Headlines

ಕಸ್ತೂರಿ ನಗರ ಪಾರ್ಕ್ ಉಳಿಸಲು ಸ್ಥಳೀಯರ ಹೋರಾಟ: ಜಿಬಿಎ ವಿರುದ್ಧ ಸಾರ್ವಜನಿಕರ ಆಕ್ರೋಶ – Kannada News | Kasturi Nagar Park Protest: Residents Oppose GBA’s Commercial Use of Green Space

ಕಸ್ತೂರಿ ನಗರ ಪಾರ್ಕ್ ಉಳಿಸಲು ಸ್ಥಳೀಯರ ಹೋರಾಟ

ಬೆಂಗಳೂರು, ಜೂನ್ 13: ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸ್ತೂರಿನಗರದ ಪೂರ್ವ NGEF ಲೇಔಟ್‌ನಲ್ಲಿ ಉದ್ಯಾನವನವನ್ನು ಉಳಿಸಿಕೊಡುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪಾರ್ಕ್ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು ಎಂಬ ನಿಯಮವಿದ್ದರೂ, ಜಿಬಿಎ (GBA) ವತಿಯಿಂದಲೇ ಉದ್ಯಾನವನದ ಅಸ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ನಿವಾಸಿಗಳು ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಾಂಶಗಳು

  • ಕಸ್ತೂರಿನಗರದ ಎನ್‌ಜಿಇಎಫ್ ಲೇಔಟ್ ಪಾರ್ಕ್ ಉಳಿಸಲು ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
  • ಉದ್ಯಾನವನದ ಮುಕ್ಕಾಲು ಭಾಗವನ್ನು ಈಗಾಗಲೇ ಸರ್ಕಾರಿ ಕಟ್ಟಡಗಳಿಗೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
  • ಕಸ ಸಂಸ್ಕರಣಾ ಘಟಕ ನಿರ್ಮಾಣದ ವಿರುದ್ಧ ಜಿಬಿಎ ಅಧಿಕಾರಿಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರ ಆರೋಪಗಳೇನು?

ಸ್ಥಳೀಯರ ಆರೋಪದ ಪ್ರಕಾರ, ಉದ್ಯಾನವನಕ್ಕಾಗಿ ಮೀಸಲಾಗಿದ್ದ ಜಾಗದ ಮುಕ್ಕಾಲು ಭಾಗ ಈಗಾಗಲೇ ವಿವಿಧ ಸರ್ಕಾರಿ ಕಟ್ಟಡಗಳಿಗೆ ಬಳಕೆಯಾಗಿದೆ. ಪಾರ್ಕ್ ಆವರಣದಲ್ಲೇ ವಾರ್ಡ್ ಕಚೇರಿ, ಬೆಂಗಳೂರು ಒನ್ ಕೇಂದ್ರ, ನಮ್ಮ ಕ್ಲಿನಿಕ್ ಹಾಗೂ ಕಸ ವಿಂಗಡಣೆ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇದೀಗ ಉಳಿದಿರುವ ಅಲ್ಪ ಪ್ರಮಾಣದ ಹಸಿರು ಪ್ರದೇಶದ ಮೇಲೂ ಅಧಿಕಾರಿಗಳ ಕಣ್ಣು ಬಿದ್ದಿದ್ದು, ಅಲ್ಲಿ ಮತ್ತೊಂದು ಕಸ ಸಂಸ್ಕರಣಾ ಘಟಕ ನಿರ್ಮಿಸಲು ಮುಂದಾಗಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.

ಉದ್ಯಾನವನವನ್ನು ಸಂರಕ್ಷಿ: ರೈತರ ಒತ್ತಾಯ

ಮಕ್ಕಳ ಆಟ, ಹಿರಿಯ ನಾಗರಿಕರ ವಾಯುವಿಹಾರ ಹಾಗೂ ಸಾರ್ವಜನಿಕರ ವಿಶ್ರಾಂತಿಗೆ ಮೀಸಲಾಗಿದ್ದ ಏಕೈಕ ತಾಣ ಸಂಪೂರ್ಣ ಕಣ್ಮರೆಯಾಗುವ ಆತಂಕ ಎದುರಾಗಿದೆ. ಉದ್ಯಾನವನಗಳನ್ನು ಸಂರಕ್ಷಿಸಬೇಕಾದ ಅಧಿಕಾರಿಗಳೇ ಈ ರೀತಿ ನಿಯಮ ಗಾಳಿಗೆ ತೂರುತ್ತಿರುವುದು ಎಷ್ಟು ಕಾನೂನುಬದ್ಧ ಎಂದು ಸ್ಥಳೀಯ ನಿವಾಸಿ ಕೃಷ್ಣ ಪ್ರಶ್ನಿಸಿದ್ದಾರೆ. ಹಸಿರು ವಲಯವನ್ನು ನಾಶಪಡಿಸುವುದನ್ನು ಕೈಬಿಟ್ಟು, ಉಳಿದಿರುವ ಉದ್ಯಾನವನವನ್ನು ತಕ್ಷಣವೇ ಸಂರಕ್ಷಿಸಬೇಕು ಎಂದು ನಿವಾಸಿಗಳು ಜಿಬಿಎ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *