ಬೆಂಗಳೂರು, ಜೂನ್ 27: ಇನ್ಮುಂದೆ ಪ್ರತಿ ವರ್ಷ ಬೆಂಗಳೂರಿನ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟ್ರಂಪೆಟ್ ಸರ್ಕಲ್ ಬಳಿ ಕೆಂಪೇಗೌಡರ ಗುರುತನ್ನು ಪ್ರತಿಬಿಂಬಿಸುವ ಮತ್ತೊಂದು ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಕೆಂಪೇಗೌಡ ಜಯಂತಿಯನ್ನು ವಿಧಾನಸೌಧ ಅಥವಾ ಫ್ರೀಡಂ ಪಾರ್ಕ್‌ಗೆ ಸೀಮಿತಗೊಳಿಸದೆ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ವರ್ಷಕ್ಕೊಂದು ಕ್ಷೇತ್ರದ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ವರ್ಷ ಯಶವಂತಪುರ ಕ್ಷೇತ್ರದ ಕೆಂಪೇಗೌಡ ಲೇಔಟ್‌ನಲ್ಲಿ ಜಯಂತಿ ಆಚರಣೆ ಪ್ರಾರಂಭವಾಗಿದ್ದು, ಮುಂದಿನ 28 ವರ್ಷಗಳ ಕಾಲ ಬೇರೆ ಬೇರೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ. ಜಿಬಿಎ ವತಿಯಿಂದ ಇದಕ್ಕೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ಕೆಂಪೇಗೌಡ ಜಯಂತಿಯನ್ನು ಆಚರಿಸಲು ಸರ್ಕಾರ ನಿರ್ಧರಿಸಿದೆ. ಕೆಂಪೇಗೌಡರ ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಬೆಂಗಳೂರಿಗೆ ಹೊಸ ರೂಪ ನೀಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ