ಬೆಂಗಳೂರು, (ಜೂನ್ 26): ಬೆಂಗಳೂರಿನ ಮೈಸೂರು ರಸ್ತೆ ಹಾಗೂ ಮಾಗಡಿ ರಸ್ತೆಯನ್ನು ಬೆಸೆಯುವ ಬಿಡಿಎಯ 10 ಪಥಗಳ ‘ಮೇಜರ್ ಆರ್ಟೀರಿಯಲ್ ರಸ್ತೆ’ (ಎಂಎಆರ್) ನಾಳೆ ಅಂದರೆ ಜೂನ್ 27ರಂದು ಲೋಕಾರ್ಪಣೆಯಾಗಲಿದೆ. ಮಾಜಿ ಸಿಎಂ ‘ಎಸ್.ಎಂ.ಕೃಷ್ಣ ರಸ್ತೆ’ ಎಂದು ನಾಮಕರಣಗೊಂಡಿರುವ ಈ ಟೋಲ್-ಮುಕ್ತ ಮಾರ್ಗವು, ಸಂಚಾರ ಸಮಯವನ್ನು ಕೇವಲ 15 ನಿಮಿಷಗಳಿಗೆ ತಗ್ಗಿಸಲಿದೆ. ನೈಸ್ ರಸ್ತೆಗೆ ಪರ್ಯಾಯವಾಗಿರುವ ಈ ರಸ್ತೆಯು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜೊತೆಗೆ, ಕೆಂಪೇಗೌಡ ಬಡಾವಣೆಯ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸುವ ವಾಹನಗಳು ಪ್ರಸ್ತುತ ನೈಸ್ ರಸ್ತೆ ಅಥವಾ ನಾಯಂಡಹಳ್ಳಿ -ಸುಮನಹಳ್ಳಿ ಜಂಕ್ಷನ್ ಮುಖಾಂತರ ಚಲಿಸಬೇಕಾಗಿದ್ದು, ಈ ಮಾರ್ಗದ ವಾಹನ ಸಂಚಾರ ಅವಧಿ 60 ನಿಮಿಷಗಳಷ್ಟಿತ್ತು. ಇದೀಗ ಎಸ್.ಎಂ.ಕೃಷ್ಣ ರಸ್ತೆ ಸಂಚಾರಮುಕ್ತವಾದ ಬಳಿಕ ಆ ಅವಧಿ 15 ನಿಮಿಷಗಳಿಗೆ ತಗ್ಗಲಿದೆ. ಇನ್ನು ನಾಳೆ ಉದ್ಘಾಟನೆಯಾಗುತ್ತಿರುವುದರಿಂದ ರಸ್ತೆ ಲೈಟಿಂಗ್ಸ್ನಿಂದ ಜಗಮಗಿಸುತ್ತಿದೆ.