ಪ್ರಾಚೀನ ಜ್ಯೋತಿಷ್ಯ ಶಾಸ್ತ್ರ ಮತ್ತು ಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಮೂಗಿನ ಆಕಾರವನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಅವರ ಗುಣಗಳು, ಸಾಮರ್ಥ್ಯಗಳು ಮತ್ತು ಭವಿಷ್ಯದ ಕುರಿತು ತಿಳಿದುಕೊಳ್ಳಬಹುದು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಮೂಗಿನ ಆಕಾರದ ಮೂಲಕ ವ್ಯಕ್ತಿತ್ವ ವಿಶ್ಲೇಷಣೆಯು ಅದೆಷ್ಟೋ ಶತಮಾನಗಳಿಂದಲೂ ರೂಢಿಯಲ್ಲಿದೆ. ನಮ್ಮ ಹಸ್ತ ರೇಖೆಗಳು ಬದಲಾಗುವಂತೆ, ಮೂಗಿನ ಆಕಾರವು ಬದಲಾಗುವುದಿಲ್ಲ. ಇದು ವ್ಯಕ್ತಿಯ ಮೂಲ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಪ್ರಾಚೀನ ಸಾಮುದ್ರಿಕ ಶಾಸ್ತ್ರವು ಮೂಗಿನ ವಿನ್ಯಾಸವು ವ್ಯಕ್ತಿಯ ಅಸಲಿ ಸ್ವಭಾವ ಮತ್ತು ಭವಿಷ್ಯದ ರಹಸ್ಯಗಳನ್ನು ಹೇಳುತ್ತದೆ ಎಂದು ಪ್ರತಿಪಾದಿಸುತ್ತದೆ. ಪ್ರತಿಯೊಬ್ಬರ ಮೂಗು ಸಹ ಒಂದೊಂದು ವಿಶೇಷವಾದ ಆಕೃತಿಯನ್ನು ಹೊಂದಿರುತ್ತದೆ. ಹಾಗೆಯೇ ಪ್ರತಿಯೊಬ್ಬರೂ ವಿಶೇಷವಾದ ಶಕ್ತಿಗಳನ್ನು ಸಹ ಹೊಂದಿರುತ್ತಾರೆ. ಈ ಶಕ್ತಿಗಳು ಮತ್ತು ಮೂಗಿನ ಆಕಾರದ ನಡುವೆ ಒಂದು ಪೂರಕ ಸಂಬಂಧವಿದೆ.
ಮಹಾಪುರುಷರ ಉದಾಹರಣೆಗಳನ್ನು ಗಮನಿಸಿದರೆ ಈ ವಿಷಯ ಇನ್ನಷ್ಟು ಸ್ಪಷ್ಟವಾಗುತ್ತದೆ. ಸರ್ ಎಂ. ವಿಶ್ವೇಶ್ವರಯ್ಯನವರ ನೀಳವಾದ, ಉದ್ದನೆಯ ಮೂಗು, ಅಗಲವಾದ ಕಿವಿಗಳು ಮತ್ತು ಶಂಖಾಕೃತಿಯ ತಲೆ, ಅವರು ನೂರ ಹತ್ತು ವರ್ಷಗಳ ಕಾಲ ಬದುಕಿ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸಲು ಪೂರಕವಾಗಿತ್ತು. ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಅರವಿಂದರು, ರಮಣ ಮಹರ್ಷಿಗಳು ಹೀಗೆ ಹಲವು ಮಹನೀಯರ ಮೂಗಿನ ಆಕಾರವು ಅವರ ವ್ಯಕ್ತಿತ್ವಕ್ಕೆ ಪೂರಕವಾಗಿರುವುದನ್ನು ನಾವು ಗಮನಿಸಬಹುದು.
ಜ್ಯೋತಿಷ್ಯ ಶಾಸ್ತ್ರವು ನಾಲ್ಕು ಪ್ರಮುಖ ರೀತಿಯ ಮೂಗಿನ ಆಕಾರಗಳನ್ನು ಗುರುತಿಸುತ್ತದೆ ಮತ್ತು ಅವುಗಳ ಗುಣಲಕ್ಷಣಗಳನ್ನು ವಿವರಿಸುತ್ತದೆ:
ನೇರ ಮತ್ತು ಚೂಪಾದ ಮೂಗು:
ಈ ರೀತಿಯ ಮೂಗನ್ನು ಹೊಂದಿರುವವರು ತೀಕ್ಷ್ಣ ಬುದ್ಧಿವಂತರಾಗಿರುತ್ತಾರೆ. ವಿಷಯಗಳನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಶಿಸ್ತುಬದ್ಧರು, ಕಠಿಣ ಪರಿಶ್ರಮಿಗಳು ಮತ್ತು ತಮ್ಮ ಕೆಲಸದಲ್ಲಿ ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ನೇರವಾಗಿ ಮಾತನಾಡುತ್ತಾರೆ ಮತ್ತು ಯಾವುದೇ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿರುತ್ತಾರೆ.
ಗಿಳಿಯ ಮೂಗಿನಂತೆ ಬಾಗಿದ ಮೂಗು:
ಇಂಗ್ಲಿಷ್ನಲ್ಲಿ ಇದನ್ನು ಪ್ಯಾರೆಟ್ ನೋಸ್ ಎಂದು ಕರೆಯಲಾಗುತ್ತದೆ. ಈ ಆಕಾರದ ಮೂಗನ್ನು ಹೊಂದಿರುವವರು ಪ್ರಾಮಾಣಿಕರು, ನಿಷ್ಠೆ ಮತ್ತು ಶ್ರದ್ಧೆ ಇರುವವರು. ಕೆಲಸ ಕಾರ್ಯಗಳಲ್ಲಿ ಕ್ರಮಬದ್ಧತೆ ಇರುತ್ತದೆ. ಇವರು ಸ್ವಪ್ರಯತ್ನದಿಂದ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸುತ್ತಾರೆ ಮತ್ತು ಯಾರ ಮುಲಾಜಿಗೂ ಒಳಗಾಗಲು ಬಯಸುವುದಿಲ್ಲ. ಅಲ್ಪ ತೃಪ್ತರಾಗಿದ್ದು, ಇರುವಷ್ಟರಲ್ಲಿಯೇ ಸಂತೃಪ್ತರಾಗಿರುತ್ತಾರೆ.
ಅಗಲವಾದ ಮೂಗು:
ದಪ್ಪ ಮತ್ತು ಅಗಲವಾದ ಮೂಗನ್ನು ಹೊಂದಿರುವವರು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇವರಿಗೆ ಸಾಮಾಜಿಕ ಕಳಕಳಿ ಇರುತ್ತದೆ ಮತ್ತು ರಾಜಕೀಯದಲ್ಲಿ ಅಥವಾ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ. ಜವಾಬ್ದಾರಿಗಳನ್ನು ತೆಗೆದುಕೊಳ್ಳುವ, ಆಡಳಿತದ ಬಗ್ಗೆ ಗಮನವಿರುವ, ಯಾವಾಗಲೂ ಕಮಾಂಡಿಂಗ್ ಸ್ವಭಾವವನ್ನು ಪ್ರದರ್ಶಿಸುತ್ತಾರೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ಚಿಕ್ಕ ಮತ್ತು ಚಪ್ಪಟೆಯಾದ ಮೂಗು:
ಈ ರೀತಿಯ ಮೂಗನ್ನು ಹೊಂದಿರುವವರು ಸಾಮಾನ್ಯವಾಗಿ ಭಾವಜೀವಿಗಳಾಗಿರುತ್ತಾರೆ. ಬಾಂಧವ್ಯಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಕುಟುಂಬ, ಸ್ನೇಹಿತರು ಮತ್ತು ಗ್ರಾಮದ ಬಗ್ಗೆ ಅತಿಯಾದ ಪ್ರೀತಿ ಹೊಂದಿರುತ್ತಾರೆ. ಅಮೆರಿಕಾದಂತಹ ದೂರದ ದೇಶಗಳಲ್ಲಿ ಅವಕಾಶ ಸಿಕ್ಕಿದರೂ, ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಬಿಟ್ಟು ಹೋಗಲು ಹಿಂಜರಿಯುತ್ತಾರೆ. ಇವರು ಹೆಚ್ಚು ಕೌಶಲ್ಯವಂತರು ಮತ್ತು ಅಪಾರ ಜ್ಞಾನವನ್ನು ಹೊಂದಿರುತ್ತಾರೆ.
ಮೂಗಿನ ಆಕಾರವು ಮಾನವನ ಜೀವನದ ಮೇಲೆ ಗಣನೀಯ ಪ್ರಭಾವ ಬೀರುತ್ತದೆ. ಕರ್ಮಫಲಗಳು ಒಂದು ಕಡೆಯಾದರೆ, ಈ ದೈಹಿಕ ಲಕ್ಷಣಗಳು ನಮ್ಮ ಅದೃಷ್ಟವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮತ್ತು ನಮ್ಮ ಸುತ್ತಮುತ್ತಲಿನವರನ್ನು ಗುರುತಿಸಲು ಸಹಕಾರಿಯಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ