ಬೆಂಗಳೂರು, ಜೂನ್ 25: ಡಿಜಿಟಲ್ ಕ್ರಿಪ್ಟೋ ಕರೆನ್ಸಿ (Digital cryptocurrency) ಪರಿವರ್ತನೆ ಹೆಸರಲ್ಲಿ 17.64 ಲಕ್ಷ ರೂ. ದರೋಡೆ (robbery) ಪ್ರಕರಣದಲ್ಲಿ ಇಬ್ಬರು ಕಾಶ್ಮೀರ ಪ್ರಜೆಗಳು ಸೇರಿದಂತೆ 12 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ 13.90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, 1 ಕಾರು ಹಾಗೂ 13 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರು
ಮುಜಾಮಿಲ್(23), ಶೋಯೆಬ್(20), ಕರೀಂ(31), ವಾಸೀಂ(40), ಮೊಹಮ್ಮದ್ ಇಸ್ಮೈಲ್(29), ರೆಹಾನ್(27), ಆಯನ್(21), ಅಖಿಲ್ ಮೊಹಮ್ಮದ್(26), ತೌಸಿಫ್(32) ಲಿಯಾಕತ್ ಶರೀಫ್(33), ಅಫ್ಜಲ್ ಖಾನ್(27), ಇಮ್ರಾನ್ ಪಾಷಾ(40) ಬಂಧಿತರು. ಕಾಶ್ಮೀರ ಮೂಲದ ಮುಜಾಮಿಲ್, ಶೋಯೆಬ್ ಜಾವೇದ್ ಬಿಬಿಎ ಓದಲು ಬೆಂಗಳೂರಿಗೆ ಬಂದಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಕ್ರಿಪ್ಟೋ ಕರೆನ್ಸಿ ವಾಟ್ಸಾಪ್ನಲ್ಲಿ ಸದಸ್ಯರಾಗಿದ್ದರು. ಈ ವೇಳೆ ಸ್ಥಳೀಯ ಆರೋಪಿಗಳನ್ನ ಮುಜಾಮಿಲ್ ಪರಿಚಯ ಮಾಡಿಕೊಂಡಿದ್ದ.
ಇದನ್ನೂ ಓದಿ: ಪೆಟ್ರೋಲ್ ಬಂಕ್ ಸಂಬಳ ಸಾಕಾಗದೆ ಬೈಕ್ ಕಳ್ಳನಾದ ಭೂಪ! 42 ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ನೀಡಿದ ವಿಜಯಪುರ ಪೊಲೀಸರು
ಇನ್ನು ಆರೋಪಿ ವಸೀಂಖಾನ್ ರೌಡಿ ಚಟುವಟಿಕೆಗಳ ಹಿನ್ನೆಲೆಯುಳ್ಳವನು. ಈತನ ವಿರುದ್ಧ ಇದುವರೆಗೆ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಲಿಯಾಕತ್ ಶರೀಫ್, ರಿಯಾನ್, ಕರೀಂ ಖಾನ್ ವಿರುದ್ಧವೂ ಹಲವು ಪ್ರಕರಣಗಳಿವೆ.
ನಡೆದಿದ್ದೇನು?
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್, ಕಾಫಿ ಶಾಪ್ ಆರಂಭಿಸಲು ತಯಾರಿ ನಡೆಸಿದ್ದರು. ಈ ಸಂಬಂಧ ಕಿಚನ್ ವಸ್ತುಗಳನ್ನ ಹುಡುಕಾಡುತ್ತಿದ್ದರು. ಈ ವಸ್ತುಗಳು ಚೀನಾ, ಜಪಾನ್ನಲ್ಲಿ ಖರೀದಿಸಲು ಮುಂದಾಗಿದ್ದರು. ಇದಕ್ಕೆ ಕ್ರಿಪ್ಟೋ ಮೂಲಕ ಹಣ ಸಂದಾಯ ಮಾಡಬೇಕಿತ್ತು. ಇದಕ್ಕಾಗಿ ಒಂದು ತಿಂಗಳ ಹಿಂದೆ ಕ್ರಿಪ್ಟೋ ಇಂಡಿಯಾ ಎಫ್2ಎಫ್ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿದ್ದರು.
ಕ್ರಿಪ್ಟೋ ಕರೆನ್ಸಿ ಎಕ್ಸ್ಚೇಂಜ್ ಬಗ್ಗೆ ಗ್ರೂಪ್ನಲ್ಲಿ ವಿಚಾರಿಸಿದ್ದರು. ಜೂ.8ರಂದು ಪ್ರಮುಖ ಆರೋಪಿ ಮುಜಾಮೀಲ್ ವಿಶ್ವಾಸ್ಗೆ ಕರೆ ಮಾಡಿದ್ದಾರೆ. ಭಾರತೀಯ ರೂಪಾಯಿಯನ್ನ ಕ್ರಿಪ್ಟೋ ಆಗಿ ಕನ್ವರ್ಟ್ ಮಾಡುವುದಾಗಿ ಹೇಳಿದ್ದ. ನಂಬಿಕೆ ಹುಟ್ಟಿಸಲು ಮೊದಲು ಮನೆಗೆ ಬಂದಿದ್ದ ಆರೋಪಿ ಮುಜಾಮಿಲ್, 2.5 ಲಕ್ಷ ರೂ ಹಣವನ್ನ ಕ್ರಿಪ್ಟೋ ಕರೆನ್ಸಿಯಾಗಿ ವರ್ಗಾವಣೆ ಮಾಡಿದ್ದನಂತೆ. ಜೂನ್ 9ರ ಮಧ್ಯಾಹ್ನ ವಾಟ್ಸಾಪ್ ಕರೆ ಮಾಡಿದ ಆರೋಪಿ ಮುಜಾಮಿಲ್, ಹೆಚ್ಚುವರಿ ಯುಎಸ್ಡಿಟಿ ಎಕ್ಸ್ಚೇಂಜ್ ಮಾಡಬೇಕಿದ್ದರೆ ತಿಳಿಸುವಂತೆ ಹೇಳಿದ್ದ.
ಹಲ್ಲೆ ಮಾಡಿ ಲಕ್ಷಾಂತರ ರೂ ದರೋಡೆ
ದೂರುದಾರರಿಗೆ ಕ್ರಿಪ್ಟೋ ರೂಪದಲ್ಲಿ ಹಣದ ಅಗತ್ಯವಾಗಿತ್ತು. 17.64 ಲಕ್ಷ ರೂ ಹಣವನ್ನ ಪರಿವರ್ತಿಸಲು ಮುಂದಾಗಿದ್ದರು. ಹಣದೊಂದಿಗೆ ಸಂಜಯನಗರ ಕಲ್ಪನಾ ಚಾವ್ಲಾ ರಸ್ತೆಗೆ ಬರಲು ಆರೋಪಿ ಸೂಚಿಸಿದ್ದ. ಕಾರಿನಲ್ಲಿ 10 ಲಕ್ಷ ರೂ ಇಟ್ಟುಕೊಂಡು ಸ್ನೇಹಿತ, ಸಹೋದರನ ಜೊತೆ ಬಂದಿದ್ದ ವಿಶ್ವಾಸ್, ಈ ವೇಳೆ ಆರೋಪಿ ಮುಜಾಮಿಲ್ ಕೂಡ ಆಗಮಿಸಿದ್ದಾನೆ. ಕೆಲವೇ ಹೊತ್ತಿನಲ್ಲಿ ಐದಾರು ಬೈಕ್ನಲ್ಲಿ 13 ಆರೋಪಿಗಳು ಎಂಟ್ರಿ ಕೊಟ್ಟಿದ್ದಾರೆ. ವಿಶ್ವಾಸ್ ಮೇಲೆ ಹಲ್ಲೆ ಮಾಡಿ, ಬಳಿಕ ಹಣ ಎಗರಿಸಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಅಂಗಡಿ ಗೋಡೆ ಕೊರೆದು 10 ಕೆಜಿ ಬೆಳ್ಳಿ ಕಳ್ಳತನ ಕೇಸ್: ಯುವಕ ಅರೆಸ್ಟ್, 5 ಕೆಜಿ ಸಿಲ್ವರ್ ಜಪ್ತಿ
ಇನ್ನು ವಿಶ್ವಾಸ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಸಂಜಯನಗರ ಪೊಲೀಸರು, ಸಂಜಯನಗರ, ಜೆ.ಸಿ.ನಗರ, ಆರ್.ಟಿ.ನಗರ, ಹೆಬ್ಬಾಳ ಇನ್ಸ್ಪೆಕ್ಟರ್ ಒಳಗೊಂಡ ವಿಶೇಷ ತಂಡದಿಂದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ವಾಟ್ಸಾಪ್ ಗ್ರೂಪ್ ಹಾಗೂ ದೂರುದಾರರ ಹಣದ ಹಿನ್ನೆಲೆ ಪರಿಶೀಲಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.