Headlines

ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ – Kannada News | Amazon CEO Andy Jassi meets PM Modi, eCommerce giant announces big investments in India

ನವದೆಹಲಿ, ಜೂನ್ 25: ಜಾಗತಿಕ ಇ-ಕಾಮರ್ಸ್ ಮತ್ತು ತಂತ್ರಜ್ಞಾನ ದೈತ್ಯ ಕಂಪನಿ ‘ಅಮೆಜಾನ್’ (Amazon) ಭಾರತದಲ್ಲಿ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೂಡಿಕೆಯ ಯೋಜನೆಗಳನ್ನು ಪ್ರಕಟಿಸಿದೆ. ಅಮೆಜಾನ್ ಜಾಗತಿಕ ಸಿಇಒ ಆಂಡಿ ಜಸ್ಸಿ (Andy Jassy) ಅವರು ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಭಾರತದ ಆರ್ಥಿಕ ಮತ್ತು ಡಿಜಿಟಲ್ ಬೆಳವಣಿಗೆಗೆ ದೀರ್ಘಾವಧಿಯ ಬದ್ಧತೆಯನ್ನು ಪುನರುಚ್ಚರಿಸಿದ ಆಂಡಿ ಜಸ್ಸಿ, 2026 ರಿಂದ 2030 ರ ಅವಧಿಯಲ್ಲಿ ಭಾರತದಲ್ಲಿ ಬರೋಬ್ಬರಿ $48 ಬಿಲಿಯನ್ (ಅಂದಾಜು ₹4.5 ಲಕ್ಷ ಕೋಟಿ) ಹೂಡಿಕೆ ಮಾಡುವ ಬೃಹತ್ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಎಐ ಮತ್ತು ಕ್ಲೌಡ್ ತಂತ್ರಜ್ಞಾನಕ್ಕೆ $13 ಬಿಲಿಯನ್ ಹೆಚ್ಚುವರಿ ಹೂಡಿಕೆ

ಕೇವಲ ಆರು ತಿಂಗಳ ಹಿಂದೆಯಷ್ಟೇ ಅಮೆಜಾನ್ ಭಾರತದಲ್ಲಿ $35 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿತ್ತು. ಈಗ ಅದಕ್ಕೆ ಹೆಚ್ಚುವರಿಯಾಗಿ $13 ಬಿಲಿಯನ್ ಘೋಷಿಸಿದೆ. ಇದರೊಂದಿಗೆ, 2030ರ ವೇಳೆಗೆ ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಮೂಲಸೌಕರ್ಯಕ್ಕಾಗಿ ಅಮೆಜಾನ್ ಮಾಡುತ್ತಿರುವ ಒಟ್ಟು ಹೂಡಿಕೆ $21 ಬಿಲಿಯನ್ ದಾಟಲಿದೆ.

2010 ರಿಂದ 2030 ರವರೆಗಿನ ಎರಡು ದಶಕಗಳ ಅವಧಿಯಲ್ಲಿ ಭಾರತದಲ್ಲಿ ಅಮೆಜಾನ್‌ನ ಒಟ್ಟು ಹೂಡಿಕೆ (Cumulative Investment) $88 ಬಿಲಿಯನ್ ದಾಟಲಿದೆ. ಇದರೊಂದಿಗೆ ಭಾರತದಲ್ಲಿ ಅತ್ಯಂತ ದೊಡ್ಡ ವಿದೇಶಿ ಹೂಡಿಕೆದಾರ ಸಂಸ್ಥೆಯಾಗಿ ಅಮೆಜಾನ್ ಹೊರಹೊಮ್ಮಿದೆ.

ಲಕ್ಷಾಂತರ ಉದ್ಯೋಗಾವಕಾಶ ಮತ್ತು ರಫ್ತು ಗುರಿ

ಭಾರತ ಸರ್ಕಾರದ ಆದ್ಯತೆಗಳಿಗೆ ಅನುಗುಣವಾಗಿ, 2030 ರ ವೇಳೆಗೆ ದೇಶದಲ್ಲಿ 38 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ಬೆಂಬಲ ನೀಡಲು ಹಾಗೂ ಇ-ಕಾಮರ್ಸ್ ಮೂಲಕ ಒಟ್ಟು $80 ಬಿಲಿಯನ್ ಮೌಲ್ಯದ ರಫ್ತು (Exports) ಪ್ರಕ್ರಿಯೆಗೆ ವೇಗ ನೀಡಲು ಅಮೆಜಾನ್ ಸಂಕಲ್ಪ ಮಾಡಿದೆ.

ಸಣ್ಣ ವ್ಯಾಪಾರಿಗಳು ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ AI ತರಬೇತಿ

ಭಾರತದ 1.5 ಕೋಟಿ (15 ಮಿಲಿಯನ್) ಸಣ್ಣ ಉದ್ಯಮಗಳಿಗೆ ಎಐ ತಂತ್ರಜ್ಞಾನದ ಲಾಭವನ್ನು ತಲುಪಿಸಲು ಮತ್ತು 40 ಲಕ್ಷ (4 ಮಿಲಿಯನ್) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಐ (AI) ಶಿಕ್ಷಣವನ್ನು ಒದಗಿಸಲು ಅಮೆಜಾನ್ ನಿರ್ಧರಿಸಿದೆ.

ಇದನ್ನೂ ಓದಿ: ವಾಹನ ಕ್ಷೇತ್ರದಲ್ಲಿ ಚೀನಾವನ್ನು ಭಾರತ ಹೇಗೆ ಹಿಂದಿಕ್ಕಬಹುದು? ಸೀಕ್ರೆಟ್ ತಿಳಿಸಿದ ಟಾಟಾ ಮೋಟರ್ಸ್​ನ ಶ್ವೆನ್ ಪಟುಶ್ಕಾ

ಕ್ವಿಕ್ ಕಾಮರ್ಸ್ ಮತ್ತು ಡೆಲಿವರಿ ಜಾಲದ ವಿಸ್ತರಣೆ

ತನ್ನ ಇ-ಕಾಮರ್ಸ್ ಮತ್ತು ಇತ್ತೀಚಿನ ‘ಕ್ವಿಕ್ ಕಾಮರ್ಸ್’ (Quick Commerce) ವ್ಯವಸ್ಥೆಯನ್ನು ಬಲಪಡಿಸಲು ಈ ವರ್ಷ ಭಾರತದಾದ್ಯಂತ 20ಕ್ಕೂ ಹೆಚ್ಚು ಹೊಸ ಫುಲ್‌ಫಿಲ್‌ಮೆಂಟ್ ಸೆಂಟರ್‌ಗಳು (ದಾಸ್ತಾನು ಮಳಿಗೆಗಳು) ಮತ್ತು 100ಕ್ಕೂ ಹೆಚ್ಚು ಹೊಸ ಲಾಸ್ಟ್-ಮೈಲ್ ಡೆಲಿವರಿ ಸ್ಟೇಷನ್‌ಗಳನ್ನು ಅಮೆಜಾನ್ ಆರಂಭಿಸಲಿದೆ. ಇದರಿಂದ ಸಣ್ಣ ನಗರಗಳಿಗೂ ಕೆಲವೇ ನಿಮಿಷ ಅಥವಾ ಗಂಟೆಗಳಲ್ಲಿ ಡೆಲಿವರಿ ಸಾಧ್ಯವಾಗಲಿದೆ.

ಮುಂಬೈ, ಹೈದರಾಬಾದ್‌ನಲ್ಲಿ AWS ಡೇಟಾ ಸೆಂಟರ್ ವಿಸ್ತರಣೆ

ಅಮೆಜಾನ್‌ನ ಕ್ಲೌಡ್ ವಿಭಾಗವಾದ AWS (Amazon Web Services) ತನ್ನ ಮುಂಬೈ ಮತ್ತು ಹೈದರಾಬಾದ್ ರೀಜನ್‌ಗಳ ಡೇಟಾ ಸೆಂಟರ್ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇದು ಭಾರತೀಯ ಸ್ಟಾರ್ಟ್‌ಅಪ್‌ಗಳು, ದೊಡ್ಡ ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅಮೆಜಾನ್‌ನ ಅತ್ಯಾಧುನಿಕ ಎಐ ಚಿಪ್ಸ್ (Trainium Chips) ಹಾಗೂ ‘ಅಮೆಜಾನ್ ಬೆಡ್‌ರಾಕ್’ (Amazon Bedrock) ನಂತಹ ಮುಂಚೂಣಿಯ ತಂತ್ರಜ್ಞಾನಗಳನ್ನು ಭಾರತದಲ್ಲೇ ಸುರಕ್ಷಿತವಾಗಿ ಬಳಸಲು ನೆರವಾಗಲಿದೆ. ಪ್ರಸ್ತುತ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಗೌರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM), ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಫಿಸಿಕ್ಸ್ ವಾಲಾದಂತಹ ನೂರಾರು ಸಂಸ್ಥೆಗಳು AWS ಕ್ಲೌಡ್ ಬಳಸುತ್ತಿವೆ.

ಡೆಲಿವರಿ ಸಿಬ್ಬಂದಿಗಾಗಿ ‘ಸಮ್ಮಾನ್’ ಯೋಜನೆ

ತನ್ನ ಸರಬರಾಜು ಜಾಲದ ಬೆನ್ನೆಲುಬಾಗಿರುವ ಹತ್ತಾರು ಸಾವಿರ ಡೆಲಿವರಿ ಸಿಬ್ಬಂದಿಯ (Delivery Associates) ಕಲ್ಯಾಣಕ್ಕಾಗಿ ಅಮೆಜಾನ್ ಇಂಡಿಯಾ ‘ಸಮ್ಮಾನ್’ (Sammaan) ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಿದೆ.

ಇದರ ಅಡಿಯಲ್ಲಿ ಡೆಲಿವರಿ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ (Scholarships) ನೀಡಲಾಗುತ್ತದೆ. ಸರ್ಕಾರಿ ಸೌಲಭ್ಯಗಳು ಮತ್ತು ವಿಮಾ ಯೋಜನೆಯ (Insurance) ಸೌಲಭ್ಯ ಒದಗಿಸಲಾಗುತ್ತದೆ. ರಸ್ತೆ ಸುರಕ್ಷತಾ ಕ್ರಮಗಳ ಜೊತೆಗೆ, ಯಾವುದೇ ಕಂಪನಿಯ ಡೆಲಿವರಿ ಸಿಬ್ಬಂದಿಯೂ ಬಳಸಬಹುದಾದ ‘ಆಶ್ರಯ್’ (Ashray) ವಿಶ್ರಾಂತಿ ಕೇಂದ್ರಗಳ ಸಂಖ್ಯೆಯನ್ನು ಈ ವರ್ಷ 250ಕ್ಕೆ ವಿಸ್ತರಿಸಲಾಗುವುದು.

ಪ್ರಧಾನಿ ಮೋದಿ ವಿಷನ್‌ಗೆ ಆಂಡಿ ಜಸ್ಸಿ ಪ್ರಶಂಸೆ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆಜಾನ್ ಸಿಇಒ ಆಂಡಿ ಜಸ್ಸಿ ಶ್ಲಾಘಿಸಿದ್ದಾರೆ. “ನಾವು ಒಂದು ದಶಕದ ಹಿಂದೆ ಭಾರತಕ್ಕೆ ಬಂದೆವು. ಪ್ರಧಾನಿ ಮೋದಿ ಅವರ ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ದ ದೂರದೃಷ್ಟಿಯಿಂದ ನಾವು ಪ್ರೇರಿತರಾಗಿದ್ದೇವೆ. ಮುಂದಿನ 5 ವರ್ಷಗಳಲ್ಲಿ ನಾವು ಹೂಡಿಕೆ ಮಾಡುತ್ತಿರುವ $48 ಬಿಲಿಯನ್ ಹಣವು ಭಾರತದ ಸಣ್ಣ ಉದ್ಯಮಗಳ ಡಿಜಿಟಲೀಕರಣ, ಉದ್ಯೋಗ ಸೃಷ್ಟಿ ಮತ್ತು ರಫ್ತು ಹೆಚ್ಚಿಸುವ ಗುರಿಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ. ಭಾರತದ ಬೆಳವಣಿಗೆಯ ಪಯಣದಲ್ಲಿ ನಾವು ದೀರ್ಘಾವಧಿಯ ಪಾಲುದಾರರಾಗಲು ಬದ್ಧರಾಗಿದ್ದೇವೆ,” ಎಂದಿದ್ದಾರೆ.

ಇದನ್ನೂ ಓದಿ: ಜೊನ್ನಗಿರಿಯಲ್ಲ, ಸ್ವರ್ಣಗಿರಿ; ಆಂಧ್ರದಲ್ಲಿ ದೇಶದ ಮೊದಲ ಖಾಸಗಿ ಚಿನ್ನದ ಗಣಿ ಕಾರ್ಯಾರಂಭ; ಈ ಕುರಿತು ತಿಳಿಯಬೇಕಾದ ಪ್ರಮುಖ ಸಂಗತಿಗಳು

ಭಾರತದಲ್ಲಿ ಅಮೇಜಾನ್ ಗ್ರಾಹಕರು ಮತ್ತು ಮಾರಾಟಗಾರರ ಸಂಖ್ಯೆ ಹೆಚ್ಚಳ

ಪ್ರಸ್ತುತ ಭಾರತದಲ್ಲಿ ಅಮೆಜಾನ್ 10 ಕೋಟಿಗೂ ಹೆಚ್ಚು ಗ್ರಾಹಕರು ಮತ್ತು 17 ಲಕ್ಷಕ್ಕೂ ಹೆಚ್ಚು ಮಾರಾಟಗಾರರನ್ನು ಹೊಂದಿದೆ. ವಿಶೇಷವೆಂದರೆ, ಅಮೆಜಾನ್‌ಗೆ ಬರುವ ಹೊಸ ಗ್ರಾಹಕರಲ್ಲಿ ಶೇ. 85 ರಷ್ಟು ಮಂದಿ ಮತ್ತು ಒಟ್ಟು ಆರ್ಡರ್‌ಗಳಲ್ಲಿ ಶೇ. 65 ಕ್ಕೂ ಹೆಚ್ಚು ಆರ್ಡರ್‌ಗಳು ದೇಶದ ದ್ವಿತೀಯ ಮತ್ತು ತೃತೀಯ ದರ್ಜೆಯ (Tier 2 & 3) ನಗರಗಳಿಂದ ಬರುತ್ತಿವೆ.

ಭಾರತದಲ್ಲಿ ಅಮೆಜಾನ್ ಪ್ರೈಮ್ (Amazon Prime) ಚಂದಾದಾರರ ಸಂಖ್ಯೆ ಈ ವರ್ಷ (2023ಕ್ಕೆ ಹೋಲಿಸಿದರೆ) ದುಪ್ಪಟ್ಟಾಗುವ ನಿರೀಕ್ಷೆಯಿದೆ. ಇದರಲ್ಲಿ ಶೇ. 70 ಕ್ಕಿಂತ ಹೆಚ್ಚು ಹೊಸ ಪ್ರೈಮ್ ಸದಸ್ಯರು ಮೆಟ್ರೋ ಅಲ್ಲದ ನಗರಗಳಿಂದ ಸೇರ್ಪಡೆಯಾಗುತ್ತಿದ್ದಾರೆ.

ಇತ್ತೀಚಿನ ‘ಅಮೆಜಾನ್ ಎಂಎಕ್ಸ್ ಪ್ಲೇಯರ್’ (Amazon MX Player) ಮತ್ತು ಪ್ರೈಮ್ ವಿಡಿಯೋ ವಿಲೀನದ ನಂತರ, ಇದು ಭಾರತದ ಅತ್ಯಂತ ದೊಡ್ಡ ಒಟಿಟಿ ಸ್ಟ್ರೀಮಿಂಗ್ ಸೇವೆಯಾಗಿ ಮುಂಚೂಣಿಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *