ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮImage Credit source: TV9 Network
ನವದೆಹಲಿ, ಜೂನ್ 15: ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಮಹಾ ಸಮರಕ್ಕೆ (US Iran War) ಕೊನೆಗೂ ಶಾಶ್ವತ ಬ್ರೇಕ್ ಬೀಳುವ ಕಾಲ ಸನ್ನಿಹಿತವಾಗಿದೆ. ಕಳೆದ 100ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿದ್ದ ಭೀಕರ ಯುದ್ಧ ಮತ್ತು ರಾಜತಾಂತ್ರಿಕ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದ್ದು, ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಇಡೀ ಜಗತ್ತಿಗೆ ತೈಲ ಬಿಕ್ಕಟ್ಟಿನ ಆತಂಕದಿಂದ ದೊಡ್ಡ ಮುಕ್ತಿ ಸಿಕ್ಕಂತಾಗಿದೆ.
ಮುಖ್ಯಾಂಶಗಳು
- ಅಮೆರಿಕ-ಇರಾನ್ ನಡುವೆ ಶಾಂತಿ ಒಪ್ಪಂದ ಅಂತಿಮ
- ಹೊರ್ಮುಝ್ ಜಲಸಂಧಿಯ ನೌಕಾ ದಿಗ್ಬಂಧನ ತೆರವು
- ಜೂನ್ 19ರಂದು ಸ್ವಿಟ್ಚರ್ಲೆಂಡ್ನಲ್ಲಿ ಅಧಿಕೃತ ಸಹಿ
ವಿಶ್ವದ ಹಡಗುಗಳ ಮೂಲಕ ತೈಲ ಹರಿಯಲಿ: ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು! ನಾನು ಇಂದಿನಿಂದ ಹಾರ್ಮುಜ್ ಜಲಸಂಧಿಯನ್ನು ಟೋಲ್-ಮುಕ್ತವಾಗಿ ಮುಕ್ತಗೊಳಿಸಲು ಸಂಪೂರ್ಣ ಅಧಿಕಾರ ನೀಡುತ್ತಿದ್ದೇನೆ. ಹಾಗೆಯೇ, ಅಮೆರಿಕ ನೌಕಾಪಡೆಯ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಲು ಆದೇಶಿಸುತ್ತಿದ್ದೇನೆ. ವಿಶ್ವದ ಹಡಗುಗಳೇ, ನಿಮ್ಮ ಇಂಜಿನ್ಗಳನ್ನು ಸ್ಟಾರ್ಟ್ ಮಾಡಿ. ತೈಲವು ಮುಕ್ತವಾಗಿ ಹರಿಯಲಿ!’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ. ಫೆಬ್ರವರಿ 28ರಂದು ಆರಂಭವಾಗಿದ್ದ ಈ ಯುದ್ಧದಿಂದಾಗಿ ಹೊರ್ಮುಝ್ ಜಲಸಂಧಿ ಬಂದ್ ಆಗಿತ್ತು. ಆದರೆ ಈಗ ಇರಾನ್ ಕೂಡ ಈ ಒಪ್ಪಂದವನ್ನು ಖಚಿತಪಡಿಸಿದ್ದು, ಇವತ್ತು ರಾತ್ರಿಯಿಂದಲೇ ಹೊರ್ಮುಝ್ ಮುಕ್ತಗೊಳ್ಳಲಿದೆ ಎಂದು ತಿಳಿಸಿದೆ.
ಅಮೆರಿಕದ ಮೇಲೆ ಇರಾನ್ಗೆ ಇನ್ನೂ ಅನುಮಾನ!
ಇರಾನ್ ಮಾಧ್ಯಮಗಳ ಪ್ರಕಾರ, ‘ದೇವರ ಕೃಪೆಯಿಂದಾಗಿ ದುಷ್ಟ ಅಮೆರಿಕನ್ ಮತ್ತು ಜಿಯೋನಿಸ್ಟ್ ಶತ್ರುಗಳಿಗೆ ಶರಣಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂಬುದನ್ನು ನಮ್ಮ ಹೋರಾಟಗಾರರು ಸಾಬೀತುಪಡಿಸಿದ್ದಾರೆ. ಆದರೆ, ಈ ಒಪ್ಪಂದದ ಅರ್ಥ ನಮ್ಮ ಶತ್ರುವನ್ನು ಪೂರ್ತಿಯಾಗಿ ನಂಬುವುದು ಎಂದಲ್ಲ. ಇದನ್ನು ಅಪನಂಬಿಕೆಯೊಂದಿಗೇ ಅಂತಿಮಗೊಳಿಸಲಾಗಿದೆ. ಅಮೆರಿಕದ ಬದ್ಧತೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತೇವೆ’ ಎಂದು ಇರಾನ್ ಹೇಳಿದೆ. ಮುಂದಿನ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಅಂತಿಮ ಒಪ್ಪಂದದ ಮಾತುಕತೆಗಳು ಮುಂದುವರಿಯಲಿವೆ.
ಪಾಕಿಸ್ತಾನದ ಮಧ್ಯಸ್ಥಿಕೆ, ಜೂನ್ 19ಕ್ಕೆ ಸಹಿ
ಅಮೆರಿಕ ಮತ್ತು ಇರಾನ್ ನಡುವಿನ ಈ ಸಂಘರ್ಷವನ್ನು ತಣ್ಣಗಾಗಿಸಲು ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆ ವಹಿಸಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ‘ವ್ಯಾಪಕ ಮಾತುಕತೆಗಳ ನಂತರ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ಕೊನೆಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಜೂನ್ 19ರ ಶುಕ್ರವಾರದಂದು ಸ್ವಿಟ್ಚರ್ಲೆಂಡ್ನಲ್ಲಿ ಅಧಿಕೃತ ಸಹಿ ಸಮಾರಂಭ ನಡೆಯಲಿದೆ’ ಎಂದು ತಿಳಿಸಿದ್ದಾರೆ. ಜುಲೈ ಆರಂಭದಲ್ಲಿ ಇರಾನ್ನ ಮಾಜಿ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ಕದನ ವಿರಾಮ ಜಾರಿಗೆ ಬರುತ್ತಿರುವುದು ಗಮನಾರ್ಹ.
ನೆತನ್ಯಾಹು ವಿರುದ್ಧ ಟ್ರಂಪ್ ಆಕ್ರೋಶ
ಒಂದೆಡೆ ಶಾಂತಿ ಮಾತುಕತೆಗಳು ಅಂತಿಮ ಹಂತ ತಲುಪಿದ್ದಾಗಲೇ, ಇಸ್ರೇಲ್ ಸೇನೆ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿತ್ತು. ಇಸ್ರೇಲ್ನ ಈ ಕ್ರಮಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಯುದ್ಧ ನಿಲ್ಲುವ ಮುನ್ಸೂಚನೆ ಸಿಕ್ಕಿದ್ದರೂ, ಲೆಬನಾನ್ ಮೇಲಿನ ದಾಳಿಯನ್ನು ಇಸ್ರೇಲ್ ಸಂಪೂರ್ಣವಾಗಿ ನಿಲ್ಲಿಸುತ್ತದೆಯೇ ಮತ್ತು ಇಸ್ರೇಲ್ ಈ ಒಪ್ಪಂದದ ಭಾಗವಾಗಿದೆಯೇ ಇಲ್ಲವೇ ಎಂಬುದು ಜಿನೇವಾದಲ್ಲಿ ನಡೆಯುವ ಸುದ್ದಿಗೋಷ್ಠಿಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ