ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದು ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿನಿಮಾ ನೋಡಿದವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಗ್ರಾಮೀಣ ಭಾಗದ ಕ್ರೀಡಾಪಟುವಿನ ಕತೆ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಈ ಗೆಲುವಿನ ಖುಷಿ ಹಂಚಿಕೊಳ್ಳಲು ನಿನ್ನೆಯಷ್ಟೆ ಸಿನಿಮಾದ ಸಕ್ಸಸ್ ಇವೆಂಟ್ ಅನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ವೇಳೆ ನಟ ರಾಮ್ ಚರಣ್, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಪುತ್ರಿ ಕ್ಲಿನ್ ಕಾರಾ ಬಗ್ಗೆ ಮಾತನಾಡಿದ್ದಾರೆ.
‘ಪೆದ್ದಿ’ ಸಿನಿಮಾದ ಗೆಲುವು ಬಹಳ ವಿಭಿನ್ನ ಅನುಭವವನ್ನು ತಮಗೆ ನೀಡಿದೆ ಎಂದ ರಾಮ್ ಚರಣ್, ‘ಈ ಸಿನಿಮಾಕ್ಕೆ ಬರುತ್ತಿರುವ ಪ್ರತಿಕ್ರಿಯೆ, ವಿಮರ್ಶೆಗಳು ಬಹಳ ಭಿನ್ನವಾಗಿವೆ. ಈ ರೀತಿಯ ವಿಮರ್ಶೆಗಳು, ಪ್ರತಿಕ್ರಿಯೆಗಳನ್ನು ನಾನು ಹಿಂದೆಂದೂ ನೋಡಿಲ್ಲ, ಕೇಳಿಲ್ಲ. ಜನ ಎಲ್ಲಿ ನನ್ನನ್ನು (ರಾಮ್ ಚರಣ್) ಮರೆತು ‘ಪೆದ್ದಿ’ಯನ್ನು ಮಾತ್ರವೇ ನೆನಪಿಟ್ಟುಕೊಳ್ಳುತ್ತಾರೋ ಎಂಬ ಭಯ ನನಗೆ ಮೂಡಿದೆ’ ಎಂದಿದ್ದಾರೆ ರಾಮ್ ಚರಣ್.
ಇದನ್ನೂ ಓದಿ:ದಕ್ಷಿಣ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ ತಮನ್ನಾ ಭಾಟಿಯಾ?
ತಮ್ಮ ಮನೆಯದ್ದೇ ಉದಾಹರಣೆ ನೀಡಿದ ರಾಮ್ ಚರಣ್, ‘ನನ್ನ ಪುತ್ರಿ ಕ್ಲಿನ್ ಕಾರಾ, ಈಗ ಮಾತನಾಡಲು ಆರಂಭಿಸಿದ್ದು, ಕ್ಲಿನ್ ಕಾರಾ ನನ್ನನ್ನು ಅಪ್ಪ ಎಂದು ಕರೆಯುತ್ತಿದ್ದಳು ಆದರೆ ಈಗ ‘ಪೆದ್ದಿ’ ಸಿನಿಮಾ ಬಿಡುಗಡೆ ಆದ ಮೇಲೆ ನನ್ನನ್ನು ‘ಪೆದ್ದಿ’ ಎಂದೇ ಕರೆಯುತ್ತಿದ್ದಾಳೆ. ಹಾಗೆಲ್ಲ ತಂದೆಯನ್ನು ಕರೆಯಬಾರದು ಎಂದು ಹೇಳಿಕೊಟ್ಟ ಬಳಿಕ ಈಗ ‘ಪೆದ್ದಿ ನಾನ್ನ’ (ಪೆದ್ದಿ ಅಪ್ಪ) ಎಂದು ಕರೆಯುತ್ತಿದ್ದಾಳೆ’ ಎಂದಿದ್ದಾರೆ ನಟ ರಾಮ್ ಚರಣ್.
‘ಪೆದ್ದಿ’ ಸಿನಿಮಾವು ಛಲ ಬಿಡದ ಗ್ರಾಮೀಣ ಭಾಗದ ಕ್ರೀಡಾಪಟುವಿನ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಾಮ್ ಚರಣ್ ಕ್ರಿಕೆಟರ್ ಆಗಿ ಬಳಿಕ ಕುಸ್ತಿ ಪಟುವಾಗಿ ಗಮನ ಸೆಳೆದಿದ್ದಾರೆ. ಅದ್ಭುತ ಸ್ಪೋರ್ಟ್ಸ್ ಆಕ್ಷನ್ ಜೊತೆಗೆ ಕೆಲವು ಭಾವುಕ ಸನ್ನಿವೇಶಗಳನ್ನು ಸಹ ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರು ಕುಸ್ತಿ ಕಲಿಸುವ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ