ತಮ್ಮ ಇತ್ತೀಚಿನ ಸೈಕಲಾಜಿಕಲ್ ಹಾರರ್ ಹಿಟ್ ಸಿನಿಮಾ ‘ಅಬ್ಸೆಷನ್’ (Obsession) ಮೂಲಕ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡಿರುವ 26 ವರ್ಷದ ಪ್ರತಿಭಾವಂತ ಹಾಲಿವುಡ್ ನಿರ್ದೇಶಕ ಕರಿ ಬಾರ್ಕರ್ (Curry Barker) ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಕರಿ ಬಾರ್ಕರ್ ಅವರ ಇನ್ಸ್ಟಾಗ್ರಾಮ್ ಫಾಲೋಯಿಂಗ್ ಲಿಸ್ಟ್ ಗಮನಿಸಿದರೆ, ಅವರಿಗೆ ಭಾರತದ ಚಿತ್ರರಂಗದೊಂದಿಗೆ ಇರುವ ಒಂದು ವಿಶೇಷ ನಂಟಿನ ಬಗ್ಗೆ ಗೊತ್ತಾಗಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಕೇವಲ ಮೂವರು ಭಾರತೀಯ ಸೆಲೆಬ್ರಿಟಿಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅವರಲ್ಲಿ ಇಬ್ಬರು ನಟರಾದರೆ, ಮತ್ತೊಬ್ಬರು ಸಿನಿಮಾ ನಿರ್ದೇಶಕರಾಗಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್:
ಹಿಂದಿ ಚಿತ್ರರಂಗದ ಖ್ಯಾತ ನಟ ಕಾರ್ತಿಕ್ ಆರ್ಯನ್ ಅವರನ್ನು ಕರಿ ಬಾರ್ಕರ್ ಫಾಲೋ ಮಾಡುತ್ತಿರುವುದು ಅಷ್ಟೇನೂ ಆಶ್ಚರ್ಯ ತಂದಿಲ್ಲ. ಏಕೆಂದರೆ, ಕರಿ ಬಾರ್ಕರ್ ಅವರ ‘ಅಬ್ಸೆಷನ್’ ಸಿನಿಮಾ ಬಿಡುಗಡೆಯಾದಾಗ ಬಾಲಿವುಡ್ನಿಂದ ಅದಕ್ಕೆ ಮೊದಲ ಬಾರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು ಇದೇ ಕಾರ್ತಿಕ್ ಆರ್ಯನ್. ಈ ಚಿತ್ರದ ಬಗ್ಗೆ ಇಂಟರ್ನೆಟ್ನಲ್ಲಿ ತಮಗಿರುವ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದ ಕಾರ್ತಿಕ್, ‘ಬಹಳ ದಿನಗಳ ನಂತರ ಬಂದ ಅತ್ಯುತ್ತಮ ಹಾರರ್ ಚಿತ್ರಗಳಲ್ಲಿ ಇದು ಒಂದು. ನಾನು ನಿಜಕ್ಕೂ ‘ಅಬ್ಸೆಷನ್’ ಚಿತ್ರಕ್ಕೆ ಫಿದಾ ಆಗಿದ್ದೇನೆ. ಯಾರೂ ಇದನ್ನು ಮಿಸ್ ಮಾಡಬೇಡಿ’ ಎಂದು ಬರೆದುಕೊಂಡಿದ್ದರು.
ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ:
ಲಕ್ನೋ ಮೂಲದ ಉದಯೋನ್ಮುಖ ನಟಿ ರಿಚ್ಚಾ ಸಿನ್ಹಾ ಅವರು ಕರಿ ಬಾರ್ಕರ್ ಫಾಲೋ ಮಾಡುತ್ತಿರುವ ಎರಡನೇ ಭಾರತೀಯ ನಟಿ. ರಿಚ್ಚಾ ಅವರು ಸದ್ಯ ಬ್ರಿಟಿಷ್ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದರಲ್ಲಿ ಅನ್ಯಾ ಎಂಬ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸಿದ್ಧ ಪೈನ್ವುಡ್ ಸ್ಟುಡಿಯೋಸ್ನಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು, ಹೊಸ ದೇಶಕ್ಕೆ ತೆರಳುವ ಯುವತಿಯೊಬ್ಬಳು ಅಲ್ಲಿ ಎದುರಿಸುವ ಭಾವುಕ ಹಾಗೂ ರೋಮಾಂಚನಕಾರಿ ಸನ್ನಿವೇಶಗಳ ಸುತ್ತ ಸಾಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಸೂಪರ್ ಹಿಟ್ ಆದ ಹಾಲಿವುಡ್ ಸಿನಿಮಾ ‘ಅಬ್ಸೆಷನ್’ ಒಟಿಟಿಗೆ ಬರೋದು ಯಾವಾಗ?
ಯುವ ನಿರ್ದೇಶಕ ಕುಶಾಲ್ ಚಾವ್ಲಾ:
ಕರಿ ಬಾರ್ಕರ್ ಲಿಸ್ಟ್ನಲ್ಲಿರುವ ಮೂರನೇ ಭಾರತೀಯ ಅಂದರೆ ಅದು ನಿರ್ದೇಶಕ ಕುಶಾಲ್ ಚಾವ್ಲಾ. ಅಂತಾರಾಷ್ಟ್ರೀಯ ಶಾರ್ಟ್ ಫಿಲ್ಮ್ ಮತ್ತು ಇಂಡಿ ಸಿನಿಮಾ ವಲಯದಲ್ಲಿ ಕುಶಾಲ್ ದೊಡ್ಡ ಹೆಸರು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ನಿರ್ದೇಶಿಸಿದ ‘ಅನದರ್ ಟೈಮ್’ ಸಿನಿಮಾ ಲಾಸ್ ಏಂಜಲೀಸ್ನ ಪ್ರಖ್ಯಾತ ವಾರ್ನರ್ ಬ್ರದರ್ಸ್ ಸ್ಟುಡಿಯೋಸ್ನಲ್ಲಿ ಪ್ರೀಮಿಯರ್ ಆಗುವ ಮೂಲಕ ದೊಡ್ಡ ಮೈಲಿಗಲ್ಲು ಸ್ಥಾಪಿಸಿತ್ತು. ಈ ಚಿತ್ರವು ನ್ಯೂಯಾರ್ಕ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ನಲ್ಲಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸೇರಿದಂತೆ ಜಾಗತಿಕವಾಗಿ 15ಕ್ಕೂ ಹೆಚ್ಚು ಗೌರವಗಳನ್ನು ಮುಡಿಗೇರಿಸಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.