Headlines

ತಾಂತ್ರಿಕ ದೋಷ, 30 ನಿಮಿಷಗಳ ಕಾಲ ಮಾಲ್​ನ ಲಿಫ್ಟ್​ನಲ್ಲಿ ಸಿಲುಕಿದ 13 ಮಂದಿ, ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದ ಬಾಲಕಿ – Kannada News | Bareilly Mall Lift Snags: 13 Trapped 30 Mins, Girl Faints Due to Suffocation

ಲಿಫ್ಟ್​ -ಸಾಂದರ್ಭಿಕ ಚಿತ್ರ Image Credit source: India Today

ಬರೇಲಿ, ಜೂನ್ 23: ಉತ್ತರ ಪ್ರದೇಶದ ಬರೇಲಿ ನಗರದ ಪ್ರಸಿದ್ಧ ‘ಸಿಟಿ ಸೆಂಟರ್ ಎಲ್‌ಎ ಮಾಲ್’ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್ ಕೈಕೊಟ್ಟ ಕಾರಣ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 13 ಪ್ರಯಾಣಿಕರು ಮಾಲ್‌ನ ಲಿಫ್ಟ್(Lift) ಒಳಗೆ ಬರೋಬ್ಬರಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು ನರಕಯಾತನೆ ಅನುಭವಿಸಿದ್ದಾರೆ. ಮಾಲ್‌ನ ನಿರ್ಲಕ್ಷ್ಯ ಮತ್ತು ಕಳಪೆ ಭದ್ರತಾ ವ್ಯವಸ್ಥೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾತ್ರಿ 10 ಗಂಟೆ ಸುಮಾರಿಗೆ ಮಾಲ್‌ನಲ್ಲಿ ಸಿನಿಮಾ ನೋಡಿ ವಾಪಸ್ ಬರುತ್ತಿದ್ದ ಪ್ರೇಕ್ಷಕರ ಗುಂಪೊಂದು ಲಿಫ್ಟ್ ಹತ್ತಿತ್ತು. ಲಿಫ್ಟ್ ಚಲಿಸುತ್ತಿರುವಾಗಲೇ ಹಠಾತ್ ವಿದ್ಯುತ್ ಕಡಿತಗೊಂಡಿದ್ದರಿಂದ, ಅದು ಎರಡು ಮಹಡಿಗಳ ಮಧ್ಯದಲ್ಲೇ ಜಾಮ್ ಆಗಿ ನಿಂತುಹೋಯಿತು. ಲಿಫ್ಟ್‌ನ ಕಿರಿದಾದ ಜಾಗದಲ್ಲಿ ಗಾಳಿ ಇಲ್ಲದೆ ತಾಪಮಾನ ಮತ್ತು ತೇವಾಂಶ ಹೆಚ್ಚಾದಾಗ ಜನರು ಗಾಬರಿಗೊಂಡರು. ಲಿಫ್ಟ್ ಒಳಗಿದ್ದ ತುರ್ತು ಸಹಾಯವಾಣಿ ಸಂಖ್ಯೆಗೆ ಪದೇ ಪದೇ ಕರೆ ಮಾಡಿದರೂ ಮಾಲ್ ಸಿಬ್ಬಂದಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಉಸಿರುಗಟ್ಟುವಿಕೆ ಮತ್ತು ಅತಿಯಾದ ಆತಂಕದಿಂದಾಗಿ 17 ವರ್ಷದ ಶಾಲಿನಿ ಎಂಬ ಬಾಲಕಿ ಲಿಫ್ಟ್ ಒಳಗೇ ಪ್ರಜ್ಞೆ ಕಳೆದುಕೊಂಡಳು. ಇದರಿಂದ ಒಳಗಿದ್ದ ಉಳಿದ ಪ್ರಯಾಣಿಕರು ಮತ್ತಷ್ಟು ಪ್ರಾಣಭಯಕ್ಕೆ ಒಳಗಾದರು.

ಮತ್ತಷ್ಟು ಓದಿ: ಅಪಾರ್ಟ್​​ಮೆಂಟ್​ನ ಲಿಫ್ಟ್​​ ಒಳಗೆ ಸಿಲುಕಿ 5 ವರ್ಷದ ಬಾಲಕ ಸಾವು

ಒಳಗೆ ಉಸಿರಾಡಲು ಕಷ್ಟವಾದಾಗ ಸಿಕ್ಕಿಬಿದ್ದ ಜನರು ಬದುಕುಳಿಯಲು ಲಿಫ್ಟ್ ಬಾಗಿಲನ್ನು ಬಲವಂತವಾಗಿ ಒದೆಯಲು ಮತ್ತು ತೆರೆಯಲು ಪ್ರಯತ್ನಿಸಿದರು. ಇದನ್ನು ಗಮನಿಸಿದ ಹೊರಗಿದ್ದ ಜನರು ಮತ್ತು ಮಾಲ್ ಸಿಬ್ಬಂದಿ ತಕ್ಷಣ ಧಾವಿಸಿ ಅರ್ಧ ಗಂಟೆಯ ಸತತ ಪ್ರಯತ್ನದ ನಂತರ ಬಾಗಿಲು ತೆರೆದು ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತಂದರು. ಪ್ರಜ್ಞೆ ತಪ್ಪಿದ್ದ ಬಾಲಕಿಯನ್ನು ಹೊರತರುತ್ತಿದ್ದಂತೆ ಆಕೆಯ ಸ್ಥಿತಿ ಸಹಜ ಸ್ಥಿತಿಗೆ ಮರಳಿತು.

ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿರುವ ಬರೇಲಿ ಎಸ್‌ಪಿ ಸಿಟಿ ಮಾನುಷ್ ಪರೀಕ್ ಮತ್ತು ವೃತ್ತ ಅಧಿಕಾರಿ ಅಶುತೋಷ್ ಶಿವಂ ಅವರು ಪ್ರಕರಣದ ತಾಂತ್ರಿಕ ವಿವರಗಳನ್ನು ಹಂಚಿಕೊಂಡಿದ್ದಾರೆ. ವಿದ್ಯುತ್ ಕಡಿತಗೊಂಡಾಗ ಮಾಲ್ ಆಡಳಿತ ಮಂಡಳಿ ಜನರೇಟರ್ ಬ್ಯಾಕ್-ಅಪ್ ಆನ್ ಮಾಡುತ್ತಿತ್ತು. ಆದರೆ ಅದೇ ಸಮಯದಲ್ಲಿ ಒಳಗಿದ್ದ ಪ್ರಯಾಣಿಕರು ಗಾಬರಿಯಿಂದ ಲಿಫ್ಟ್ ಬಾಗಿಲನ್ನು ಜೋರಾಗಿ ಒದ್ದಿದ್ದಾರೆ.
ಇದರಿಂದಾಗಿ ಲಿಫ್ಟ್‌ನ ಸೆನ್ಸರ್ (Sensor) ವ್ಯವಸ್ಥೆಯು ಸಂಪೂರ್ಣವಾಗಿ ಲಾಕ್ ಆಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸಂತ್ರಸ್ತ ಕುಟುಂಬಸ್ಥರಿಂದ ಅಧಿಕೃತ ದೂರು ದಾಖಲಾದ ಬಳಿಕ ಮಾಲ್ ಆಡಳಿತ ಮಂಡಳಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *