ಕೆಲವರಿಗೆ ಊಟವಾದ ನಂತರ ಸೋಂಪು (Fennel Seeds) ತಿನ್ನುವ ಅಭ್ಯಾಸವಿರುತ್ತದೆ. ಇದು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ದೊರೆಯುವ ಮಸಾಲೆ ಪದಾರ್ಥಗಳಲ್ಲಿ ಒಂದು. ಆದರೆ ಇದು ಕೇವಲ ಬಾಯಿಗೆ ಸುವಾಸನೆ ನೀಡುವುದಷ್ಟೇ ಅಲ್ಲ, ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಊಟದ ನಂತರ ಸ್ವಲ್ಪ ಸೋಂಪನ್ನು ಜಗಿದು ತಿನ್ನುವ ಅಭ್ಯಾಸ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹೌದು, ಒಂದು ಚಿಕ್ಕ ಅಭ್ಯಾಸ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಯಾಕೆ ಸೇವನೆ ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಜೀರ್ಣಕ್ರಿಯೆ ಸುಧಾರಿಸುತ್ತದೆ
ಸೋಂಪು ಜೀರ್ಣರಸಗಳು ಮತ್ತು ಎನ್ಜೈಮ್‌ಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆ ಸಮಸ್ಯೆಗಳು ಕಡಿಮೆಯಾಗಲು ನೆರವಾಗುತ್ತದೆ. ಊಟದ ನಂತರ ಸ್ವಲ್ಪ ಸೋಂಪು ತಿನ್ನುವುದು ಜೀರ್ಣಕ್ರಿಯೆಗೆ ಉತ್ತಮ.
ಬಾಯಿಯ ದುರ್ವಾಸನೆ ನಿವಾರಣೆ
ಸೋಂಪಿನಲ್ಲಿರುವ ನೈಸರ್ಗಿಕ ಸುಗಂಧ ತೈಲಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತವೆ. ಆದ್ದರಿಂದ ಊಟದ ಬಳಿಕ ಸೋಂಪು ಸೇವಿಸುವುದು ಉಸಿರಾಟವನ್ನು ತಾಜಾವಾಗಿರಿಸುತ್ತದೆ.
ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ಸೋಂಪಿನಲ್ಲಿ ವಿಟಮಿನ್ ಎ ಮತ್ತು ಆಂಟಿಆಕ್ಸಿಡೆಂಟ್‌ಗಳು ಇದ್ದು, ಕಣ್ಣಿನ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ. ನಿಯಮಿತ ಸೇವನೆಯಿಂದ ದೃಷ್ಟಿ ಆರೋಗ್ಯಕ್ಕೆ ಲಾಭವಾಗಬಹುದು.
ಚರ್ಮದ ಕಾಂತಿ ಹೆಚ್ಚಿಸುತ್ತದೆ
ಸೋಂಪಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಫ್ರೀ ರಾಡಿಕಲ್‌ಗಳ ಹಾನಿಯನ್ನು ತಡೆಯಲು ಸಹಾಯ ಮಾಡುತ್ತವೆ. ಇದರಿಂದ ಚರ್ಮದ ಆರೋಗ್ಯ ಸುಧಾರಿಸಿ, ಬೇಗ ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಇದನ್ನೂ ಓದಿ: ಮಧುಮೇಹಿಗಳೇ ಊಟಕ್ಕೂ ಮುನ್ನ ಒಂದು ನೆಲ್ಲಿಕಾಯಿ ತಿಂದು ನೋಡಿ! ದೇಹದಲ್ಲಾಗುವ ಬದಲಾವಣೆ ನಿಮಗೆ ತಿಳಿಯುತ್ತೆ
ತೂಕ ನಿಯಂತ್ರಣಕ್ಕೆ ಸಹಕಾರಿ
ಸೋಂಪು ಹಸಿವಿನ ನಿಯಂತ್ರಣಕ್ಕೆ ಸಹಕಾರಿ. ಇದನ್ನು ಜಗಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗಿ ಅನಗತ್ಯ ತಿಂಡಿ ತಿನ್ನುವ ಆಸೆ ಕಡಿಮೆಯಾಗಬಹುದು.
ರಕ್ತದೊತ್ತಡ ನಿಯಂತ್ರಣ
ಸೋಂಪಿನಲ್ಲಿ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ.
ಮಾನಸಿಕ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಒಳ್ಳೆಯದು
ಸೋಂಪಿನಲ್ಲಿರುವ ಪೋಷಕಾಂಶಗಳು ದೇಹದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು (Metabolism) ಉತ್ತೇಜಿಸಿ ದೇಹವನ್ನು ಚುರುಕಾಗಿರಿಸುತ್ತದೆ.
ಭೋಜನದ ನಂತರ ಒಂದು ಚಿಟಿಕೆ ಸೋಂಪು ತಿನ್ನುವುದು ಸರಳ ಅಭ್ಯಾಸ ಎನಿಸಿದರೂ ಕೂಡ ಆರೋಗ್ಯಕರ ಅಭ್ಯಾಸವಾಗಿದೆ. ಇದು ಜೀರ್ಣಕ್ರಿಯೆ, ಬಾಯಿಯ ಆರೋಗ್ಯ, ಚರ್ಮ, ಹೃದಯ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಆದರೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ