ರಾಮ್ ಚರಣ್ (Ram Charan) ಮತ್ತು ಸುಕುಮಾರ್ ಕಾಂಬಿನೇಷನ್ ಅಲ್ಲಿ ‘ರಂಗಸ್ಥಳಂ’ ಸಿನಿಮಾ ಮೂಡಿ ಬಂದಿತ್ತು. ಇದಕ್ಕೆ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯ ಸುದ್ದಿಯೊಂದು ಕೇಳಿಬಂದಿದೆ. ಇವರಿಬ್ಬರ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಆರಂಭವಾಗುವುದು ಮತ್ತಷ್ಟು ತಡವಾಗಲಿದೆ ಎಂದು ಸಿನಿಮಾ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಆದರೆ, ಇದು ರಾಮ್ ಚರಣ್ಗೆ ವರದಾನವಾಗಿದೆ.
ಮೂಲಗಳ ಪ್ರಕಾರ, ನಿರ್ದೇಶಕ ಸುಕುಮಾರ್ ಅವರು ಈ ಚಿತ್ರದ ಚಿತ್ರಕಥೆಯನ್ನು ಇನ್ನೂ ಸಂಪೂರ್ಣವಾಗಿ ಫೈನಲ್ ಮಾಡಿಲ್ಲ ಎನ್ನಲಾಗಿದೆ. ಕಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಮತ್ತು ಪ್ರತಿಯೊಂದು ದೃಶ್ಯವನ್ನು ಅಚ್ಚುಕಟ್ಟಾಗಿ ರೂಪಿಸಲು ಸುಕುಮಾರ್ ಅವರು ಇನ್ನೂ ಸ್ವಲ್ಪ ಸಮಯಾವಕಾಶ ಕೇಳಿದ್ದಾರಂತೆ. ಹೀಗಾಗಿ, ಈ ಮೆಗಾ ಪ್ರಾಜೆಕ್ಟ್ನ ಅಧಿಕೃತ ಲಾಂಚ್ ಈ ವರ್ಷದ ದಸರಾ ಹಬ್ಬದ ನಂತರವಷ್ಟೇ ನಡೆಯುವ ಸಾಧ್ಯತೆ ಇದೆ.
ಈ ವಿಳಂಬ ನಟ ರಾಮ್ ಚರಣ್ ಅವರಿಗೆ ಒಂದು ರೀತಿಯಲ್ಲಿ ವರವಾಗಲಿದೆ ಎನ್ನಲಾಗುತ್ತಿದೆ. ಏಕೆಂದರೆ, ರಾಮ್ ಚರಣ್ ಸದ್ಯಕ್ಕೆ ತಮ್ಮ ಇತ್ತೀಚಿನ ಸೆನ್ಸೇಷನಲ್ ಬ್ಲಾಕ್ಬಸ್ಟರ್ ‘ಪೆದ್ದಿ’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಜೂನ್ 4 ರಂದು ಬಿಡುಗಡೆಯಾದ ‘ಪೆದ್ದಿ’ ಸಿನಿಮಾ 2026ರಲ್ಲಿ ದಕ್ಷಿಣ ಭಾರತದಲ್ಲೇ ನಂಬರ್ ಒನ್ ಗಳಿಕೆ ಮಾಡಿ ಭರ್ಜರಿ ದಾಖಲೆ ಬರೆಯುತ್ತಿದ್ದು, ರಾಮ್ ಚರಣ್ ಸದ್ಯ ಅದರ ಸಕ್ಸಸ್ ಸಂಭ್ರಮದಲ್ಲಿದ್ದಾರೆ.
ಇದರ ಜೊತೆಗೆ, ರಾಮ್ ಚರಣ್ ಇತ್ತೀಚೆಗೆ ಮಣಿಕಟ್ಟಿನ ಗಾಯದಿಂದ ಬಳಲುತ್ತಿದ್ದು, ಸುಕುಮಾರ್ ಸಿನಿಮಾ ತಡವಾಗುತ್ತಿರುವುದರಿಂದ ಅವರಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಉತ್ತಮ ಬ್ರೇಕ್ ಸಿಕ್ಕಂತಾಗಿದೆ. ಗಾಯದಿಂದ ಪೂರ್ತಿಯಾಗಿ ಗುಣಮುಖರಾದ ಬಳಿಕವೇ ಅವರು ಸುಕುಮಾರ್ ಅವರ ಬಿಗ್ ಬಜೆಟ್ ಚಿತ್ರದ ಸೆಟ್ಗೆ ಜಾಯಿನ್ ಆಗಲಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಅವಳಿ ಮಕ್ಕಳ ಫೋಟೋ ಹಂಚಿಕೊಂಡ ರಾಮ್ ಚರಣ್-ಉಪಾಸನಾ
ನಿರ್ದೇಶಕರು ಕಥೆಗಾಗಿ ಸಮಯ ತೆಗೆದುಕೊಳ್ಳುತ್ತಿರುವುದು ಮತ್ತು ನಟನಿಗೆ ಗಾಯದಿಂದ ಚೇತರಿಸಿಕೊಳ್ಳಲು ಗ್ಯಾಪ್ ಸಿಕ್ಕಿರುವುದು ಇಬ್ಬರಿಗೂ ಪ್ಲಸ್ ಪಾಯಿಂಟ್ ಆಗಿದೆ. ಸಿನಿಮಾ ತಡವಾದರೂ ಇವರಿಬ್ಬರ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇರುವುದರಿಂದ, ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಂದು ಧೂಳೆಬ್ಬಿಸುವ ಸಿನಿಮಾ ಬರುವುದು ಗ್ಯಾರಂಟಿ ಎಂಬ ನಂಬಿಕೆಯಲ್ಲಿ ಅಭಿಮಾನಿಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 10:43 am, Mon, 15 June 26