ಡಾ. ಮೋನಿಷಾ
ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕಾರಣದಿಂದಾಗಿ ದೇಹ ತೂಕ ವೇಗವಾಗಿ ಹೆಚ್ಚಾಗುತ್ತದೆ. ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದರಿಂದ ಅಧಿಕ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವ (weight loss), ಆರೋಗ್ಯಕರ ದೇಹ ತೂಕವನ್ನು ಕಾಪಾಡಿಕೊಳ್ಳುವ ಸಲುವಾಗಿ ಕೆಲವರು ಮಲ್ಟಿಗ್ರೈನ್ ಅಂದರೆ ಬಹುಧಾನ್ಯ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡಿದರೆ ಕೆಲವರು ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವನೆ ಮಾಡುತ್ತಿದ್ದಾರೆ. ಇವೆರಡು ತಮ್ಮದೇ ಆದ ಪ್ರಯೋಜನಗಳನ್ನು ಹೊಂದಿದ್ದರೂ, ಇವೆರಡರಲ್ಲಿ ಯಾವುದರ ಸೇವನೆಯು ತೂಕ ಇಳಿಕೆಗೆ ಹೆಚ್ಚು ಪ್ರಯೋಜನಕಾರಿ ಎಂಬುದು ಅನೇಕರಿಗೆ ಗೊತ್ತಿಲ್ಲ. ತಜ್ಞರ ಪ್ರಕಾರ ತೂಕ ಇಳಿಕೆಗೆ ಯಾವ ಹಿಟ್ಟು ಬೆಸ್ಟ್ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳೋಣ.
ಬಹುಧಾನ್ಯ ಹಿಟ್ಟು, ಗೋಧಿ ಹಿಟ್ಟು: ತೂಕ ಇಳಿಕೆಗೆ ಯಾವುದು ಬೆಸ್ಟ್?
ಉಡುಪಿಯ ಎಸ್.ಡಿ.ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ. ಮೋನಿಷಾ ಅವರ ಪ್ರಕಾರ ತೂಕ ಇಳಿಸುವ ಪ್ರಯಾಣದಲ್ಲಿ ಮಲ್ಟಿಗ್ರೈನ್ ಹಿಟ್ಟು ಸಾಮಾನ್ಯ ಗೋಧಿ ಹಿಟ್ಟಿಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಗೋಧಿ ಹಿಟ್ಟು ಹೆಚ್ಚು ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೋರಿಗಳನ್ನು ಹೊಂದಿರುವುದರಿಂದ ತೂಕ ಇಳಿಕೆಗೆ ಇದು ಅಡೆತಡೆಯಾಗಬಹುದು.
ತೂಕ ಇಳಿಕೆಗೆ ಮಲ್ಟಿಗ್ರೈನ್ ಹಿಟ್ಟು ಹೇಗೆ ಸಹಾಯಕ?
ಮಲ್ಟಿಗ್ರೈನ್ ಹಿಟ್ಟಿನ ಗುಣಮಟ್ಟವು ಅದರಲ್ಲಿ ಬಳಸಿರುವ ಪದಾರ್ಥಗಳ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಮಲ್ಟಿಗ್ರೈನ್ ಮಿಶ್ರಣದಲ್ಲಿ ಜವೆಗೋಧಿ, ಓಟ್ಸ್, ಜೋಳ, ಗೋಧಿ ಹೊಟ್ಟು, ಮಸೂರ ಬೇಳೆ, ಅಗಸೆ ಬೀಜ, ಮೆಂತ್ಯೆ ಬೀಜ ಹಾಗೂ ವಿವಿಧ ಕಾಳುಗಳು ಸೇರಿರುತ್ತವೆ. ಈ ಸಂಯೋಜನೆಯಿಂದ ಕೇವಲ ಕಾರ್ಬೋಹೈಡ್ರೇಟ್ಗಳಷ್ಟೇ ಅಲ್ಲದೆ, ವಿಶಾಲವಾದ ಪೌಷ್ಟಿಕಾಂಶಗಳೂ ದೊರೆಯುತ್ತವೆ.
ಹೆಚ್ಚಿನ ನಾರಿನಂಶ: ಮಲ್ಟಿಗ್ರೈನ್ ಹಿಟ್ಟಿನಲ್ಲಿ ಓಟ್ಸ್, ಬಾರ್ಲಿ ಮತ್ತು ಸಿರಿಧಾನ್ಯಗಳಿರುವುದರಿಂದ ಇದರಲ್ಲಿ ನಾರಿನಂಶ ಸಮೃದ್ಧವಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ನೀಡಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಹೆಚ್ಚಿನ ಪ್ರೋಟೀನ್: ಸೋಯಾ ಮತ್ತು ಕಡ್ಲೆಬೇಳೆಯಂತಹ ದ್ವಿದಳ ಧಾನ್ಯಗಳಿಂದ ಕೂಡಿರುವ ಮಲ್ಟಿಗ್ರೈನ್ ಹಿಟ್ಟಿನಲ್ಲಿ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಇದು ತೂಕ ಇಳಿಸುವಾಗ ಸ್ನಾಯುಗಳ ಸಾಂದ್ರತೆಯನ್ನು ಕಾಪಾಡಲು ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI): ಮಲ್ಟಿಗ್ರೈನ್ ಹಿಟ್ಟಿನ GI ಮಟ್ಟವು ಸಾಮಾನ್ಯ ಗೋಧಿ ಹಿಟ್ಟಿಗಿಂತ ಕಡಿಮೆಯಿರುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಧಾನವಾಗಿ ಬಿಡುಗಡೆ ಮಾಡುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚುವರಿ ಪೋಷಕಾಂಶಗಳು: ಮಲ್ಟಿಗ್ರೈನ್ ಹಿಟ್ಟಿನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ಗಳು, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಅಗತ್ಯ ಖನಿಜಗಳು ಸಮೃದ್ಧವಾಗಿವೆ.
ಇದನ್ನೂ ಓದಿ: ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ? ಅದರ ಪ್ರಯೋಜನಗಳೇನು?
ನಿಮ್ಮ ಆಹಾರಕ್ಕೆ ಸರಿಯಾದ ಹಿಟ್ಟನ್ನು ಹೇಗೆ ಆಯ್ಕೆ ಮಾಡಬೇಕು?
ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಮಲ್ಟಿಗ್ರೈನ್ ಹಿಟ್ಟುಗಳು ಆರೋಗ್ಯಕರವಾಗಿರುವುದಿಲ್ಲ. ಕೆಲವು ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿತ ಹಿಟ್ಟು ಇರಬಹುದು. ಆದ್ದರಿಂದ:
- ಹಿಟ್ಟಿನ ಪದಾರ್ಥಗಳ ಪಟ್ಟಿಯನ್ನು ಮೊದಲು ಪರಿಶೀಲಿಸಬೇಕು.
- ಹಿಟ್ಟಿನಲ್ಲಿ ಸಂಪೂರ್ಣ ಧಾನ್ಯಗಳಿರುವುದನ್ನು ಖಚಿತಪಡಿಸಿಕೊಳ್ಳಿ.
- ಹೆಚ್ಚಿನ ನಾರುಪದಾರ್ಥ ಹೊಂದಿರುವ ಹಿಟ್ಟನ್ನು ಆಯ್ಕೆಮಾಡಿ.
- ಸೋಯಾ, ಕಡ್ಲೆಬೇಳೆ, ಅಗಸೆ ಬೀಜದಂತಹ ಬೀಜಗಳು ಮತ್ತು ಕಾಳುಗಳನ್ನು ಸೇರಿಸಿರುವ ಮಲ್ಟಿಗ್ರೈನ್ ಹಿಟ್ಟಿನ ಮಿಶ್ರಣ ಉತ್ತಮ.
ತೂಕ ನಿಯಂತ್ರಣ ಮಾಡಲು ಉತ್ತಮ ಗುಣಮಟ್ಟದ ಮಲ್ಟಿಗ್ರೈನ್ ಹಿಟ್ಟು ಸಾಮಾನ್ಯ ಗೋಧಿ ಹಿಟ್ಟಿಗಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹೆಚ್ಚಿನ ನಾರು, ಪ್ರೋಟೀನ್ ಹಾಗೂ ವಿವಿಧ ಪೌಷ್ಟಿಕಾಂಶಗಳಿರುವುದರಿಂದ ಹಸಿವು ನಿಯಂತ್ರಣ, ರಕ್ತದಲ್ಲಿನ ರಕ್ತದ ಸಕ್ಕರೆ ನಿಯಂತ್ರಣ ಮತ್ತು ತೂಕ ಇಳಿಕೆಗೆ ಸಹಕಾರಿಯಾಗುತ್ತದೆ. ಅತಿಯಾದ ತೂಕವು ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ದೈನಂದಿನ ಚಟುವಟಿಕೆಗಳು ಇದರಿಂದ ಏರುಪೇರಾಗಬಹುದು ತೂಕ ಇಳಿಕೆಗೆ ಹಿಟ್ಟಿನ ಆಯ್ಕೆಯ ಜೊತೆಗೆ ಸಮತೋಲಿತ, ಆರೋಗ್ಯಕರ ಆಹಾರ ಮತ್ತು ವಾಕಿಂಗ್ ಯೋಗದಂತಹ ದೈನಂದಿನ ಚಟುವಟಿಕೆಗಳು ಹಾಗೂ ನಿಯಮಿತ ವ್ಯಾಯಾಮವೂ ಅತ್ಯಗತ್ಯ ವಾಗಿದೆ.
ಆಯುರ್ವೇದ ಶಾಸ್ತ್ರದಲ್ಲಿ ಸ್ಥೌಲ್ಯ (ಬೊಜ್ಜು) ಮತ್ತು ಸಕ್ಕರೆ ಕಾಯಿಲೆ ಚಿಕಿತ್ಸೆಯಲ್ಲಿ ಮಲ್ಟಿಗ್ರೈನ್ ಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಇದರ ಅತಿಯಾದ ಸೇವನೆ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಹಾಗಾಗಿ ರೋಗಿಯ ಸ್ಥಿತಿಯ ಆಧಾರದ ಮೇಲೆ ವೈದ್ಯರ ಸಲಹೆಯ ಅನುಸಾರವಾಗಿ ತೂಕ ಇಳಿಕೆಯ ಪ್ರಯಾಣದಲ್ಲಿ ಮಲ್ಟಿಗ್ರೈನ್ ಹಿಟ್ಟಿನ್ನು ಬಳಕೆ ಮಾಡಿದರೆ ಉತ್ತಮ ಎನ್ನುತ್ತಾರೆ ಡಾ. ಮೋನಿಷಾ.
ಒಟ್ಟಾರೆಯಾಗಿ ತೂಕ ಇಳಿಕೆಗೆ ಗೋಧಿ ಹಿಟ್ಟು ಮತ್ತು ಬಹುಧಾನ್ಯ ಹಿಟ್ಟು ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡುವುದು ಮಾತ್ರವಲ್ಲ, ನೀವು ಎಷ್ಟು ತಿನ್ನುತ್ತೀರಿ, ನಿಮ್ಮ ಆಹಾರ ಎಷ್ಟು ಆರೋಗ್ಯಕ ಸಮತೋಲಿತವಾಗಿದೆ ಮತ್ತು ನೀವು ಎಷ್ಟು ದೈಹಿಕ ಚಟುವಟಿಕೆ ಮಾಡಿ ಸಕ್ರಿಯರಾಗಿದ್ದೀರಿ ಎಂಬುದು ಸೇರಿದಂತೆ ಆರೋಗ್ಯಕ ಜೀವನಶೈಲಿಯ ಪಾಲನೆ ಕೂಡ ಮುಖ್ಯವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:47 pm, Wed, 24 June 26