ಕಳಪೆ ಕಾಮಗಾರಿ ಪ್ರಶ್ನಿಸಿದವರ ವಿರುದ್ಧ ಅಶ್ಲೀಲ ಪದ ಬಳಸಿದ ಕಾಂಗ್ರೆಸ್ ಸಂಸದ
Image Credit source: Tv9 Kannada
ಬಳ್ಳಾರಿ, ಜೂನ್ 15: ನಿರ್ಮಾಣಗೊಂಡ ಕೆಲವೇ ದಿನದಲ್ಲೇ ಸರ್ವಿಸ್ ರಸ್ತೆ ಕುಸಿದ ಹಿನ್ನೆಲೆ ಪರಿಶೀಲನೆಗಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಳ್ಳಾರಿ ಸಂಸದ ಇ. ತುಕಾರಾಂ ಸ್ಥಳೀಯ ನಿವಾಸಿಗಳ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಘಟನೆ ನಡೆದಿದೆ. ಕಳಪೆ ಕಾಮಗಾರಿಗೆ ಬಗ್ಗೆ ಸಂಸದರನ್ನು ಸ್ಥಳೀಯರು ಪ್ರಶ್ನೆ ಮಾಡಿದ ವೇಳೆ ತುಕಾರಾಂ ಗರಂ ಆಗಿದ್ದು, ತುಕಾರಾಂ ನಿಂದನೆ ಮಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಖ್ಯಾಂಶಗಳು
- ನಿರ್ಮಾಣಗೊಂಡ ಕೆಲವೇ ದಿನದಲ್ಲೇ ಸರ್ವಿಸ್ ರಸ್ತೆ ಕುಸಿತ
- ಕಳಪೆ ಕಾಮಗಾರಿ ಬಗ್ಗೆ ಕೇಳಿದ್ದಕ್ಕೆ ಸಂಸದ ತುಕಾರಾಂ ಗರಂ
- ಸ್ಥಳೀಯರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಮೇಲ್ಸೆತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದೆ ಟ್ರಕ್ ನಿಂತಿದ್ದಾಗ ಸರ್ವಿಸ್ ರಸ್ತೆ ಕುಸಿದುಬಿದ್ದಿತ್ತು. ರಸ್ತೆ ನಿರ್ಮಾಣಗೊಂಡು ಕೇವಲ 10 ದಿನಗಳಲ್ಲಿಯೇ ಘಟನೆ ನಡೆದಿದ್ದ ಕಾರಣ ಕಳಪೆ ಕಾಮಗಾರಿಯಿಂದಲೇ ಈರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. 2 ತಿಂಗಳ ಹಿಂದೆಯಷ್ಟೇ ಕಾಮಗಾರಿಗೆ ಸಂಸದ ತುಕಾರಾಂ ಭೂಮಿ ಪೂಜೆ ನೆರವೇರಿಸಿದ್ದು, 33 ಕೋಟಿ ವೆಚ್ಚದಲ್ಲಿ ಮೆಲ್ಸೇತುವೆ, ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಇದನ್ನೂ ಓದಿ: 6 ಸಾವಿರ ಕೊಟ್ರೆ ಒಂದು ವಿಷಯ ಪಾಸ್; ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ್ತೊಂದು ಕಳ್ಳಾಟ ಬಯಲು
ಹಣ ಉಳಿಸಲು ರಸ್ತೆ ನಿರ್ಮಾಣದ ವೇಳೆ ಮಣ್ಣು ಹಾಕದೇ ಪ್ಲೈಯಶ್ ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ. ಹೀಗಾಗಿಯೇ ರಸ್ತೆ ನಿರ್ಮಿಸಿ ಕೆಲ ದಿನಗಳು ಕಳೆಯುವುದರ ಒಳಗೆ ಅದು ಕುಸಿಯುತ್ತಿದೆ. ಜನರ ಹಣವನ್ನು ಈ ರೀತು ದುರ್ಬಳಕ್ಕೆ ಮಾಡುತ್ತಿರುವ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.