ಪ್ರತಿನಿತ್ಯ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಕೊಳಕು ಮತ್ತು ಧೂಳು ಮಾತ್ರವಲ್ಲ ಹಲ್ಲಿ, ಕೀಟಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಹಲ್ಲಿಗಳು (lizards) ಮತ್ತು ಜಿರಳೆಗಳ ಕಾಟ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇದ್ದೇ ಇರುತ್ತವೆ. ಇವುಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಉತ್ಪನ್ನಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಈ ಉತ್ಪನ್ನಗಳು ಆರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿಕಾರಕ. ಆದ್ದರಿಂದ, ಪ್ರತಿನಿತ್ಯ ನೆಲ ಒರೆಸುವಾಗ ಆ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಬೆರೆಸಿ, ಆ ನೀರಿನಲ್ಲಿ ನೆಲವನ್ನು ಒರೆಸಿ. ಇದು ನಿಮ್ಮ ಮನೆಯನ್ನು ಸ್ವಚ್ಛವಾಗಿಡುವುದು ಮಾತ್ರವಲ್ಲದೆ ಹಲ್ಲಿಗಳು ಮತ್ತು ಜಿರಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮನೆಯಿಂದ ಕೀಟಗಳನ್ನು ಓಡಿಸಲು ನೆಲ ಒರೆಸುವ ನೀರಿಗೆ ಏನು ಬೆರೆಸಬೇಕು?
ನಿಂಬೆ ರಸ: ಹಲ್ಲಿಗಳು ಮತ್ತು ಜಿರಳೆಗಳು ನಿಂಬೆಹಣ್ಣಿನಲ್ಲಿರುವ ಬಲವಾದ ಸಿಟ್ರಿಕ್ ಆಮ್ಲದ ವಾಸನೆಯನ್ನು ಇಷ್ಟಪಡುವುದಿಲ್ಲ. ಎರಡು ಚಮಚ ನಿಂಬೆ ರಸವನ್ನು ಒರೆಸುವ ನೀರಿನಲ್ಲಿ ಬೆರೆಸಿ ನೆಲವನ್ನು ಸ್ವಚ್ಛಗೊಳಿಸುವುದರಿಂದ ಮನೆಯೂ ತಾಜಾವಾಗಿರುತ್ತದೆ, ಕೀಟಗಳ ಕಾಟವೂ ಇರೋದಿಲ್ಲ.
ಪುದೀನಾ ಎಣ್ಣೆ: ಈ ಎಣ್ಣೆ ಅತ್ಯುತ್ತಮ ನೈಸರ್ಗಿಕ ಕೀಟ ನಿವಾರಕವಾಗಿದೆ. ಹಲ್ಲಿಗಳು ಮತ್ತು ಜಿರಳೆಗಳು ಇದರ ವಾಸನೆಯನ್ನು ಸಹಿಸುವುದಿಲ್ಲ. ನೆಲ ಒರೆಸುವ ನೀರಿಗೆ 8-10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ನೆಲ ಒರೆಸಿ, ಇದು ಕೂಡ ಹಲ್ಲಿ, ಜಿರಳೆ, ಕೀಟಗಳನ್ನು ದೂರವಿಡಲು ಸಹಕಾರಿ.
ಕರ್ಪೂರ: ಕರ್ಪೂರದ ಪರಿಮಳವು ಕೀಟಗಳು ಮತ್ತು ಹಲ್ಲಿಗಳು ಮನೆಯೊಳಗೆ ಬರುವುದನ್ನು ತಡೆಯುತ್ತದೆ. ಅದಕ್ಕಾಗಿ ಕರ್ಪೂರ ಬೆರೆಸಿದ ನೀರಿನಲ್ಲಿ ನೆಲ ಒರೆಸಿ.
ವಿನೆಗರ್: ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳಿಂದ ಸಮೃದ್ಧವಾಗಿದೆ. ಜಿರಳೆಗಳು ಅದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಮಾಪ್ ನೀರಿಗೆ ಅರ್ಧ ಕಪ್ ವಿನೆಗರ್ ಸೇರಿಸುವುದರಿಂದ ಹಲ್ಲಿಗಳು ಮತ್ತು ಜಿರಳೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಬೇವಿನ ಎಣ್ಣೆ: ಬೇವಿನ ಎಣ್ಣೆ ನೈಸರ್ಗಿಕ ಕೀಟ ನಿವಾರಕವಾಗಿದೆ. ನೀರಿಗೆ ಕೆಲವು ಹನಿ ಬೇವಿನ ಎಣ್ಣೆಯನ್ನು ಸೇರಿಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಜಿರಳೆಗಳು ಮತ್ತು ಇತರ ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ: ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ
ನೀಲಗಿರಿ ಎಣ್ಣೆ: ನೀಲಗಿರಿ ಎಣ್ಣೆಯ ಪರಿಮಳವು ಹಲ್ಲಿಗಳು ಮತ್ತು ಜಿರಳೆಗಳಿಗೆ ಇಷ್ಟವಾಗುವುದಿಲ್ಲ. 10-12 ಹನಿಗಳನ್ನು ನೀರಿನೊಂದಿಗೆ ಬೆರೆಸಿ ಅದರಲ್ಲಿ ನೆಲವನ್ನು ಒರೆಸುವುದರಿಂದ ಮನೆ ತಾಜಾವಾಗಿರುತ್ತದೆ ಮತ್ತು ಕೀಟಗಳ ಕಾಟವೂ ಇರೋದಿಲ್ಲ.
ಅರಿಶಿನ: ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ನೆಲ ಒರೆಸುವ ನೀರಿಗೆ ಸ್ವಲ್ಪ ಅರಿಶಿನವನ್ನು ಸೇರಿಸುವುದರಿಂದ ನಿಮ್ಮ ಮನೆ ಸ್ವಚ್ಛವಾಗಿರುವುದಲ್ಲದೆ ಮತ್ತು ಹಲ್ಲಿ, ಕೀಟಗಳ ಕಾಟವೂ ಇರೋದಿಲ್ಲ.
ಕಲ್ಲು ಉಪ್ಪು: ಕಲ್ಲು ಉಪ್ಪು ಹಲ್ಲಿಗಳು ಮತ್ತು ಜಿರಳೆಗಳು ಇಷ್ಟಪಡದ ಬಲವಾದ ವಾಸನೆಯನ್ನು ಹೊಂದಿರುತ್ತದೆ. ಇದು ಅವುಗಳ ವಾಸನೆಯ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಆ ಪ್ರದೇಶದಿಂದ ದೂರವಿರುವಂತೆ ಮಾಡುತ್ತದೆ. ಹಾಗಾಗಿ ನೆಲ ಒರೆಸುವ ನೀರಿಗೆ ಕಲ್ಲು ಉಪ್ಪು ಸೇರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ