ ಆಗಲಿದೆ. ಬಿಗ್ ಬಾಸ್ ಸೆಟ್‌ಗೆ ಮರಳುವ ಮುನ್ನ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಬಿಗ್ ಬಜೆಟ್ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದ ಪ್ರಮುಖ ಭಾಗದ ಚಿತ್ರೀಕರಣವನ್ನು ಮುಗಿಸಲು ನಿರ್ಧರಿಸಿದ್ದಾರೆ. ಖ್ಯಾತ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿರುವ, ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಸೌತ್ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ಮ್ಯಾನೇಜ್‌ಮೆಂಟ್ ತಂಡವು ಬಹಳ ಅಚ್ಚುಕಟ್ಟಾಗಿ ಡೇಟ್ಸ್ ಪ್ಲಾನ್ ಮಾಡುತ್ತಿದ್ದು, ಸಿನಿಮಾದ ಶೂಟಿಂಗ್ ಯಾವುದೇ ತೊಂದರೆಯಿಲ್ಲದೆ ಸಾಗುವಂತೆ ನೋಡಿಕೊಳ್ಳುವುದರ ಜೊತೆಗೆ ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಲುಗೆ ಸಾಕಷ್ಟು ಸಮಯ ಸಿಗುವಂತೆ ವೇಳಾಪಟ್ಟಿ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಇದು 20ನೇ ಸೀಸನ್ ಆದ್ದರಿಂದ ಪ್ರೇಕ್ಷಕರಿಗೆ ಹೆಚ್ಚು ನಿರೀಕ್ಷೆ ಇದೆ.
ಬಿಗ್ ಬಾಸ್ 20ರ ಪೂರ್ವಭಾವಿ ಕೆಲಸಗಳು ಈಗಾಗಲೇ ಜೋರಾಗಿ ನಡೆಯುತ್ತಿವೆ. ಆಡಿಷನ್ ಮತ್ತು ಸ್ಪರ್ಧಿಗಳ ಶಾರ್ಟ್‌ಲಿಸ್ಟ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದ್ದು, ಕಾಸ್ಟಿಂಗ್ ಟೀಮ್ ಈಗಾಗಲೇ ಕಿರುತೆರೆಯ ಹಲವು ಪ್ರಮುಖ ಸೆಲೆಬ್ರಿಟಿಗಳನ್ನು ಸಂಪರ್ಕಿಸಿದೆ. ವಿಶೇಷವೆಂದರೆ, ಈ ಬಾರಿ ಕೇವಲ ಸಾಂಪ್ರದಾಯಿಕ ಟಿವಿ ಸೆಲೆಬ್ರಿಟಿಗಳಿಗಷ್ಟೇ ಸೀಮಿತವಾಗದೆ, ಸೋಶಿಯಲ್ ಮೀಡಿಯಾ ಹಾಗೂ ಒಟಿಟಿ ಲೋಕದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಯುವ ತಲೆಮಾರಿನ ಸ್ಪರ್ಧಿಗಳನ್ನು ಮನೆಗೆ ಕರೆತರಲು ಬಿಗ್ ಬಾಸ್ ತಂಡ ಮುಂದಾಗಿದೆ.
ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಹೊಸ ಸೀಸನ್: ಸರ್ಪ್ರೈಸ್ ನೀಡಿದ ‘ಕಲರ್ಸ್ ಕನ್ನಡ’
ಸ್ಟ್ರೀಮಿಂಗ್ ಆ್ಯಪ್ಸ್ ಹಾಗೂ ಇತರೆ ರಿಯಾಲಿಟಿ ಶೋಗಳ ಮೂಲಕ ಯುವ ವೀಕ್ಷಕರನ್ನು ಸೆಳೆಯುವುದು ವಾಹಿನಿಯ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಈ ಹಿಂದಿನ ಸೀಸನ್‌ಗಳ ಕೆಲವು ಪರಿಚಿತ ಮುಖಗಳು ಕೂಡ ಈ ಬಾರಿ ಮರುಪ್ರವೇಶ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ ಶೋನ ಈ ಬಾರಿಯ ಥೀಮ್ ಏನು ಎಂಬುದನ್ನು ಸಸ್ಪೆನ್ಸ್ ಆಗಿ ಇಡಲಾಗಿದ್ದು, ಪ್ರೀಮಿಯರ್ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಅಂತಿಮ ಸ್ಪರ್ಧಿಗಳ ಪಟ್ಟಿ ಮತ್ತು ಬಿಗ್ ಟ್ವಿಸ್ಟ್‌ಗಳು ರಿವೀಲ್ ಆಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.