ಸರ್ಕಾರಿ ಶಾಲೆ ಪ್ರವೇಶ ದ್ವಾರದ ಮುಂದೆಯೇ ಕಸದ ರಾಶಿImage Credit source: tv9
ಬೆಂಗಳೂರು, ಜೂನ್ 25: ‘‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’’ ಎನ್ನುವ ಶ್ರೇಷ್ಠ ನುಡಿಯಿದೆ. ಆದರೆ, ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಳೆಪೇಟೆಯಲ್ಲಿರುವ ಚಿಕ್ಕ ಲಾಲ್‌ಬಾಗ್ ಸರ್ಕಾರಿ ಶಾಲೆಯ ಸ್ಥಿತಿಯನ್ನು ನೋಡಿದರೆ, ‘‘ಬಾಯಿ, ಮೂಗು ಮುಚ್ಚಿಕೊಂಡು ಒಳಗೆ ಬಾ’’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಮುಖ್ಯ ಪ್ರವೇಶ ದ್ವಾರದ ಮುಂಭಾಗದಲ್ಲೇ ರಾಶಿ ರಾಶಿ ಕಸವನ್ನು ತಂದು ಸುರಿಯಲಾಗುತ್ತಿದ್ದು, ಇಡೀ ಆವರಣವು ಕಸದ ತಾಣವಾಗಿ ಮಾರ್ಪಟ್ಟಿದೆ. ಸ್ಥಳೀಯ ಜಿಬಿಎ (GBA) ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದ ಶಾಲೆಯ ಪರಿಸರ ಸಂಪೂರ್ಣವಾಗಿ ನರಕಸದೃಶವಾಗಿದೆ.
ಪೇ ಅಂಡ್ ಯೂಸ್ ಶೌಚಾಲಯವಿದ್ದರೂ ಗೇಟೇ ಮೂತ್ರಾಲಯ!
ಬೆಳಗ್ಗೆಯಿಂದ ಸಂಜೆಯವರೆಗೆ ನೂರಾರು ಸಣ್ಣ ಸಣ್ಣ ವಿದ್ಯಾರ್ಥಿಗಳು ಅಕ್ಷರ ಕಲಿಯುವ ಈ ಶಾಲೆಯ ಮುಖ್ಯ ಗೇಟ್ ಮುಂಭಾಗದಲ್ಲೇ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಶಾಲೆಯ ಗೇಟ್ ಪಕ್ಕದಲ್ಲೇ ಸಾರ್ವಜನಿಕ ‘ಪೇ ಅಂಡ್ ಯೂಸ್’ ಶೌಚಾಲಯವಿದೆ. ಆದರೆ, ಅಲ್ಲಿ ಹಣ ಕೊಡಬೇಕು ಎನ್ನುವ ಕಾರಣಕ್ಕಾಗಿ ಕೆಲ ಕಿಡಿಗೇಡಿಗಳು ನೇರವಾಗಿ ಶಾಲೆಯ ಆವರಣದ ಗೋಡೆ ಹಾಗೂ ಗೇಟ್ ಮುಂಭಾಗವನ್ನೇ ಮೂತ್ರಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇಡೀ ಶಾಲಾ ಆವರಣದ ಸುತ್ತಮುತ್ತ ತೀವ್ರ ದುರ್ವಾಸನೆ ಹರಡಿದ್ದು, ಸೊಳ್ಳೆ ಹಾಗೂ ನೊಣಗಳ ಕಾಟ ಮಿತಿಮೀರಿದೆ.
ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಲ್ಲಿ ಹೆಚ್ಚಿದ ಭೀತಿ
ಇಂತಹ ಕೊಳಕು ಪರಿಸರದಲ್ಲಿ ನಿತ್ಯ ಮಕ್ಕಳು ಪಾಠ ಕೇಳಬೇಕಾಗಿ ಬಂದಿರುವುದು ಹೆತ್ತವರ ಮತ್ತು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಗಂಭೀರ ಸಮಸ್ಯೆಯ ಕುರಿತು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯ ನಿವಾಸಿಗಳು ಹಲವು ಬಾರಿ ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ, ಕಸ ತೆರವುಗೊಳಿಸಲು ಹಾಗೂ ಸಾರ್ವಜನಿಕ ಮೂತ್ರ ವಿಸರ್ಜನೆಗೆ ತಡೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಮನವಿಗೆ ಸ್ಪಂದಿಸದ ಜಿಬಿಎ
ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ದೂರು ನೀಡಿದರೂ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಯೂ ಮಲಗಿಲ್ಲ ಎನ್ನುವುದು ಇಲ್ಲಿನ ನಿವಾಸಿಗಳ ಗಂಭೀರ ಆರೋಪವಾಗಿದೆ. ಇನ್ನಾದರೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ