ಗೂಗಲ್ ಕಚೇರಿಯಲ್ಲಿ ನಡೆದ ‘ಮ್ಯಾಂಗೋ ಫೆಸ್ಟಿವಲ್’ ವಿಡಿಯೋ ವೈರಲ್Image Credit source: unfilteredgazal instagram account
ಬೆಂಗಳೂರು, ಜೂನ್ 13: ನಗರದಲ್ಲಿರುವ ಗೂಗಲ್ (Google) ಕಚೇರಿಯಲ್ಲಿ ನಡೆದ ವಿಶಿಷ್ಟ ‘ಮ್ಯಾಂಗೋ ಫೆಸ್ಟಿವಲ್’ (ಮಾವಿನಹಣ್ಣಿನ ಹಬ್ಬ) ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇಂಟರ್ನೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಲ್ಲಿನ ಉದ್ಯೋಗಿಯೊಬ್ಬರು ಫೆಸ್ಟಿವಲ್ನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾನಾ ಬಗೆಯ ಮಾವಿನ ತಿನಿಸುಗಳನ್ನು ತೋರಿಸಿ ನೆಟ್ಟಿಗರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.
ಮುಖ್ಯಾಂಶಗಳು
- ಬೆಂಗಳೂರಿನ ಗೂಗಲ್ ಕಚೇರಿಯಲ್ಲಿ ನಡೆದ ಮಾವಿನಹಣ್ಣಿನ ಹಬ್ಬದ ವಿಡಿಯೋ ವೈರಲ್ ಆಗಿದೆ.
- ಮಾವಿನಹಣ್ಣಿನ ವಿಧವಿಧದ ತಿನಿಸುಗಳನ್ನು ಸವಿಯಲು ಉದ್ಯೋಗಿ ಕಚೇರಿಗೆ ಭೇಟಿ ನೀಡಿದ್ದಾರೆ.
- ಗೂಗಲ್ ವರ್ಕ್ ಕಲ್ಚರ್ ನೋಡಿ ತಮಗೂ ಕೆಲಸ ಬೇಕೆಂದು ನೆಟ್ಟಿಗರು ಬಯಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಯುವತಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಮಾವಿನ ಹಣ್ಣಿನ ಖಾದ್ಯಗಳನ್ನು ಸವಿಯಲೆಂದೇ ಸಂಜೆ 4 ಗಂಟೆಗೆ ಆಫೀಸ್ ತಲುಪಿದ ಆಕೆ, ಅಲ್ಲಿನ ಸುಂದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಣ್ಮನ ಸೆಳೆಯುವ ಮಾವಿನ ತಿನಿಸುಗಳು
ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಾವಿನಹಣ್ಣಿನ ಪ್ರಿಯರಿಗೆ ಸ್ವರ್ಗವೇ ಸೃಷ್ಟಿಯಾದಂತಿತ್ತು. ದೊಡ್ಡ ದೊಡ್ಡ ಟ್ರೇಗಳಲ್ಲಿ ಜೋಡಿಸಿಟ್ಟ ವಿವಿಧ ತಳಿಯ ಮಾವಿನಹಣ್ಣುಗಳು, ಸುಂದರವಾದ ಮ್ಯಾಂಗೋ ಕೇಕ್, ಮ್ಯಾಂಗೋ ಟಾರ್ಟ್ಸ್ (Tarts), ಮಾವಿನಹಣ್ಣಿನ ಸ್ಲೈಸ್‌ಗಳು ಹಾಗೂ ಬಾಯಲ್ಲಿ ನೀರೂರಿಸುವ ಮ್ಯಾಂಗೋ ಶೇಕ್‌ಗಳು ಸೇರಿದಂತೆ ಮಾವಿನಹಣ್ಣಿನಿಂದ ಸಿದ್ಧಪಡಿಸಿದ ಹತ್ತಾರು ಬಗೆಯ ಭಕ್ಷ್ಯಗಳು ಈ ಹಬ್ಬದ ಆಕರ್ಷಣೆಯಾಗಿದ್ದವು.
ನೆಟ್ಟಿಗರ ಪ್ರತಿಕ್ರಿಯೆ
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗೂಗಲ್ ಕಚೇರಿಯ ಈ ಐಷಾರಾಮಿ ವರ್ಕ್ ಕಲ್ಚರ್ ಮತ್ತು ಸೌಲಭ್ಯಗಳನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾರೆ. ನನಗೂ ಗೂಗಲ್‌ನಲ್ಲಿ ಕೆಲಸ ಬೇಕು, ಅಲ್ಲಿಗೆ ಸೇರಲು ಹೇಗೆ ತಯಾರಿ ನಡೆಸಬೇಕು? ಎಂದು ಕೆಲವರು ಕೇಳಿದ್ದರೆ, “ನಾನು ಮಾವಿನಹಣ್ಣಿನ ದೊಡ್ಡ ಅಭಿಮಾನಿ, ಗೂಗಲ್ ಕಚೇರಿಯ ಈ ಸಂಭ್ರಮ ನೋಡಿ ನನಗೆ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ. ಕಚೇರಿಗಳಲ್ಲಿ ಇಂತಹ ಹಬ್ಬಗಳು ಉದ್ಯೋಗಿಗಳ ಉತ್ಸಾಹ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ