Headlines

ಒಂದೇ ನಂಬರ್ ಪ್ಲೇಟ್, ಎರಡು ಬಸ್! ಬೆಂಗಳೂರು ಪೊಲೀಸರ ಕಣ್ಣಿಗೆ ಮಣ್ಣೆರಚಲು ಹೋಗಿ ಲಾಕ್ ಆದ ಖದೀಮರು – Kannada News | Bengaluru Vehicle Registration Fraud: Two Arrested, 12 Minibuses Seized with Identical Number Plates

ಬೆಂಗಳೂರು ಪೊಲೀಸರ ಕಣ್ಣಿಗೆ ಮಣ್ಣೆರಚಲು ಹೋಗಿ ಲಾಕ್ ಆದ ಖದೀಮರು!

ಬೆಂಗಳೂರು, ಜೂನ್ 28: ನಗರದಲ್ಲಿ (Bengaluru) ನಡೆಯುತ್ತಿದ್ದ ಭಾರಿ ವಾಹನ ನೋಂದಣಿ ವಂಚನೆ ಜಾಲವೊಂದು ಬಯಲಾಗಿದೆ. ಒಂದೇ ನೋಂದಣಿ ಸಂಖ್ಯೆ ಹೊಂದಿದ್ದ ಎರಡು ಸ್ವರಾಜ್ ಮಜ್ದಾ ಮಿನಿಬಸ್‌ಗಳು ರಸ್ತೆಯಲ್ಲಿ ಚಲಿಸುತ್ತಿರುವುದನ್ನು ಗಮನಿಸಿದ ಪೊಲೀಸರು, ಈ ವಂಚನೆ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 12 ಮಿನಿಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ಸರ್ಕಾರಕ್ಕೆ ಪಾವತಿಸಬೇಕಾದ ರಸ್ತೆ ತೆರಿಗೆ (Road Tax) ಮತ್ತು ಇತರ ಶುಲ್ಕಗಳನ್ನು ವಂಚಿಸುವ ಉದ್ದೇಶದಿಂದ ಆರೋಪಿಗಳು ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಎಲೆಕ್ಟ್ರಾನಿಕ್ಸ್ ಸಿಟಿಯ ಸುಭಾಷ್‌ನಗರ ನಿವಾಸಿ ಸೈಯದ್ ನಜೀರ್ (40) ಮತ್ತು ತಮಿಳುನಾಡು ಮೂಲದ, ಪ್ರಸ್ತುತ ಆನೇಕಲ್‌ನಲ್ಲಿ ನೆಲೆಸಿರುವ ಸಾರಿಗೆ ಆಪರೇಟರ್ ನಾಗರಾಜ್ (52) ಎಂದು ಗುರುತಿಸಲಾಗಿದೆ.

ಪೊಲೀಸರ ಕೈಗೆ ಸಿಕ್ಕಿಬಿದ್ದದ್ದು ಹೇಗೆ?

ಜೂನ್ 23 ರಂದು ಹೆಡ್ ಕಾನ್‌ಸ್ಟೆಬಲ್ ಕೇದಾರಲಿಂಗ ತಾಂಬೆ ಮತ್ತು ಕಾನ್‌ಸ್ಟೆಬಲ್ ಕೇಶವಮೂರ್ತಿ ಅವರು ಮಣಿಪಾಲ್ ಕೌಂಟಿ ರಸ್ತೆಯಲ್ಲಿ ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸ್ವರಾಜ್ ಮಜ್ದಾ ಮಿನಿಬಸ್ ಅವರ ಮೋಟರ್‌ಸೈಕಲ್ ಅನ್ನು ಓವರ್‌ಟೇಕ್ ಮಾಡಿತು. ಅದರ ನಂಬರ್ ಪ್ಲೇಟ್ KA-51-B-5959 ಆಗಿರುವುದನ್ನು ತಾಂಬೆ ಗಮನಿಸಿದ್ದರು. ಆದರೆ, ಕೇವಲ ಒಂದು ನಿಮಿಷದ ನಂತರ ಅದೇ ಮಾದರಿಯ ಮತ್ತೊಂದು ಮಿನಿಬಸ್ ಅದೇ ನಂಬರ್ ಪ್ಲೇಟ್ ಧರಿಸಿ ವೇಗವಾಗಿ ಹಾದುಹೋಯಿತು.

ಇದರಿಂದ ಆಶ್ಚರ್ಯಚಕಿತರಾದ ಪೊಲೀಸರು ತಕ್ಷಣವೇ ಆ ವಾಹನಗಳನ್ನು ಬೆನ್ನಟ್ಟಿ, ಬೇಗೂರು ಕೆರೆ ರಸ್ತೆಯ ಬಳಿ ತಡೆದರು. ತನಿಖೆ ನಡೆಸಿದಾಗ ಎರಡೂ ವಾಹನಗಳು ಸೈಯದ್ ನಜೀರ್‌ಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ಆತ ಕೇವಲ ಒಂದು ವಾಹನಕ್ಕೆ ಮಾತ್ರ ತೆರಿಗೆ ಪಾವತಿಸಿ, ಅದೇ ನಂಬರ್ ಅನ್ನು ಮತ್ತೊಂದು ವಾಹನಕ್ಕೂ ಬಳಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.

ಗಾರ್ಮೆಂಟ್ಸ್ ನೌಕರರ ಸಾಗಣೆಗೆ ಬಳಕೆ

ಪೊಲೀಸ್ ಇನ್ಸ್‌ಪೆಕ್ಟರ್ ಅಜರುದ್ದೀನ್ ನೇತೃತ್ವದ ತಂಡವು ತನಿಖೆ ನಡೆಸಿದಾಗ ಭಾರಿ ವಂಚನೆ ಬಯಲಾಗಿದೆ. ಸೈಯದ್ ನಜೀರ್ ಹಳೆಯ ಸ್ಕ್ರಾಪ್ ವಾಹನಗಳನ್ನು ಖರೀದಿಸಿ, ಅವುಗಳನ್ನು ದುರಸ್ತಿ ಮಾಡಿ, ಮರುಬಣ್ಣ ಬಳಿಯುತ್ತಿದ್ದನು. ಮತ್ತೊಬ್ಬ ಆರೋಪಿ ನಾಗರಾಜ್, ಅಸಲಿ ಬಸ್‌ಗಳ ಮಾದರಿ ಮತ್ತು ನಂಬರ್‌ಗಳನ್ನು ನಜೀರ್‌ಗೆ ಒದಗಿಸುತ್ತಿದ್ದನು. ಈ ನಂಬರ್‌ಗಳನ್ನು ಬಳಸಿ ನಜೀರ್ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗಾರ್ಮೆಂಟ್ಸ್ ಕಾರ್ಖಾನೆಗಳ ನೌಕರರನ್ನು ಕರೆದೊಯ್ಯಲು ಈ ಮಿನಿಬಸ್‌ಗಳನ್ನು ಬಳಸುತ್ತಿದ್ದನು. ಪ್ರತಿ ನಕಲಿ ದಾಖಲೆ ಮತ್ತು ನಂಬರ್ ಒದಗಿಸಿದ್ದಕ್ಕೆ ನಾಗರಾಜ್ ಕಮಿಷನ್ ಪಡೆಯುತ್ತಿದ್ದನು.

ಈ ವಂಚನೆಯ ಮೂಲಕ ಆರೋಪಿಗಳು ರಸ್ತೆ ತೆರಿಗೆ, ನೋಂದಣಿ ಶುಲ್ಕ, ಪ್ರಯಾಣಿಕರ ವಾಹನ ತೆರಿಗೆ ಮತ್ತು ಫಿಟ್‌ನೆಸ್ ಪ್ರಮಾಣಪತ್ರ (FC) ಶುಲ್ಕಗಳನ್ನು ಸಂಪೂರ್ಣವಾಗಿ ವಂಚಿಸುತ್ತಿದ್ದರು. ಸದ್ಯ ಪೊಲೀಸರು ಸ್ವರಾಜ್ ಮಜ್ದಾ, ಮಹೀಂದ್ರಾ ಮತ್ತು ಐಷರ್ ಕಂಪನಿಯ 12 ಮಿನಿಬಸ್‌ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರ್‌ಟಿಒ (RTO) ಅಧಿಕಾರಿಗಳು ಇಂತಹ ವಂಚನೆಗಳ ಬಗ್ಗೆ ತೀವ್ರ ನಿಗಾ ವಹಿಸುವ ಅಗತ್ಯವಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *