ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ತಮ್ಮ ವಿಭಿನ್ನ ಹಾಗೂ ರಿಯಲಿಸ್ಟಿಕ್ ಕ್ರೈಂ ಸಿನಿಮಾಗಳ ಮೂಲಕವೇ ಸೆನ್ಸೇಷನ್ ಸೃಷ್ಟಿಸಿದ್ದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma), ಈಗ ಮುಂಬೈ ಅಂಡರ್‌ವರ್ಲ್ಡ್ ಇತಿಹಾಸದ ಮತ್ತೊಂದು ರೋಚಕ ಪುಟವನ್ನು ತೆರೆಗೆ ತರಲು ಸಜ್ಜಾಗುತ್ತಿದ್ದಾರೆ. ಮುಂಬೈನ ಖ್ಯಾತ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ (Daya Nayak) ಅವರ ಜೀವನಾಧಾರಿತ ಚಿತ್ರವನ್ನು ನಿರ್ದೇಶಿಸಲು ಆರ್‌ಜಿವಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರರಂಗದ ಮೂಲಗಳ ಪ್ರಕಾರ, ಈ ಬಯೋಪಿಕ್ ಸದ್ಯ ಆರಂಭಿಕ ಹಂತದಲ್ಲಿದ್ದು, ಚಿತ್ರಕಥೆ ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ.
ಮುಂಬೈ ಪೊಲೀಸ್ ಇತಿಹಾಸದಲ್ಲೇ ದಯಾ ನಾಯಕ್ ಅವರ ಜರ್ನಿ ಅತ್ಯಂತ ಚರ್ಚೆಯಾದ ವಿಷಯವಾಗಿದೆ. ಮಿಡ್-ಡೇ ವರದಿಯ ಪ್ರಕಾರ, ನಿರ್ಮಾಪಕರು ಈ ಚಿತ್ರವನ್ನು ಕೇವಲ ಬಯೋಪಿಕ್ ಆಗಿ ಮಾಡಬೇಕೇ ಅಥವಾ ಆರ್‌ಜಿವಿ ಅವರದ್ದೇ ಸೂಪರ್ ಹಿಟ್ ‘ಕಂಪನಿ’ ಸಿನಿಮಾದ ಸೀಕ್ವೆಲ್ ಆಗಿ ಪ್ರಸ್ತುತಪಡಿಸಬೇಕೇ ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.
2010ರಲ್ಲೇ ಆರ್‌ಜಿವಿ ಅವರು ‘ಕಂಪನಿ 2’ ಮಾಡುವ ಆಲೋಚನೆ ಹೊಂದಿದ್ದರು. ಅದರಲ್ಲಿ ಗ್ಯಾಂಗ್‌ಸ್ಟರ್‌ಗಳ ಬದಲು ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳ ಕಥೆಯ ಮೇಲೆಯೇ ಹೆಚ್ಚು ಗಮನ ಹರಿಸಲು ಪ್ಲಾನ್ ಮಾಡಲಾಗಿತ್ತು. ಹಾಗಾಗಿ, ಈಗ ಮೂಡಿಬರಲಿರುವ ದಯಾ ನಾಯಕ್ ಬಯೋಪಿಕ್‌ಗೆ ಖುದ್ದು ದಯಾ ನಾಯಕ್ ಅವರನ್ನೇ ಸಲಹೆಗಾರರನ್ನಾಗಿ ಮಾಡಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಸಖತ್ ಆ್ಯಕ್ಟಿವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಬಿಗ್ ಬಜೆಟ್ ಸಿನಿಮಾಗಳನ್ನು ಅನೌನ್ಸ್ ಮಾಡುತ್ತಿದ್ದಾರೆ. ಅವರ ಮುಂಬರುವ ಚಿತ್ರಗಳಲ್ಲಿ ‘ಸಿಂಡಿಕೇಟ್’ ಪ್ರಮುಖವಾಗಿದೆ. ಇದೊಂದು ಜಾಗತಿಕ ಭಯೋತ್ಪಾದನೆ ಮತ್ತು ಕ್ರೈಂ ನೆಟ್‌ವರ್ಕ್ ಆಧಾರಿತ ಅತ್ಯಂತ ಭಯಾನಕ ಸಿನಿಮಾವಾಗಲಿದ್ದು, ‘ಧುರಂಧರ್’ ಚಿತ್ರದ ಮೇಕಿಂಗ್ ಶೈಲಿಯಿಂದ ಪ್ರೇರಿತವಾಗಿರಲಿದೆ.
ಇದನ್ನೂ ಓದಿ: ನನ್ನ ಯಶಸ್ಸಿಗೆ ದಾವುದ್ ಇಬ್ರಾಹಿಂ ಕಾರಣ: ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ
‘ಸಿಂಡಿಕೇಟ್’ ಸಿನಿಮಾವನ್ನು ಆದಿತ್ಯ ಧರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಧುರಂಧರ್ 2 ನೋಡಿದ ಮೇಲೆ ನನ್ನ ಹಳೇ ಸಿನಿಮಾಗಳು ಏನೇನೂ ಅಲ್ಲ ಅನಿಸಿತು, ಸಿಂಡಿಕೇಟ್ ನನ್ನ ಹೊಸ ಸಿನಿಮಾ. ಹೊಸ ಇತಿಹಾಸ ಸೃಷ್ಟಿಸಲಿದೆ’ ಎಂದು ಆರ್‌ಜಿವಿ ಹೇಳಿಕೊಂಡಿದ್ದಾರೆ. ಅಲ್ಲದೇ, ‘ಸಿಂಡಿಕೇಟ್’ ಸಿನಿಮಾದ ಶೂಟಿಂಗ್ ಮುಗಿದ ಬೆನ್ನಲ್ಲೇ ಅವರ ‘ಸರ್ಕಾರ್ 4’ ಸಿನಿಮಾ ಸೆಟ್ಟೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.