Headlines

ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ – Kannada News | PM Narendra Modi welcomes US Iran peace deal hopeful of restoration of peace and stability in West Asia

ನವದೆಹಲಿ, ಜೂನ್ 15: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಮಹತ್ವದ ಶಾಂತಿ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಧಿಕೃತವಾಗಿ ಸ್ವಾಗತಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಜಾಗತಿಕ ಸ್ಥಿರತೆಗಾಗಿ ಈ ಒಪ್ಪಂದದ ಅಗತ್ಯವನ್ನು ಒತ್ತಿಹೇಳಿದ್ದಾರೆ.

“ಪಶ್ಚಿಮ ಏಷ್ಯಾದ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಈ ಯುದ್ಧವು ಜಗತ್ತಿನಾದ್ಯಂತ ತೀವ್ರ ಆರ್ಥಿಕ ಸಂಕಷ್ಟವನ್ನು ಸೃಷ್ಟಿಸಿತ್ತು. ಹಲವು ದೇಶಗಳಲ್ಲಿ ಅಮಾಯಕರು ಜೀವ ಕಳೆದುಕೊಳ್ಳುವಂತೆ ಮಾಡಿತ್ತು. ಈ ಒಪ್ಪಂದದ ಅನುಷ್ಠಾನವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ನೆರವಾಗುತ್ತದೆ ಹಾಗೂ ಮುಕ್ತ ಕಡಲ ಸಂಚಾರ ಮತ್ತು ಮುಕ್ತ ವ್ಯಾಪಾರವನ್ನು ಖಚಿತಪಡಿಸುತ್ತದೆ ಎಂದು ಭಾರತ ಆಶಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉಳಿದಿರುವ ಇತರ ಪ್ರಮುಖ ವಿಷಯಗಳ ಬಗ್ಗೆಯೂ ಶೀಘ್ರದಲ್ಲೇ ಮಾತುಕತೆಗಳು ನಡೆದು, ಉಭಯ ದೇಶಗಳ ನಡುವೆ ದೀರ್ಘಕಾಲೀನ ಸುಸ್ಥಿರ ಅಂತಿಮ ಒಪ್ಪಂದ ಏರ್ಪಡಲಿ ಎಂದು ಭಾರತ ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಇಂದು (ಸೋಮವಾರ) ಮುಂಜಾನೆ ಅಮೆರಿಕ ಮತ್ತು ಇರಾನ್ ನಡುವಿನ ಈ ಐತಿಹಾಸಿಕ ರಾಜತಾಂತ್ರಿಕ ಯಶಸ್ಸನ್ನು ಪ್ರಕಟಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ವೇದಿಕೆಯಲ್ಲಿ “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಜಗತ್ತಿನ ಹಡಗುಗಳೇ, ನಿಮ್ಮ ಇಂಜಿನ್ ಸ್ಟಾರ್ಟ್ ಮಾಡಿ, ತೈಲವು ಮುಕ್ತವಾಗಿ ಹರಿಯಲಿ!” ಎಂದು ಬರೆಯುವ ಮೂಲಕ ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಹಿಂಪಡೆಯಲು ಅನುಮೋದನೆ ನೀಡಿರುವುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Video: ಅಮೆರಿಕ-ಇರಾನ್ ಶಾಂತಿ ಒಪ್ಪಂದ: 108 ದಿನಗಳ ಯುದ್ಧಕ್ಕೆ ತೆರೆ, ಪ್ರಮುಖ ಷರತ್ತುಗಳೇನು?

ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಈ ಬಗ್ಗೆ ಮೊದಲು ಮಾಹಿತಿ ನೀಡಿ, “ಲೆಬನಾನ್ ಒಳಗೊಂಡಂತೆ ಎಲ್ಲಾ ರಂಗಗಳಲ್ಲೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಶ್ವತವಾಗಿ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಎರಡೂ ಕಡೆಯವರು ಒಪ್ಪಿದ್ದಾರೆ” ಎಂದು ತಿಳಿಸಿದ್ದಾರೆ. ಕತಾರ್ ಸಹ ಈ ಶಾಂತಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇರಾನ್‌ನ ಕಾನೂನು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಉಪ ವಿದೇಶಾಂಗ ಸಚಿವ ಕಾಜೆಮ್ ಘರೀಬಾಬಾದಿ ನೀಡಿರುವ ಮಾಹಿತಿ ಪ್ರಕಾರ, ಜೂನ್ 19ರ ಶುಕ್ರವಾರದಂದು ಸ್ವಿಜರ್ಲೆಂಡ್‌ನಲ್ಲಿ (ಜಿನೀವಾ) ಅಧಿಕೃತ ಸಹಿ ಸಮಾರಂಭ ನಡೆಯಲಿದೆ. ಅಮೆರಿಕ ತನ್ನ ಕದನ ವಿರಾಮದ ಭರವಸೆಗಳನ್ನು ಈಡೇರಿಸಿ, ಇರಾನ್ ಮೇಲಿನ ದಿಗ್ಬಂಧನಗಳನ್ನು ತೆರವುಗೊಳಿಸಿ, ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಿದ ಬಳಿಕವಷ್ಟೇ ಅಂತಿಮ ಒಪ್ಪಂದಕ್ಕಾಗಿ 60 ದಿನಗಳ ಕಾಲಾವಧಿಯ ಮಾತುಕತೆಗೆ ಇರಾನ್ ಒಪ್ಪಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಸಮಾರಂಭದಲ್ಲಿ ಅಮೆರಿಕದ ಪರವಾಗಿ ಉಪ ಅಧ್ಯಕ್ಷ ಜೆ.ಡಿ. ವ್ಯಾನ್ಸ್ ಅಥವಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಖುದ್ದಾಗಿ ಭಾಗವಹಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಇರಾನ್ ಜತೆ ಶಾಂತಿ ಒಪ್ಪಂದ ಮಾಡಿಕೊಂಡ ಟ್ರಂಪ್ ಹೇಳಿದ್ದೇನು?

ಕಳೆದ ಫೆಬ್ರವರಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯ ನಂತರ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದರು. ಇದರಿಂದಾಗಿ ಕಳೆದ 3 ತಿಂಗಳಿನಿಂದ ಈ ಭಾಗದಲ್ಲಿ ಭೀಕರ ಯುದ್ಧ ನಡೆದು ಸಾವಿರಾರು ಜನರು ಮೃತಪಟ್ಟಿದ್ದರು. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ ಬಂದ್ ಆಗಿದ್ದರಿಂದ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು. ಆದರೆ, ಈ ಶಾಂತಿ ಒಪ್ಪಂದದ ಸುದ್ದಿ ಹೊರಬೀಳುತ್ತಿದ್ದಂತೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಸಕಾರಾತ್ಮಕ ಬದಲಾವಣೆಗಳಾಗಿವೆ.

ಈ ಶಾಂತಿ ಒಪ್ಪಂದದ ಸುದ್ದಿ ಹೊರಬಿದ್ದ ಬಳಿಕ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 3.45 ಡಾಲರ್ ಕುಸಿದು 83.89 ಡಾಲರ್‌ಗೆ ತಲುಪಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿದ್ದು, ಸೆನ್ಸೆಕ್ಸ್ ಒಂದೇ ದಿನ 1,100ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು 76,648.74 ರಲ್ಲಿ ವಹಿವಾಟು ಆರಂಭಿಸಿದರೆ, ನಿಫ್ಟಿ 335 ಅಂಕಗಳ ಜಿಗಿತ ಕಂಡು 23,956.40ಕ್ಕೆ ತಲುಪಿದೆ. ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 58 ಪೈಸೆ ಜಿಗಿತ ಕಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *