ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ 391 ರನ್ ಪೇರಿಸಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಬೆನ್ ಡೆಕೆಟ್ 36 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಜೋ ರೂಟ್ 46 ರನ್ಗಳ ಕೊಡುಗೆ ನೀಡಿದರೆ, ಹ್ಯಾರಿ ಬ್ರೂಕ್ 24 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಮ್ಯಾಟ್ ಹೆನ್ರಿ ಮಿಂಚಿಂಗ್:
ಜೋ ರೂಟ್ ವಿಕೆಟ್ ಕಬಳಿಸುವ ಮೂಲಕ ವಿಕೆಟ್ ಖಾತೆ ತೆರೆದ ಮ್ಯಾಟ್ ಹೆನ್ರಿ ಕರಾರುವಾಕ್ ದಾಳಿಯೊಂದಿಗೆ ಗಮನ ಸೆಳೆದರು. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳನ್ನು ಕಾಡಿದ ಹೆನ್ರಿ 24 ಓವರ್ಗಳಲ್ಲಿ 80 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 291 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ಹೆನ್ರಿ ನಿಕೋಲ್ಸ್ ಶೈನಿಂಗ್:
ಮೊದಲ ಇನಿಂಗ್ಸ್ನಲ್ಲಿನ 100 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಆರಂಭದಲ್ಲೇ ಟಾಮ್ ಲ್ಯಾಥಮ್ (4) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಡೆವೊನ್ ಕಾನ್ವೆ (11) ಕೂಡ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ ತಾಳ್ಮೆಯುತ ಬ್ಯಾಟಿಂಗ್ನೊಂದಿಗೆ ನ್ಯೂಝಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಲ್ಲದೆ ಕ್ರೀಸ್ ಕಚ್ಚಿ ನಿಂತು ಇಂಗ್ಲೆಂಡ್ ವೇಗಿಗಳನ್ನು ಕಾಡಿದ ನಿಕೋಲ್ಸ್ ಆಕರ್ಷಕ ಫೋರ್ಗಳೊಂದಿಗೆ ಇನಿಂಗ್ಸ್ ಕಟ್ಟಿದರು.
ಅದರಂತೆ ಮೂರನೇ ದಿನದಾಟದ ಅಂತ್ಯದವರೆಗೆ ಬ್ಯಾಟ್ ಬೀಸಿದ ಹೆನ್ರಿ ನಿಕೋಲ್ಸ್ 164 ಎಸೆತಗಳಲ್ಲಿ 16 ಫೋರ್ಗಳೊಂದಿಗೆ ಅಜೇಯ 119 ರನ್ ಬಾರಿಸಿದ್ದಾರೆ. ಹೆನ್ರಿಯ ಈ ಭರ್ಜರಿ ಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿದೆ.
ಕಿವೀಸ್ ಪಡೆಗೆ ಭರ್ಜರಿ ಮುನ್ನಡೆ:
ಮೊದಲ ಇನಿಂಗ್ಸ್ನಲ್ಲಿ 100 ರನ್ಗಳ ಪಡೆದುಕೊಂಡಿದ್ದ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 252 ರನ್ ಕಲೆಹಾಕಿ 352 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ನಾಲ್ಕನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಮುಂದುವರೆಸಿ ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆಯಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಕೊನೆಯ ದಿನದಾಟದಲ್ಲಿ ಕಠಿಣ ಗುರಿ ನೀಡಲು ಪ್ಲ್ಯಾನ್ ರೂಪಿಸಲಿದ್ದಾರೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಎಮಿಲಿಯೊ ಗೇ , ಜೇಕಬ್ ಬೆಥೆಲ್ , ಜೋ ರೂಟ್ (ನಾಯಕ) , ಹ್ಯಾರಿ ಬ್ರೂಕ್ ,
ಜೇಮ್ಸ್ ರೆವ್ (ವಿಕೆಟ್ ಕೀಪರ್) , ಜೋರ್ಡನ್ ಕಾಕ್ಸ್ , ಜೋಫ್ರಾ ಆರ್ಚರ್ , ಜೋಶ್ ಟಂಗ್ , ಮ್ಯಾಥ್ಯೂ ಫಿಶರ್ , ಸೋನಿ ಬೇಕರ್.
ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್ಗೆ ರಿಷಭ್ ರಿಎಂಟ್ರಿ!
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡೆರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ , ವಿಲಿಯಂ ಒರೋಕ್.