ನವದೆಹಲಿ, ಜೂನ್ 24: ಭಾರತೀಯ ವಾಯುಪಡೆಯ (IAF) ಬಳಿ ಇರುವ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳು ಸುರಕ್ಷಿತವಾಗಿದ್ದು, ಸಕ್ರಿಯ ಸೇವೆಯಲ್ಲಿವೆ ಎಂಬುದನ್ನು ಅಧಿಕೃತ ದಾಖಲೆಯೊಂದು ಖಚಿತಪಡಿಸಿದೆ. ಇದರ ಬೆನ್ನಲ್ಲೇ, ರಫೇಲ್ ವಿಮಾನಗಳ ಕುರಿತು ಪಾಕಿಸ್ತಾನ ಹರಡಿದ್ದ ಸುಳ್ಳು ಸುದ್ದಿ ಬಯಲಾಗಿದ್ದು, ಈ ಹಿಂದೆ ಪಾಕ್ ಪ್ರಚಾರಕ್ಕೆ ಬೆಂಬಲ ನೀಡುವಂತೆ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ದೇಶದ ಭದ್ರತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳ ವಿರುದ್ಧ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಾಗ್ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಮಹತ್ವದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳು ಮತ್ತು ನಿಲುವುಗಳು, ಪಾಕಿಸ್ತಾನದ ಭಾರತ ವಿರೋಧಿ ಸುಳ್ಳು ಪ್ರಚಾರವನ್ನು ಹೋಲುವಂತಿದ್ದವು ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಇದನ್ನೂ ಓದಿ: ಆತ್ಮನಿರ್ಭರ ಭಾರತವನ್ನು ಲೇವಡಿ ಮಾಡಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರ ರಾಷ್ಟ್ರೀಯ ಭದ್ರತೆಯ ಕುರಿತಾದ ತಿಳುವಳಿಕೆಯನ್ನು ಪ್ರಶ್ನಿಸಿದ್ದಾರೆ. ಭಾರತೀಯ ವಾಯುಪಡೆಯ ಅಧಿಕೃತ ಟೆಂಡರ್ ಪ್ರಕ್ರಿಯೆಯನ್ನು ಉಲ್ಲೇಖಿಸಿರುವ ಬಿಜೆಪಿ, ದೇಶವು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ರಾಹುಲ್ ಗಾಂಧಿ ಅವರು ಪಾಕಿಸ್ತಾನದ ಪ್ರೊಪಗಾಂಡಾವನ್ನು (Propaganda) ಬೆಂಬಲಿಸುವ ಹೇಳಿಕೆ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದೆ.
During Operation Sindoor, when India was confronting a grave national security challenge, Rahul Gandhi chose to amplify questions and narratives that mirrored Pakistan’s propaganda about Indian Rafale fighter jets.
Pakistan claimed that Rafales had been shot down. Its…
— Amit Malviya (@amitmalviya) June 24, 2026
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಹುಲ್ ಗಾಂಧಿ ಅವರ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ. “ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ಭಾರತವು ರಾಷ್ಟ್ರೀಯ ಭದ್ರತೆಯ ಗಂಭೀರ ಸವಾಲನ್ನು ಎದುರಿಸುತ್ತಿತ್ತು. ಆ ಸೂಕ್ಷ್ಮ ಸಂದರ್ಭದಲ್ಲಿ, ಭಾರತದ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಲಾಗಿದೆ ಎಂಬ ಪಾಕಿಸ್ತಾನದ ಸುಳ್ಳು ಪ್ರಚಾರವನ್ನು ಪ್ರತಿಬಿಂಬಿಸುವಂತಹ ಪ್ರಶ್ನೆಗಳನ್ನು ಮತ್ತು ನಿರೂಪಣೆಗಳನ್ನು ಬಿತ್ತರಿಸಲು ರಾಹುಲ್ ಗಾಂಧಿ ಮುಂದಾಗಿದ್ದರು” ಎಂದು ಅಮಿತ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಮೋದಿಯನ್ನು ಬೆಂಬಲಿಸುವ ಮೂಲಕ ರಾಹುಲ್ ಗಾಂಧಿಗೆ ಶಶಿ ತರೂರ್ ಜನ್ಮದಿನದ ಗಿಫ್ಟ್ ನೀಡಿದ್ದಾರೆ; ಬಿಜೆಪಿ ಲೇವಡಿ
ಭಾರತ ಸರ್ಕಾರವನ್ನೇ ಪ್ರಶ್ನಿಸಿದ ವಿಪಕ್ಷ ನಾಯಕ:
ಪಾಕಿಸ್ತಾನದ ಸುಳ್ಳು ಆರೋಪಗಳ ಬಗ್ಗೆ ಇಸ್ಲಾಮಾಬಾದ್ನಿಂದ ಪುರಾವೆಗಳನ್ನು ಕೇಳುವ ಬದಲಿಗೆ, ರಾಹುಲ್ ಗಾಂಧಿ ಅವರು ಭಾರತ ಸರ್ಕಾರವನ್ನೇ ಪ್ರಶ್ನಿಸುವ ಮೂಲಕ ಶತ್ರು ರಾಷ್ಟ್ರದ ವಾದಕ್ಕೆ ಜಾಗತಿಕ ಮಟ್ಟದಲ್ಲಿ ಪುಷ್ಟಿ ಸಿಗುವಂತೆ ಮಾಡಲು ಯತ್ನಿಸಿದ್ದರು ಎಂದು ಅವರು ದೂರಿದ್ದಾರೆ.
ಪಾಕ್ ಸುಳ್ಳು ಜಗತ್ತಿಗೆ ಬಹಿರಂಗ:
ಭಾರತೀಯ ವಾಯುಪಡೆಯು ತನ್ನ ಎಲ್ಲಾ 36 ರಫೇಲ್ ಯುದ್ಧ ವಿಮಾನಗಳಿಗೆ ಬೆಂಬಲ ಪ್ಯಾಕೇಜ್ ಕೋರಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಧಿಕೃತ ಟೆಂಡರ್, ಪಾಕಿಸ್ತಾನದ ನಿರೂಪಣೆಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
“ಯಾವಾಗಲೆಲ್ಲಾ ನಮ್ಮ ವೀರ ಯೋಧರು ಗಡಿಯಲ್ಲಿ ಅಥವಾ ದೇಶದ ಭದ್ರತೆಗಾಗಿ ದೊಡ್ಡ ಕಾರ್ಯಾಚರಣೆಗಳನ್ನು ನಡೆಸುತ್ತಾರೋ, ಆಗೆಲ್ಲಾ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಪುರಾವೆಗಳನ್ನು ಕೇಳುವುದು ಅಥವಾ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಅನುಮಾನಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇದು ನಮ್ಮ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ರಾಜಕೀಯ ತಂತ್ರವಾಗಿದೆ” ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಕಟುವಾಗಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ