ಶಿವಮೊಗ್ಗ, ಜೂನ್ 26: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಬಳಿ ಇರುವ ಪ್ರಸಿದ್ಧ ಶರಾವತಿ ಜಲವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಗುರುವಾರ ನಿರ್ವಹಣಾ ಕಾರ್ಯದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಿಂಗನಮಕ್ಕಿ ಜಲಾಶಯದ ವ್ಯಾಪ್ತಿಗೆ ಬರುವ ಈ ವಿದ್ಯುದಾಗಾರದ 7ನೇ ಘಟಕದಲ್ಲಿ ನಿಯಮಿತ ದುರಸ್ತಿ ಕಾರ್ಯ ಪ್ರಗತಿಯಲ್ಲಿತ್ತು. ಈ ವೇಳೆ ಪೈಪ್ನಲ್ಲಿದ್ದ ನೀರನ್ನು ಖಾಲಿ ಮಾಡುವಾಗ ಬೃಹತ್ ಗಾತ್ರದ ಪೆನ್ಸ್ಟಾಕ್ ಪೈಪ್ಗಳ ಡ್ರೈನ್ ವಾಲ್ವ್ನಲ್ಲಿ (Drain Valve) ಇದ್ದಕ್ಕಿದ್ದಂತೆ ಲೀಕೇಜ್ ಉಂಟಾಗಿ ಭಾರಿ ಪ್ರಮಾಣದ ನೀರು ಒಳಗೆ ನುಗ್ಗಿದೆ.
ಡ್ರೈನ್ ವಾಲ್ವ್ ಲೀಕೇಜ್ ಆದ ಪರಿಣಾಮವಾಗಿ ಇಡೀ ಟರ್ಬೈನ್ ಮತ್ತು ನೆಲಮಾಳಿಗೆಯ (Basement) ಸುತ್ತಮುತ್ತ ಸುಮಾರು ಒಂದೂವರೆ ಅಡಿಯಷ್ಟು ನೀರು ಶೇಖರಣೆಯಾಗಿತ್ತು. ಏಕಾಏಕಿ ನೀರು ನುಗ್ಗಿದ್ದರಿಂದ ಇಡೀ ಪ್ಲಾಂಟ್ನಲ್ಲಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸುರಕ್ಷತಾ ಸಿಬ್ಬಂದಿ ಮತ್ತು ಅಧಿಕಾರಿಗಳು, ಇಡೀ ವಿದ್ಯುದಾಗಾರದ ಸುರಕ್ಷತೆಯ ದೃಷ್ಟಿಯಿಂದ ಚಾಲನೆಯಲ್ಲಿದ್ದ ಘಟಕ 1, 8 ಮತ್ತು 9ರ ವಿದ್ಯುತ್ ಉತ್ಪಾದನೆಯನ್ನು ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ಹಂತ ಹಂತವಾಗಿ ಪುನರಾರಂಭಗೊಂಡ ವಿದ್ಯುತ್ ಉತ್ಪಾದನೆ
ಘಟನೆ ತಿಳಿಯುತ್ತಿದ್ದಂತೆಯೇ ಕೆಪಿಸಿಎಲ್ (KPCL) ಹಿರಿಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ತಂಡ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಕಾರ್ಯಾಚರಣೆ ನಡೆಸಿತು. ಯಶಸ್ವಿ ಕಾರ್ಯಾಚರಣೆಯ ಮೂಲಕ ನೀರಿನ ಹರಿವನ್ನು ತಡೆಗಟ್ಟಿದ ಅಧಿಕಾರಿಗಳು, ಕೆಲವೇ ನಿಮಿಷಗಳಲ್ಲಿ ನೆಲಮಾಳಿಗೆಯಲ್ಲಿ ಶೇಖರಣೆಯಾಗಿದ್ದ ನೀರನ್ನು ಪಂಪ್ಗಳ ಮೂಲಕ ಸಂಪೂರ್ಣವಾಗಿ ಖಾಲಿ ಮಾಡಿದರು. ಬಳಿಕ ಇಡೀ ಜಲವಿದ್ಯುದಾಗಾರದ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಯಾವುದೇ ದೊಡ್ಡ ಮಟ್ಟದ ಹಾನಿ ಸಂಭವಿಸದ ಕಾರಣ, ನಿನ್ನೆ ಸಂಜೆ ವೇಳೆಗೆ ಹಂತ ಹಂತವಾಗಿ ಸ್ಥಗಿತಗೊಂಡಿದ್ದ ಎಲ್ಲಾ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಯಶಸ್ವಿಯಾಗಿ ಪುನರಾರಂಭಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ