Headlines

ಭಾರತದಲ್ಲಿ ರಾತ್ರೋರಾತ್ರಿ ಮಣ್ಣುಪಾಲಾಯ್ತು 17 ವರ್ಷಗಳ ಶ್ರಮ: ಟರ್ಕಿ ಕಂಪನಿಯ ಅಳಲಿಗೆ ಏನು ಕಾರಣ? ತಪ್ಪು ಯಾರದು? – Kannada News | Turkey’s Celebi Aviation chairperson Celebioglu speaks of losing business in India after Operation Sindoor

ಬೆಂಗಳೂರು ಏರ್​ಪೋರ್ಟ್ ಚಿತ್ರImage Credit source: PTI

ನವದೆಹಲಿ, ಜೂನ್ 16: ಭಾರತದ ವಿಮಾನಯಾನ ವಲಯದಲ್ಲಿ ಅತ್ಯಂತ ಪ್ರಮುಖ ಗ್ರೌಂಡ್ ಹ್ಯಾಂಡ್ಲಿಂಗ್ (ವಿಮಾನ ನಿಲ್ದಾಣದಲ್ಲಿನ ಸೇವೆಗಳು) ಕಂಪನಿಯಾಗಿದ್ದ ಟರ್ಕಿ ಮೂಲದ ‘ಚೆಲೆಬಿ ಏವಿಯೇಷನ್’ (Çelebi Aviation) ಸಂಸ್ಥೆಯ ಸುರಕ್ಷತಾ ಕ್ಲಿಯರೆನ್ಸ್ ಅನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ ವರ್ಷದ ಮೇಲಾಯಿತು. ಇದೀಗ ಸಂಸ್ಥೆಯ ಮುಖ್ಯಸ್ಥೆ ಕಾನನ್ ಚೆಲೆಬಿಯೋಗ್ಲು (Canan Celebioglu) ಅವರು ಮಾತನಾಡಿದ್ದಾರೆ. ಹಲವು ವರ್ಷಗಳಿಂದ ಶ್ರಮ ಪಟ್ಟು ಕಟ್ಟಿದ್ದ ಬ್ಯುಸಿನೆಸ್ ರಾತ್ರೋರಾತ್ರಿ ನಿಂತುಹೋದಂತಾಯಿತು ಎಂದು ಅವರು ಹೇಳಿದ್ದಾರೆ. ಆಪರೇಷನ್ ಸಿಂದೂರ್ (Operation Sindoor) ವೇಳೆ ಪಾಕಿಸ್ತಾನಕ್ಕೆ ಟರ್ಕಿ ದೇಶದಿಂದ ಡ್ರೋನ್ ಸರಬರಾಜು ಆದ ಹಿನ್ನೆಲೆಯಲ್ಲಿ ಭಾರತವು ಈ ಟರ್ಕಿ ಕಂಪನಿಯ ಸೇವೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿತ್ತು. ಸರ್ಕಾರದ ಈ ಕ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಳ ಜನರು ಸ್ವಾಗತಿಸಿದ್ದಾರೆ.

ಉದ್ಯಮದ ದೈತ್ಯ ಸಂಸ್ಥೆಗೆ ಭದ್ರತೆಯ ಪೆಟ್ಟು

ಚೆಲೆಬಿಯೋಗ್ಲು (Çelebioğlu) ನೇತೃತ್ವದ ಚೆಲೆಬಿ ಏವಿಯೇಷನ್, ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ ಅತ್ಯಂತ ದೊಡ್ಡ ಖಾಸಗಿ ಗ್ರೌಂಡ್ ಹ್ಯಾಂಡ್ಲರ್ ಆಗಿ ಬೆಳೆದಿತ್ತು. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ 9 ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಗ್ರೌಂಡ್ ಆಪರೇಷನ್ಸ್​ನಲ್ಲಿ ಈ ಕಂಪನಿಯೇ ಮುಂಚೂಣಿಯಲ್ಲಿತ್ತು. ಸುಮಾರು 400 ರಿಂದ 500 ಮಿಲಿಯನ್ ಡಾಲರ್ ಮೌಲ್ಯದ ವಹಿವಾಟು ನಡೆಸುವ ಬ್ಯುಸಿನೆಸ್ ಮಟ್ಟಕ್ಕೆ ಬೆಳೆದಿತ್ತು. ಭಾರತದಲ್ಲಿ 10,000ಕ್ಕೂ ಅಧಿಕ ಮಂದಿಗೆ ಉದ್ಯೊಗಗಳನ್ನು ಕೊಟ್ಟಿತ್ತು.

ಇದನ್ನೂ ಓದಿ: ಕೆಲವೇ ಎಐ ಮಾಡಲ್​ಗಳು ಇಡೀ ಉದ್ಯಮವನ್ನೇ ನುಂಗಿ ನೀರು ಕುಡಿಯಲು ಬಿಡಬಾರದು: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಆದರೆ, ಪಾಕಿಸ್ತಾನಕ್ಕೆ ಟರ್ಕಿ ದೇಶವು ಅತ್ಯಾಧುನಿಕ ಡ್ರೋನ್‌ಗಳನ್ನು ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಭಾರತದ ಭದ್ರತೆಗೆ ಇದರಿಂದ ಧಕ್ಕೆ ಬರಬಹುದು ಎಂಬ ಗುಪ್ತಚರ ವರದಿಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ಸಂಸ್ಥೆಯ ಪರವಾನಗಿಯನ್ನು ದಿಢೀರ್ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ವಿಮಾನ ನಿಲ್ದಾಣಗಳಲ್ಲಿದ್ದ ಕಂಪನಿಯ ಉಪಕರಣಗಳನ್ನು ಜಪ್ತಿ ಮಾಡಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳನ್ನು ಇತರ ಪ್ರತಿಸ್ಪರ್ಧಿ ಕಂಪನಿಗಳಿಗೆ ವರ್ಗಾಯಿಸಲಾಯಿತು.

ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮತ್ತು ತೀರ್ಪು

ಕೇಂದ್ರ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಚೆಲೆಬಿಯೋಗ್ಲು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ 2025ರ ಜುಲೈನಲ್ಲಿ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಕಂಪನಿಯ ಅರ್ಜಿಯನ್ನು ವಜಾಗೊಳಿಸಿತು.

ತನಿಖಾ ಸಂಸ್ಥೆಗಳು ಮುಚ್ಚಿದ ಲಕೋಟೆಯಲ್ಲಿ (Sealed Cover) ಸಲ್ಲಿಸಿದ ರಹಸ್ಯ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಧೀಶರು, “ಯಾವುದೇ ಆಡಳಿತಾತ್ಮಕ ನಿಯಮಾವಳಿಗಳು ಅಥವಾ ಪ್ರಕ್ರಿಯೆಗಳಿಗಿಂತ ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತ್ವವೇ ಮೊದಲ ಆದ್ಯತೆಯಾಗಿದೆ” ಎಂದು ಸ್ಪಷ್ಟಪಡಿಸಿ ಸರ್ಕಾರದ ಕ್ರಮವನ್ನು ಎತ್ತಿಹಿಡಿದರು.

ಇದನ್ನೂ ಓದಿ: ಬೆಂಗಳೂರಿನ ಸರ್ವಂ ಎಐ ಈಗ ಯುನಿಕಾರ್ನ್ ಕಂಪನಿಗಳ ಸಾಲಿನಲ್ಲಿ; ಹೂಡಿಕೆ ಮಾಡಿದ ಎಚ್​ಸಿಎಲ್​ಗೂ ಷೇರುಪೇಟೆಯಲ್ಲಿ ಸುಗ್ಗಿ

ರಾಜಕೀಯ ನಂಟಿನ ನಿರಾಕರಣೆ ಮತ್ತು ಸಾರ್ವಜನಿಕ ಪ್ರತಿಕ್ರಿಯೆ

ಚೆಲೆಬಿ ಸಂಸ್ಥೆಯ ಬಹುಪಾಲು ಷೇರುಗಳು ಜಾಗತಿಕ ಹೂಡಿಕೆ ನಿಧಿಗಳ (Global Funds) ಅಧೀನದಲ್ಲಿದ್ದು, ತಮಗೆ ಯಾವುದೇ ರೀತಿಯ ರಾಜಕೀಯ ನಂಟು ಅಥವಾ ವಿದೇಶಿ ಸರ್ಕಾರದ ಪ್ರೇರೇಪಿತ ಉದ್ದೇಶಗಳಿಲ್ಲ ಎಂದು ಕಂಪನಿ ವಾದಿಸಿತ್ತು. ಈ ಬೆಳವಣಿಗೆಗಳಾಗಿ ಒಂದು ವರ್ಷದ ನಂತರ ಚೆಲೆಬಿ ಏವಿಯೇಶನ್​ನ ಮುಖ್ಯಸ್ಥೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಬ್ಲೂಮ್​ಬರ್ಗ್ ನ್ಯೂಸ್ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಅವರು, ‘ನಾವು ಭಾರತವನ್ನು ಇಷ್ಟಪಟ್ಟಿದ್ದೆ. ಹೀಗಾಗಿ, ಅದು ಬಹಳ ಆಘಾತಕಾರಿ ಎನಿಸಿತ್ತು’ ಎಂದಿದ್ದಾರೆ.

ಎಕ್ಸ್​ನಲ್ಲಿ ಬಂದ ಕೆಲ ಟ್ವೀಟ್​ಗಳು

ಸರ್ಕಾರದ ಕ್ರಮಕ್ಕೆ ನೆಟ್ಟಿಗರಿಂದ ಬೆಂಬಲ

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ನೆಟ್ಟಿಗರು ಸರ್ಕಾರದ ಈ ಕಠಿಣ ನಿಲುವಿಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಶ್ಮೀರ ವಿಷಯದಲ್ಲಿ ಟರ್ಕಿ ದೇಶವು ಸತತವಾಗಿ ಪಾಕಿಸ್ತಾನಕ್ಕೆ ನೀಡುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನು ಉಲ್ಲೇಖಿಸಿರುವ ಸಾರ್ವಜನಿಕರು, ಸೂಕ್ಷ್ಮವಾಗಿರುವ ವಿಮಾನ ನಿಲ್ದಾಣಗಳ ಭದ್ರತೆಯನ್ನು ಇಂತಹ ಸಂಸ್ಥೆಗಳಿಗೆ ವಹಿಸುವುದು ಅಪಾಯಕಾರಿ ಎಂದು ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *