Headlines

ಗರ್ಭದೊಳಗಿರುವ ಶಿಶು ಇಡೀ ದಿನ ಮಲಗಿರುತ್ತೆ ಅಂದುಕೊಂಡಿದ್ದೀರಾ, ಬೆಚ್ಚಗೆ ಮಲಗಿ ಏನು ಮಾಡುತ್ತಿರುತ್ತೆ ಗೊತ್ತಾ? – Kannada News | Unborn Baby Activities: More Than Just Sleep in the Womb, Discover Fetal Development

ಗರ್ಭದೊಳಗಿರುವ ಶಿಶುಗಳು ದಿನವಿಡೀ ಕೇವಲ ನಿದ್ರಿಸುತ್ತಾ ಕಾಲ ಕಳೆಯುತ್ತವೆ ಎಂದು ನೀವು ಅಂದುಕೊಂಡಿದ್ದೀರಾ? ಖಂಡಿತವಾಗಿಯೂ ಇದು  ಇಲ್ಲ. ಆಧುನಿಕ ವೈದ್ಯಕೀಯ ತಂತ್ರಜ್ಞಾನದ ಅದ್ಭುತ ಕೊಡುಗೆಯಾಗಿರುವ ‘ಅಡ್ವಾನ್ಸ್ಡ್ ಅಲ್ಟ್ರಾಸೌಂಡ್ ಸ್ಕ್ಯಾನ್‌’ಗಳು ಗರ್ಭದೊಳಗಿನ ಆ ಅಪರೂಪದ, ರೋಮಾಂಚನಕಾರಿ ಜಗತ್ತನ್ನು ಕಣ್ಣೆದುರು ತಂದಿಟ್ಟಿವೆ. ಜಗತ್ತಿಗೆ ಕಾಲಿಡುವ ಮುನ್ನವೇ ತಾಯಿಯ ಒಡಲಲ್ಲಿ ಪುಟ್ಟ ಕಂದಮ್ಮಗಳು ನಡೆಸುವ ಕೀಟಲೆ, ಆಟಗಳು  ಹತ್ತು ಹಲವು.

ಗರ್ಭದಲ್ಲೇ ಆರಂಭವಾಗುತ್ತದೆ ತುಂಟಾಟ
ನಮ್ಮ ಜಗತ್ತನ್ನು ಪ್ರವೇಶಿಸುವ ಮುನ್ನವೇ ಶಿಶುಗಳು ತಮ್ಮದೇ ಆದ ಪುಟ್ಟ ಪ್ರಪಂಚವನ್ನು ಅನ್ವೇಕ್ಷಿಸಲು ಪ್ರಾರಂಭಿಸುತ್ತವೆ ಎಂಬುದನ್ನು ಸ್ಕ್ಯಾನಿಂಗ್ ಚಿತ್ರಗಳು ಸಾಬೀತುಪಡಿಸುತ್ತವೆ. ಗರ್ಭದೊಳಗಿರುವ ಕಂದಮ್ಮಗಳು ಸುಮ್ಮನೆ ಮಲಗಿರುವುದಿಲ್ಲ.

ಆಕಳಿಸುತ್ತವೆ, ಮೈ ಮುರಿಯುತ್ತಾ ಕೈಕಾಲುಗಳನ್ನು ಚಾಚುತ್ತವೆ. ತಾಯಿಯ ಹೊಟ್ಟೆಗೆ ಪುಟ್ಟ ಪಾದಗಳಿಂದ ಒದೆಯುತ್ತಾ ಆಟವಾಡುತ್ತವೆ. ಅತ್ಯಂತ ಮುದ್ದಾಗಿ ತಮ್ಮ ಹೆಬ್ಬೆರಳನ್ನು ಚೀಪುತ್ತಾ ನಿರಾಳವಾಗಿರುತ್ತವೆ. ನಗುವುದು, ಮುಖ ಸಿಂಡರಿಸುವುದು ಸೇರಿದಂತೆ ವಿವಿಧ ಮುಖಭಾವಗಳನ್ನು ಅಭ್ಯಾಸ ಮಾಡುತ್ತಿರುತ್ತವೆ.

ಹೊರ ಜಗತ್ತಿನ ಧ್ವನಿಗೆ ಕಂದನ ಪ್ರತಿಕ್ರಿಯೆ
ಎಲ್ಲಕ್ಕಿಂತ ರೋಮಾಂಚನಕಾರಿ ಸಂಗತಿಯೆಂದರೆ, ಗರ್ಭದಲ್ಲಿರುವ ಮಗು ಕೇವಲ ತನ್ನ ಆಟದಲ್ಲೇ ಮಗ್ನವಾಗಿರುವುದಿಲ್ಲ. ಹೊರ ಜಗತ್ತಿನಿಂದ ಕೇಳಿಬರುವ ಶಬ್ದಗಳಿಗೆ, ವಿಶೇಷವಾಗಿ ತನ್ನ ಹೆತ್ತವರ ಧ್ವನಿ ಹಾಗೂ ಮೃದುವಾದ ಸಂಗೀತಕ್ಕೆ ಅದು ಸ್ಪಂದಿಸುತ್ತದೆ. ಹೊರಗಿನ ಪ್ರೀತಿಯ ಸದ್ದನ್ನು ಆಲಿಸಿದಾಗ ಮಗು ಗರ್ಭದೊಳಗೆ ಚಲಿಸುವುದನ್ನು ಅಥವಾ ಒದೆಯುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದು ಹುಟ್ಟುವ ಮುನ್ನವೇ ತಾಯಿ ಮತ್ತು ಮಗುವಿನ ನಡುವೆ ಬೆಸೆಯುವ ಅದೃಶ್ಯ ಪ್ರೀತಿಯ ಬಂಧಕ್ಕೆ ಸಾಕ್ಷಿಯಾಗಿದೆ.

ಶೈಕ್ಷಣಿಕ ದೃಷ್ಟಿಕೋನದಿಂದ ನೋಡುವುದಾದರೆ, ಮಗುವಿನ ಈ ಪ್ರತಿಯೊಂದು ಸಣ್ಣ ಚಲನೆಯೂ ಕೇವಲ ಆಟವಲ್ಲ, ಅದು ಭವಿಷ್ಯದ ಬದುಕಿಗೆ ನಿಸರ್ಗ ನಡೆಸುವ ಅದ್ಭುತ ತಯಾರಿಯಾಗಿರುತ್ತದೆ. ಮಗು ಗರ್ಭದೊಳಗೆ ಕೈಕಾಲು ಆಡಿಸುವುದರಿಂದ ಆಕೆಯ ಸ್ನಾಯುಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ.
ಹೆಬ್ಬೆರಳು ಚೀಪುವುದು ಮತ್ತು ಒದೆಯುವುದರಿಂದ ಮಗುವಿನ ನರಮಂಡಲ ಹೆಚ್ಚು ಚುರುಕಾಗುತ್ತದೆ. ಇದು ಹೊರ ಜಗತ್ತಿಗೆ ಬಂದ ತಕ್ಷಣ ತಾಯಿಯ ಎದೆಹಾಲು ಉಣ್ಣಲು ಮಗುವನ್ನು ತಯಾರು ಮಾಡುತ್ತದೆ.

ಸೂಚನೆ: ವರ್ಲ್ಡ್​ ಆಫ್ ಬಯೋಲಾಜಿ ವೋಬ್ ಎಂಬ ಇನ್​ಸ್ಟಾ ಅಕೌಂಟ್​ನಲ್ಲಿ ಮಾಹಿತಿ ನೀಡಲಾಗಿದೆ. ಇದ್ಯಾವ ಮಾಹಿತಿಯೂ ಟಿವಿ9 ಕನ್ನಡ ನೀಡುವ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಇತರೆ ವರದಿಗಳನ್ನು ಆಧರಿಸಿ ನೀಡಿರುವ ಮಾಹಿತಿಯಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *